ಬೆಳಗಾವಿ: ಯೋಗಗುರು ಬಾಬಾ ರಾಮದೇವ ನೀಡಿದ್ದ ವಿವಾದಾತ್ಮಕ ಹೇಳಿಕೆ ಖಂಡಿಸಿ, ವಿವಿಧ ದಲಿತ ಸಂಘಟನೆಗಳ ಒಕ್ಕೂಟ ಮಂಗಳವಾರ ನೀಡಿದ್ದ ಬೆಳಗಾವಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದ ಖಡೆಬಜಾರ್, ಗಣಪತ ಗಲ್ಲಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಸುಮಾರು 30 ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು, ಬಾಬಾ ರಾಮದೇವ ವಿರುದ್ಧ ಘೋಷಣೆ ಕೂಗುತ್ತ ಅವರನ್ನು ತಕ್ಷಣ ಬಂಧಿಸಬೇಕು, ದೇಶದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ದೇಶದ ಕೋಟ್ಯಂತರ ದಲಿತರನ್ನು ಬಾಬಾ ರಾಮದೇವ ಅವಮಾನಿಸಿದ್ದಾರೆ. ಬಾಬಾ ರಾಮದೇವ ವಿಕೃತ ಮನಸ್ಸಿನ ಅನಾವರಣ ಆಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ದಲಿತ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದರೂ ಮುಂಜಾನೆಯಿಂದ ನಗರದ ಜನಜೀವನ ಸಾಮಾನ್ಯವಾಗಿತ್ತು. ಪ್ರಮುಖ ಬೀದಿಗಳಲ್ಲಿ ಕೆಲ ಅಂಗಡಿಗಳು ಮುಚ್ಚಿದ್ದರೂ ಬಹುತೇಕ ಅಂಗಡಿಗಳು ತೆರೆದಿದ್ದವು. ಮುಂಜಾಗ್ರತಾ ಕ್ರಮವಾಗಿ ನಗರದ ಮುಖ್ಯ ರಸ್ತೆಯಲ್ಲಿ ನಗರ ಸಾರಿಗೆ ಬಸ್ ಸಂಚಾರಕ್ಕೆ ಅವಕಾಶ ನೀಡದೇ ಮಾರ್ಗ ಬದಲಾಯಿಸಲಾಗಿತ್ತು.
ದೂರದ ಊರುಗಳಿಗೆ ತೆರಳುವ ಬಸ್ ಸಂಚಾರ ಯಥಾ ಸ್ಥಿತಿಯಲ್ಲಿತ್ತು. ಆಟೋಗಳು ಮಾತ್ರ ಅಲ್ಲಲ್ಲಿ ಓಡಾಡುತ್ತಿದ್ದು, ಹೆಚ್ಚಿನ ಆಟೋಗಳು ಬಂದ್‌ಗೆ ಬೆಂಬಲ ಸೂಚಿಸಿದ್ದವು.
ಬೆಳಗ್ಗೆ 10 ಗಂಟೆಯ ಹೊತ್ತಿಗೆ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೇರಲಾರಂಭಿಸಿದರು.
ಬಳಿಕ ಜಿಲ್ಲಾಧಿಕಾರಿ ಕಚೇರಿ ಆವರಣದಿಂದಲೇ ಬೃಹತ್ ಪ್ರತಿಭಟನಾ ಮೆರವಣಿಗೆ ಕಾಕತಿವೇಸ್, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಬೋಗಾರ್‌ವೇಸ್, ಕಾಲೇಜು ರಸ್ತೆ, ಚನ್ನಮ್ಮ ವೃತ್ತದ ಮಾರ್ಗವಾಗಿ ತೆರಳಿ ಪುನಃ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ಮೂಲಕ ಕೊನೆಗೊಂಡಿತು. ಮೆರವಣಿಗೆ ತೆರಳುವ ಮಾರ್ಗದಲ್ಲಿ ಎಲ್ಲ ವಾಣಿಜ್ಯ, ವ್ಯವಹಾರ ಬಂದಾಗಿದ್ದವು.
