ಶ್ರೀಶೈಲ ಮಠದ
ಬೆಳಗಾವಿ: ಪ್ರಕರಣ 1
ನಕಲಿ ಚಲನ್ ಸೃಷ್ಟಿಸಿ ತೆರಿಗೆ ರೂಪದಲ್ಲಿ ಸರ್ಕಾರದ ಖಜಾನೆ ಸೇರಬೇಕಾದ ಕೋಟ್ಯಂತರ ರುಪಾಯಿ ಹಣ ಕಂಡವರ ಪಾಲು...
ಪ್ರಕರಣ 2: ಖೊಟ್ಟಿ ದಾಖಲೆ ಸೃಷ್ಟಿಸಿ ಸರ್ಕಾರಿ ಗೋಮಾಳ ಸೇರಿ 114 ಎಕರೆ ಭೂಮಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ...
ಪ್ರಕರಣ 3: ಬರಪೀಡಿತ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಹೆಸರಿನಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರುಪಾಯಿ ಗುಳುಂ...
ಪ್ರಕರಣ 4: ನಕಲಿ ದಾಖಲೆ ಸೃಷ್ಟಿಸಿ ಉದ್ಯೋಗಿ ಗಿಟ್ಟಿಸಿದ್ದು...
- ಇವೆಲ್ಲವೂ ನಡೆದಿದ್ದು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನಲ್ಲಿ. ಅದೂ ತಾಲೂಕು ಆಡಳಿತದ ನೇರ ಸುಪರ್ದಿಯಲ್ಲಿ. ತಹಸೀಲ್ದಾರರ ಮೂಗಿನ ನೇರದಲ್ಲೇ ಇಷ್ಟೊಂದು ಅವ್ಯವಹಾರಗಳು ನಡೆದಿವೆ.
ಇಡೀ ಕಂದಾಯ ಇಲಾಖೆ, ಸರ್ಕಾರಿ ಆಡಳಿತವೇ ಇದರಲ್ಲಿ ಶಾಮೀಲಾಗಿದೆ. ಕುಡಿಯುವ ನೀರಿಗೂ ಕನ್ನ ಹಾಕುತ್ತಿರುವ ಖದೀಮರು ಬಡವರ, ಗ್ರಾಮೀಣ ಜನರ ಅಭಿವೃದ್ಧಿಗೆ ಬಳಸಬೇಕಾದ ಕೋಟ್ಯಂತರ ರುಪಾಯಿ ಲೂಟಿ ಮಾಡುತ್ತಿದ್ದಾರೆ. ರಾಯಬಾಗದಲ್ಲಿ ಅಧಿಕಾರಿಗಳೇ ಗುತ್ತಿಗೆದಾರರು, ರೌಡಿಗಳಿಗೆ ಸರ್ಕಾರಿ ಯೋಜನೆ ದುರುಪಯೋಗ ಹೇಗೆ ಪಡೆಯಬೇಕೆಂಬ ಬಗ್ಗೆ ತರಬೇತಿಯನ್ನೂ ನೀಡುತ್ತಿದ್ದಾರೆ.
44 ಎಕರೆ ಪರಭಾರೆ: ನಸಲಾಪುರದ ಸರ್ವೆ ನಂ.67 ರಲ್ಲಿ 44.11 ಎಕರೆ ಹಾಗೂ 68ರಲ್ಲಿ 44.22 ಎಕರೆ ಸರ್ಕಾರಿ ಜಮೀನು (ಗಾಯರಾಣ) ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಲಾಗಿದೆ. ಮರಡಿ ಗ್ರಾಮದ ಸರ್ವೆ ನಂ. 23 ರಲ್ಲಿರುವ 26 ಎಕರೆ 1 ಗುಂಟೆ ಅರಣ್ಯ ಜಾಗವನ್ನು ಮಾರಾಟ ಮಾಡಲಾಗಿದೆ. ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯಲ್ಲಿ ಇದು ಬೆಳಕಿಗೆ ಬಂದಿತ್ತು. ಒಟ್ಟಾರೆ 114 ಎಕರೆ ಸರ್ಕಾರಿ ಭೂಮಿ ಇಲ್ಲಿ ಕಂಡವರ ಪಾಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರ ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ.
ನಕಲಿ...: ನಕಲಿ ಛಾಪಾ ಕಾಗದ ಹಗರಣ ಮಾದರಿಯಲ್ಲಿ ತಹಸೀಲ್ದಾರ ಕಚೇರಿಯಲ್ಲಿ ನಕಲಿ ಚಲನ್ಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಸೇರಬೇಕಾದ ಕೋಟ್ಯಂತರ ರುಪಾಯಿಯನ್ನು ಕಂದಾಯ ಹಾಗೂ ಭೂಮಿ ಶಾಖೆ ಅಧಿಕಾರಿಗಳು ಗುಳುಂ ಮಾಡಿದ್ದ ಪ್ರಕರಣ ಕಳೆದ ಅಕ್ಟೋಬರ್ನಲ್ಲಿ ಬೆಳಕಿಗೆ ಬಂದಿತ್ತು.
