ಬೆಳಗಾವಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವನ್ನು ದೇಶದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಒಂದನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಹಲವಾರು ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಕುಲಪತಿ ಪ್ರೊ.ಎಂ.ಎಸ್. ಸುಧೀಂದ್ರರಾವ್ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಲ್ಬರ್ಗಾದ ಕಡಗಂಚಿ ಗ್ರಾಮದಲ್ಲಿ ಸ್ಥಾಪನೆಯಾಗಿರುವ ವಿವಿ ಅತ್ಯಂತ ವಿನೂತನ ಮತ್ತು ವಿಶಿಷ್ಟವಾಗಿದೆ. ಪಠ್ಯಕ್ರಮ, ಶೈಕ್ಷಣಿಕ ಕಾರ್ಯಕ್ರಮ, ಬೋಧನಾಕ್ರಮ ಮತ್ತು ಮೌಲ್ಯಮಾಪನದ ದೃಷ್ಟಿಯಿಂದ ರಾಜ್ಯದಲ್ಲೇ ಈ ವಿವಿ ವಿನೂತನವಾಗಿದೆ ಎಂದರು. 654 ಎಕರೆ ಪ್ರದೇಶದಲ್ಲಿ ತಲೆ ಎತ್ತಿರುವ ಈ ವಿವಿ ನೇರವಾಗಿ ಯುನಿವರ್ಸಿಟಿ ಗ್ರಾಂಟ್ ಕಮಿಷನ್‌ನಿಂದ ಆರ್ಥಿಕ ಸಹಾಯ ಪಡೆಯುತ್ತಿದೆ. 2013ರ ನವೆಂಬರ್‌ನಲ್ಲಿ ನೂತನ ಕಾಂಪಸ್‌ಗೆ ಸ್ಥಳಾಂತರಗೊಂಡಿದೆ ಎಂದರು. ಈ ವಿವಿ ನಿಕಾಯ ಪದ್ಧತಿ ಹೊಂದಿದೆ. ಕ್ರೆಡಿಟ್ ಬೇಸ್ಡ್ ಚಾಯ್ಸ್ ಪದ್ಧತಿ ಅನುಸರಿಸುತ್ತಿದೆ. ಯಾವ ವಿದ್ಯಾರ್ಥಿಗೆ ಯಾವ ವಿಷಯದ ಮೇಲೆ ಆಸಕ್ತಿಯಿದೆಯೋ ಅವರು ಅದನ್ನು ಓದಬಹುದು. ಅಲ್ಲದೇ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ, ಹಾಸ್ಟೆಲ್ ಶುಲ್ಕ ಮತ್ತು ಮೆಸ್ ಬಿಲ್ ಪಾವತಿ ಮಾಡುವುದರಿಂದಲೂ ವಿನಾಯಿತಿ ಇದೆ ಎಂದರು.
ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ಹಾಗೂ ವಾರ್ಷಿಕ ಆರು ಲಕ್ಷ ರುಪಾಯಿಗೆ ಕಡಿಮೆ ಆದಾಯ ಹೊಂದಿರುವ ಪೋಷಕರ ಹೆಣ್ಣು ಮಕ್ಕಳಿಗೆ ಟ್ಯೂಷನ್ ಫೀ, ಹಾಸ್ಟೆಲ್ ರೂಂ ಶುಲ್ಕ ಪಾವತಿಸುವುದರಿಂದ ವಿನಾಯಿತಿ ಇದೆ. ಈ ಸೌಲಭ್ಯ ಪಡೆಯಲು ವಿದ್ಯಾರ್ಥಿನಿಯರು ಕೇಂದ್ರ ಸರ್ಕಾರದ ನಿಗದಿತ ನಮೂನೆಯಲ್ಲಿ ಆದಾಯ ಪ್ರಮಾಣ ಪತ್ರ ಸಂಬಂಧಿತ ಅಧಿಕೃತ ಸರ್ಕಾರಿ ಸಂಸ್ಥೆಯಿಂದ ಪಡೆದು, ವಿವಿಗೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ಸಲ್ಲಿಸಬೇಕು ಎಂದರು.
ರಸಾಯನ ವಿಜ್ಞಾನ ವಿಭಾಗ ಪ್ರಾರಂಭ: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಹೊಸದಾಗಿ ರಸಾಯನ ವಿಜ್ಞಾನ ವಿಭಾಗ ಪ್ರಾರಂಭಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಸಮುದಾಯ ಕಾಲೇಜು ಯೋಜನೆಯಡಿ ಹಲವಾರು ಪ್ರಮುಖ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ನಿರುದ್ಯೋಗಿಗಳಿಗೆ ಸ್ಕಿಲ್ ತರಬೇತಿ ನೀಡಲು ಒತ್ತು ನೀಡಲಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ನಡೆಸಿ ಪ್ರವೇಶ ನೀಡಲಾಗುತ್ತಿದೆ. ಡ್ಯುಯಲ್ ಡಿಗ್ರಿ, ಮಾಸ್ಟರ್ಸ್ ಡಿಗ್ರಿ ಮತ್ತು ಪಿಎಚ್‌ಡಿ ಪದವಿಗಳಿಗೆ ಪ್ರವೇಶ ಆರಂಭವಾಗಿದೆ. ಏ. 28ರಿಂದ ಮೇ 30ರವರೆಗೆ ಅರ್ಜಿ ಸಲ್ಲಿಸಬಹುದು.
ಹೈದ್ರಾಬಾದ್ ಕರ್ನಾಟಕದ ಆರು ಜಿಲ್ಲೆಗಳನ್ನು ಒಳಗೊಂಡಂತೆ ಕರ್ನಾಟಕದ 15 ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ. ದೇಶಾದ್ಯಂತ ಒಟ್ಟು 35 ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ. ಪ್ರವೇಶ ಪರೀಕ್ಷೆಗಳು ಜೂನ್ 7ರಿಂದ 9ರ ವರೆಗೆ ನಡೆಯಲಿವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ವಿವಿ ಕುಲಸಚಿವ ಡಾ.ಬಸವರಾಜ ಡೋಣೂರ, ಅಸಿಸ್ಟಂಟ್ ರಿಜಿಸ್ಟ್ರಾರ್ ವೀರಣ್ಣ ಕಮ್ಮಾರ ಇದ್ದರು.