ಸಂಚಾರಕ್ಕೆ ಪರ್ಯಾಯ ಮಾರ್ಗ:ಬಂದ್, ಪ್ರತಿಭಟನಾ ಮೆರವಣಿಗೆ ಹಿನ್ನೆಲೆಯಲ್ಲಿ ಗೋವಾ, ಹಳಿಯಾಳ, ಕಾರವಾರ, ಸಾವಂತವಾಡಿ, ಸಿಂಧುದುರ್ಗ ಕಡೆ ತೆರಳುವ ವಾಹನಗಳನ್ನು ಸಂಗೊಳ್ಳಿ ರಾಯಣ್ಣ ವೃತ್ತದಿಂದಲೇ ಸದಾಶಿವನಗರ, ವಿಶ್ವೇಶ್ವರಯ್ಯ ನಗರ, ಕ್ಯಾಂಪ್ ಮಾರ್ಗವಾಗಿ ಕಳುಹಿಸಲಾಗುತ್ತಿತ್ತು. ಮಿಲಿಟರಿ ಮಹಾದೇವ ದೇವಾಲಯದ ಹಿಂಭಾಗದ ರಸ್ತೆಯ ಮೂಲಕ ಈ ವಾಹನಗಳು ಮುಖ್ಯ ರಸ್ತೆ ಸೇರಿಕೊಂಡವು. ರಸ್ತೆ ಚಿಕ್ಕದಾಗಿದ್ದರಿಂದ ಸಂಚಾರದ ದಟ್ಟಣೆ ಹೆಚ್ಚಿ ಕೆಲ ಕಾಲ ಗೊಂದಲ ಉಂಟಾಯಿತು.
ನಗರದ ಹೃದಯ ಭಾಗದಲ್ಲಿ ನಗರ ಸಾರಿಗೆ, ಆಟೋ ಸಂಚಾರ ಇಲ್ಲದ್ದರಿಂದ ಸರ್ಕಾರಿ ನೌಕರರು, ವಿದ್ಯಾರ್ಥಿಗಳು ಪ್ರಯಾಣಿಕರು ಪರದಾಡಬೇಕಾಯಿತು. ಕೆಲವೆಡೆ ಪೊಲೀಸ್‌ರೆ ಮುಂಜಾಗ್ರತಾ ಕ್ರಮವಾಗಿ ಮುಂದೆ ನಿಂತು ಅಂಗಡಿಗಳನ್ನು ಬಂದ್ ಮಾಡಿದರು. ಪೆಟ್ರೋಲ್ ಬಂಕ್‌ಗಳು ಮಧ್ಯಾಹ್ನದ ತನಕ ಬಂದ್ ಆಗಿದ್ದರಿಂದ ವಾಹನ ಸವಾರರು ಇಂಧನಕ್ಕಾಗಿ ಪರದಾಡಬೇಕಾಯಿತು.
ಪ್ರತಿಭಟನೆಯಲ್ಲಿ ಮಲ್ಲೇಶ ಚೌಗಲೆ, ಎಂ.ಆರ್.ಕಲಪತ್ರಿ, ದುಗೇಶ ಮೇತ್ರಿ, ಮಹೇಶ ಕಾಂಬಳೆ, ಮಹಾದೇವ ತಳವಾರ, ಗಜು ಧರನಾಯಿಕ, ರಾಹುಲ್ ತಳವಾರ, ಲತಾ ತಳವಾರ, ಕಲ್ಲಪ್ಪ ರಾಮಚನವರ ಮೊದಲಾದವರು ಪಾಲ್ಗೊಂಡಿದ್ದರು.
ಮಧ್ಯಾಹ್ನ 2.30ಕ್ಕೆ ಪ್ರತಿಭಟನೆ ಮುಗಿದ ಬಳಿಕ ನಗರದ ಖಡೇ ಬಜಾರ ಸೇರಿದಂತೆ ವಿವಿಧ ಬೀದಿಗಳಲ್ಲಿ ಅಂಗಡಿಗಳು ತೆರೆದುಕೊಂಡವು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ನಗರಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಿತ್ತು.
ಇಂದು ಹುಕ್ಕೇರಿ ಬಂದ್
ಹುಕ್ಕೇರಿ: ದಲಿತರ ಬಗ್ಗೆ ಅವಹೇಳನಕಾರಿಂಾಗಿ ಮಾತನಾಡಿದ ಯೋಗಗುರು ಬಾಬಾ ರಾಮದೇವ ಹೇಳಿಕೆ ಖಂಡಿಸಿ ದಲಿತ ಸಂಘರ್ಷ ಸಮಿತಿ, ದಲಿತ ನೌಕರರ ಒಕ್ಕೂಟ, ದಲಿತ ಮಹಿಳಾ ಒಕ್ಕೂಟ, ದಲಿತ ವಿದ್ಯಾರ್ಥಿ ಒಕ್ಕೂಟ ವತಿಯಿಂದ ಏ. 30ರಂದು ಹುಕ್ಕೇರಿ ಬಂದ್ ಕರೆ ನೀಡಲಾಗಿದೆ.
ಅಂದು ಪಟ್ಟಣದ ಹಳ್ಳದ ಕೇರಿಂು ಅಂಬೇಡ್ಕರ್ ನಗರದಿಂದ ತಹಸೀಲ್ದಾರ್ ಕಚೇರಿಂು ವರೆಗೆ ಬಾಬಾ ಹೇಳಿಕೆ ಖಂಡಿಸಿ ಪ್ರತಿಭಟಿಸಲಾಗುವುದು ಎಂದು ತಿಳಿಸಲಾಗಿದೆ.