ಬೆಳಗಾವಿ: ಟ್ಯಾಂಕರ್ ನೀರು ಪೂರೈಕೆಯಲ್ಲಿ ಗೋಲಮಾಲ್ ಪ್ರಕರಣದ ಹಿನ್ನೆಲೆಯಲ್ಲಿ ರಾಯಬಾಗ ತಹಸೀಲ್ದಾರ ಶಿವಾನಂದ ಸಾಗರ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಸರ್ಕಾರದ ಉಪಕಾರ್ಯದರ್ಶಿ ಕೆ.ಎಸ್. ಸರೋಜಮ್ಮ ಆದೇಶ ಹೊರಡಿಸಿದ್ದಾರೆ. ಜೂನ್ 9 ರಂದು'ಕನ್ನಡಪ್ರಭ' ರಾಯಬಾಗ ಅಕ್ರಮಗಳಿಗೆ ಸ್ವರ್ಗ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ ತಹಸೀಲ್ದಾರ ಕಚೇರಿಯಲ್ಲಿ ನಡೆದ ಅವ್ಯವಹಾರಗಳ ಮೇಲೆ ಬೆಳಕು ಚೆಲ್ಲಿತ್ತು. ಇಲ್ಲಿ ತಹಸೀಲ್ದಾರ ಕಚೇರಿ ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿತ್ತು. ನಕಲಿ ಚಲನ್ ಸೃಷ್ಟಿಸಿ ಕೋಟ್ಯಂತರ ರು. ವಂಚನೆ, ಟ್ಯಾಂಕರ್ ನೀರು ಪೂರೈಕೆಯಲ್ಲಿ ಲಕ್ಷಾಂತರ ರು. ಅವ್ಯವಹಾರ, ಕಂದಾಯ ಭೂಮಿ ಖಾಸಗಿ ವ್ಯಕ್ತಿಗೆ ಪರಭಾರೆ ಹೀಗೆ ಅವರ ವಿರುದ್ಧದ ಹಗರಣಗಳು ಒಂದೊಂದಾಗಿ ಬೆಳಕಿಗೆ ಬಂದಿದ್ದವು.
ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಯರಾಂ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದರು. ಇದರನ್ವಯ ಸರ್ಕಾರ, ತಹಸೀಲ್ದಾರನ್ನು ವಿಚಾರಣೆಗೆ ಕಾಯ್ದಿರಿಸಿ, ಅಮಾನತುಗೊಳಿಸಿ ಆದೇಶ ಹೊರಡಿಸಿದೆ.