ಬೆಳಗಾವಿ: ಕೃಷಿ ಚಟುವಟಿಕೆಗಳಿಗೆ ಗ್ರಾಮೀಣ ಪ್ರದೇಶದಲ್ಲಿ ಕೂಲಿಕಾರರ ಸಮಸ್ಯೆ ಹೆಚ್ಚಾಗುತ್ತಿದ್ದು, ಕಬ್ಬು ಕಟಾವು ಮಾಡುವಂತಹ ಕಠಿಣ ಕೆಲಸಗಳತ್ತ ಕೃಷಿ ಕೂಲಿ ಕಾರ್ಮಿಕರ ಒಲವು ತುಂಬಾ ಕಡಿಮೆಯಾಗುತ್ತಿದೆ ಎಂದು ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ. ಜೆ.ವಿ.ಗೌಡ ಹೇಳಿದ್ದಾರೆ.
ಮಂಗಳವಾರ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಆಶ್ರಯದಲ್ಲಿ ಬೆಳಗಾವಿಯಲ್ಲಿ ಕಬ್ಬು ಕಟಾವಿನ ಯಾಂತ್ರಿಕತೆಯ ಸಾಧಕ ಬಾಧಕಗಳ ಕುರಿತು ಏರ್ಪಡಿಸಲಾಗಿದ್ದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಬ್ಬಿನ ಕಟಾವು ಮತ್ತು ಸಾಗಾಣಿಕೆ ವೆಚ್ಚ ದಿನೇ ದಿನೇ ಹೆಚ್ಚುತ್ತಿರುವುದರಿಂದ ಬೆಳೆಗಾರರಿಗೆ ದೊರೆಯುವ ಲಾಭದ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ಮುಂದೊಂದು ದಿನ ರೈತ ಕಬ್ಬು ಬೆಳೆಯುವುದರಿಂದ ವಿಮುಖನಾಗುವ ಸಾಧ್ಯತೆ ಇದೆ. ಇದನ್ನು ತಪ್ಪಿಸಲು ಈ ದಿಸೆಯಲ್ಲಿ ಹೆಚ್ಚಿನ ಸಂಶೋಧನೆ ಆಗಬೇಕಾದ ಅಗತ್ಯವಿದೆ ಎಂದರು.
ಈಗಾಗಲೇ ಲಭ್ಯವಿರುವ ಕಟ್ಟು ಕಟಾವು ಯಂತ್ರ ಬಳಕೆ ಮಾಡುವುದರಿಂದಲೂ ಕೂಲಿಕಾರರ ಅವಲಂಬನೆ ಕಡಿಮೆ ಮಾಡಲು ಸಾಧ್ಯವಿದೆ. ಸಣ್ಣ ಹಿಡುವಳಿ ರೈತರು ಕಬ್ಬು ಕಟಾವು ಮಾಡುವ ಯಂತ್ರ ಬಳಸಲು ಸಾಧ್ಯವಿಲ್ಲ. ಸಣ್ಣ ಹಿಡುವಳಿದಾರರಿಗೂ ಅನುಕೂಲವಾಗುವಂತೆ ದೇಶೀಯ ಕಟಾವು ಯಂತ್ರ ತಯಾರಿಸುವ ಅಗತ್ಯವಿದೆ. ಈಗಾಗಲೇ ಲಭ್ಯವಿರುವ ಯಂತ್ರಗಳ ಸಾಮರ್ಥ್ಯ ವೃದ್ಧಿಗೂ ಅವಕಾಶವಿದೆ ಎಂದರು.
ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕ ಡಾ.ಆರ್.ಬಿ.ಖಾಂಡಗಾವೆ ಮಾತನಾಡಿ, ಕಡಿಮೆ ಖರ್ಚಿನಲ್ಲಿ ರೈತರಿಗೆ ಹೆಚ್ಚು ಉಪಯುಕ್ತವಾಗುವ ಕಬ್ಬು ಕಟಾವು ಯಂತ್ರ ತಯಾರಿಸುವ ಅಗತ್ಯವಿದೆ. ಕಬ್ಬಿನ ಸಾಲಿನ ಅಂತರ 4-5 ಅಡಿ ಇರುವುದರಿಂದ ಕಬ್ಬು ಕಟಾವು ಯಂತ್ರಗಳನ್ನು ಸಮರ್ಥವಾಗಿ ಬಳಸಲು ಸಾಧ್ಯವಿದೆ ಎಂದರು. ಕಾರ್ಯಾಗಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕಬ್ಬು ಕಟಾವು ಯಂತ್ರಗಳ ತಯಾರಿಕೆ ಕಂಪನಿಗಳಾದ ಜಾನ್‌ಡಿಯರ್ ಮತ್ತು ನ್ಯೂಹಾಲೆಂಡ್ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳ 105 ಪ್ರತಿನಿಧಿಗಳು ಭಾಗವಹಿಸಿದ್ದರು. ವೈ. ಬಿ. ಮಾಡಲಗಿ ವಂದಿಸಿದರು.