ಬೆಳಗಾವಿ: ಶಾಸಕ ಹಾಗೂ ಎಂ.ಕೆ. ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಡಿ.ಬಿ. ಇನಾಮದಾರ ಸೇರಿ14 ಜನರ ವಿರುದ್ಧ ಅವ್ಯವಹಾರದ ಆರೋಪ ಸಾಬೀತಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ರಾಜ್ಯ ಹೈಕೋರ್ಟ್ ಪೀಠ ಸೂಚಿಸಿದೆ.
ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಸದಸ್ಯ ಮಹಾಂತೇಶ ಪಾಟೀಲ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಧಾರವಾಡದ ಹೈಕೋರ್ಟ್ ಪೀಠವು, ಅವ್ಯವಹಾರ ಸಾಬೀತಾಗಿದ್ದು, ಮುಂದಿನ 2 ತಿಂಗಳ ಒಳಗಾಗಿ ಈ ಎಲ್ಲ ಸದಸ್ಯರ ವಿರುದ್ಧ ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆ 1959ರ ಕಲಂ 64 ಮತ್ತು 68ರ ಪ್ರಕಾರ ಕ್ರಮ ಕೈಗೊಳ್ಳಬೇಕು ಹಾಗೂ ರು. 24 ಕೋಟಿಯನ್ನು ಮರಳಿ ವಸೂಲು ಮಾಡಿಕೊಳ್ಳಬೇಕೆಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯಕ್ಕೆ ಸೂಚಿಸಿದೆ.
ಬೇಕು ಸ್ಪೀಕರ್ ಅನುಮತಿ: ಶಾಸಕ ಇನಾಂದಾರ ವಿರುದ್ಧ ಕ್ರಮಕ್ಕೆ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಸ್ವೀಕರ್ ಅನುಮತಿ ಕೇಳಬೇಕಾಗುತ್ತದೆ. ಕ್ರಮ ಕೈಗೊಳ್ಳದಿದ್ದರೆ 'ಹೈ' ಆದೇಶ ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ನ್ಯಾಯವಾದಿ ಶಿವರಾಜ್ ಮುಧೋಳ ಅಭಿಪ್ರಾಯಪಟ್ಟಿದ್ದಾರೆ.