ಬೆಳಗಾವಿ: ಭಾಷೆ, ಗಡಿ ವಿವಾದದ ಹೆಸರಿನ ನೆಪದಲ್ಲಿ ಕಾನೂನನ್ನು ಕೈಗೆತ್ತಿಕೊಂಡು ಕನ್ನಡಿಗರ ವಿರುದ್ಧ ಮರಾಠಿಗರನ್ನು ಎತ್ತಿಕಟ್ಟುತ್ತಿರುವ, ಮರಾಠಿ ಭಾಷಿಕರಿಗೆ ಪ್ರಚೋದನೆ ನೀಡುತ್ತಿರುವ ಎಂಇಎಸ್ ನಾಯಕರ ವಿರುದ್ಧ ಭಾರತೀಯ ದಂಡ ಸಂಹಿತೆ 153 ಎ ಕಲಂ ಅನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸರ್ಕಾರ ಉದ್ದೇಶಿಸಿದೆ. ಇದೇ ಪ್ರಥಮ ಬಾರಿ ಎಂಇಎಸ್ ಸಂಘಟನೆಯನ್ನು ನಿಷೇಧಿಸಲು ಸರ್ಕಾರ ಒಂದೆಡೆ ಚಿಂತನೆ ನಡೆಸುತ್ತಿದೆ. ಮತ್ತೊಂದೆಡೆ ಭಾಷಾ ಬಾಂಧವ್ಯಕ್ಕೆ ಅಡ್ಡಿ ಪಡಿಸಲು ಯತ್ನಿಸುತ್ತಿರುವ, ಶಾಂತಿ ಸುವ್ಯವಸ್ಥೆ ಅಡ್ಡಿ ಮಾಡುತ್ತಿರುವ ಎಂಇಎಸ್ ವಿರುದ್ಧ 153ಎ ಯಂತಹ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ, ಜಿಲ್ಲಾ ಆಡಳಿತ ಮುಂದಾಗಿದೆ ಎಂದು ಉತ್ತರ ವಲಯ ಐಜಿಪಿ ಭಾಸ್ಕರ್‌ರಾವ್ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಯಳ್ಳೂರು ನಾಮಫಲಕ ವಿವಾದ ಸರ್ಕಾರಕ್ಕೆ ದೊಡ್ಡ ಮುಖಭಂಗವಾಗಿದ್ದು, ಪೊಲೀಸ್ ಇಲಾಖೆ, ಜಿಲ್ಲಾಡಳಿತದ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಜತೆಗೆ ಮಹಾರಾಷ್ಟ್ರ ರಾಜ್ಯ ಎಂಬ ನಾಮಫಲಕವನ್ನು ಮರಾಠಿ ಪ್ರಾಬಲ್ಯದ ಎಲ್ಲ ಗ್ರಾಮಗಳಲ್ಲಿ ಹಾಕಬೇಕೆಂಬ ಎಂಇಎಸ್ ಕರೆ, ಇದಕ್ಕೆ ರಾಜ್ಯ ಹೈಕೋರ್ಟ್ ತರಾಟೆ ತೆಗೆದುಕೊಂಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪೊಲೀಸ್ ಇಲಾಖೆ ಮೂಲಕ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಇದೇ ವೇಳೆ ಬೆಳಗಾವಿ ಸೇರಿದಂತೆ ಸುತ್ತಮುತ್ತಲ ಭಾಗದಲ್ಲಿ ಓಡಾಡುವ ವಾಹನಗಳ ಮೇಲೂ ಮರಾಠಿಗರು ಜೈ ಮಹಾರಾಷ್ಟ್ರ ಎಂಬ ಘೋಷಣೆ ಬರೆಸಿದ್ದಾರೆ. ಹಿಂಡಲಗಾದ ಬಸ್ ನಿಲ್ದಾಣದ ಶೆಲ್ಟರ್ ಮುಂದೆ ಕಿಡಿಗೇಡಿಗಳು ಮಹಾರಾಷ್ಟ್ರ ರಾಜ್ಯ ಬ್ಯಾನರ್ ಕಟ್ಟಿದ್ದರು. ಕನ್ನಡಿಗರು ಗಮನ ಸೆಳೆದ ಹಿನ್ನೆಲೆಯಲ್ಲಿ ಪೊಲೀಸರು ಈ ಬ್ಯಾನರ್‌ನ್ನು ತೆರವುಗೊಳಿಸಿದರು.