2006ರಿಂದ ರೈತರು ಹಾಗೂ ಅರ್ಜಿದಾರರಿಂದ ಪಡೆದ ಅವರ ಹಕ್ಕು ಬಿಟ್ಟ ಪತ್ರ, ವಾರಸು ಪತ್ರ, ವಾಟನಿ ಪತ್ರ, ಮ್ಯುಟೇಶನ್ ಡೈರಿ, ಆರ್ಟಿಸಿ ಇತ್ಯಾದಿ ದಾಖಲೆಗಳ ಶುಲ್ಕ ತುಂಬುವ ಚಲನ್ಗಳನ್ನೇ ಅಧಿಕಾರಿಗಳು ನಕಲು ಮಾಡಿ ಜೇಜಿಗಿಳಿಸಿಕೊಂಡಿದ್ದರು. ಇದರಿಂದ ಸರ್ಕಾರದ ಬೊಕ್ಕಸಕ್ಕೆ 4 ಕೋಟಿ ನಷ್ಟವಾಗಿದೆ. ನಕಲಿ ಕ್ಯಾಶ್ ಬುಕ್ ಸೃಷ್ಟಿಸಿ, ರಾಯಬಾಗ ಸಿಂಡಿಕೇಟ್ ಬ್ಯಾಂಕ್ನಲ್ಲಿ ಹಣ ಸಂದಾಯ ಮಾಡಿರುವ ಬಗ್ಗೆ ಬ್ಯಾಂಕಿನ ನಕಲಿ ಸ್ವೀಕೃತಿ ಸೀಲುಗಳನ್ನು ಹಾಕಿ ಬ್ಯಾಂಕ್ ಅಧಿಕಾರಿಗಳ ನಕಲಿ ಸಹಿಯನ್ನೂ ಕೂಡ ಮಾಡುತ್ತಿದ್ದರು.
ನೀರಿನ ರೊಕ್ಕ: ಇನ್ನು ಅಧಿಕಾರಿಗಳು ಟ್ಯಾಂಕರ್ ನೀರು ಪೂರೈಕೆಯಲ್ಲೂ ಖೊಟ್ಟಿ ಬಿಲ್ ಸೃಷ್ಟಿಸಿ ಲಕ್ಷಾಂತರ ರುಪಾಯಿ ಲಪಟಾಯಿಸಿದ್ದಾರೆ. ಈ ಅವ್ಯವಹಾರವನ್ನು ಅನಿಲ ಶೆಟ್ಟಿ ಎಂಬುವರು ಬಯಲಿಗೆಳೆದಿದ್ದು, ದೂರು ದಾಖಲಿಸಿದ್ದರು. ಪರಿಶೀಲಿಸಿದಾಗ ಟ್ಯಾಂಕರ್ ಮೂಲಕ ನೀರು ಪೂರೈಸಿಯೇ ಇರಲಿಲ್ಲ. ಕೆಎ 23, 3905 ವಾಹನದ ಮೂಲಕ ನೀರು ಪೂರೈಸಲಾಗಿದೆ. 2012ರ ಜನವರಿಯಲ್ಲಿ 14,725, ಫೆಬ್ರವರಿ- 55,100 ಹಾಗೂ ಮಾರ್ಚ್ ತಿಂಗಳಲ್ಲಿ 68,800 ಹಣ ಪಾವತಿಸಲಾಗಿದೆ. ನೀರು ಪೂರೈಸಿದ ವಾಹನದ ಮಾಹಿತಿಯನ್ನೆ ನೀಡದೆ 2012ರ ಎಪ್ರಿಲ್ನಲ್ಲಿ 78,160 ಪಾವತಿಸಲಾಗಿದೆ. ಕೆಎ 22, 1341 ವಾಹನಕ್ಕೆ ರು. 11,68,026 ಪಾವತಿಸಲಾಗಿದೆ. ಅದರಂತೆ ಕೆಎ 23, 1341ರಲ್ಲಿ ವಾಹನದ ಮಾಹಿತಿ ನೀಡದೆ 5,21,608 ಪಾವತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ 11 ಕಂದಾಯ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ರಾಯಬಾಗ ತಹಸೀಲ್ದಾರ ಕಚೇರಿಯಲ್ಲಿ ನಕಲಿ ಚಲನ್ ಸೃಷ್ಟಿಸಿ ಅವ್ಯವಹಾರ ನಡೆಸಿದ ಪ್ರಕರಣವನ್ನು ಸಿಒಡಿ ತನಿಖೆಗೆ ಶಿಫಾರಸು ಮಾಡಲಾಗಿದೆ. ಟ್ಯಾಂಕರ್ ನೀರು ಅವ್ಯವಹಾರಕ್ಕೆ ಸಂಬಂಧಿಸಿ ತಹಸೀಲ್ದಾರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ.
ಟಿ ಎನ್. ಜಯರಾಂ, ಜಿಲ್ಲಾಧಿಕಾರಿ, ಬೆಳಗಾವಿ