ಬೆಳಗಾವಿ: ಬೆಳಗಾವಿ ಮಹಾಪೌರ ಮತ್ತು ಉಪಮಹಾಪೌರ ಸ್ಥಾನಗಳೆರಡೂ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಪಾಲಾಗಿವೆ. ಸೋಮವಾರ ನಡೆದ ಚುನಾವಣೆಯಲ್ಲಿ ಮಹೇಶ ನಾಯಕ ಮಹಾಪೌರರಾಗಿ ಹಾಗೂ ರೇಣು ಮುತಗೇಕರ ಉಪಮಹಾಪೌರರಾಗಿ ಆಯ್ಕೆಯಾದರು. ಮಹಾಪೌರ ಸ್ಥಾನಕ್ಕೆ ಸ್ಪರ್ಧಿಸಿದ್ದ ವಾರ್ಡ್ ನಂ.19 ರ ಮಹೇಶ ನಾಯಕ 31 ಮತ ಪಡೆದು ಆಯ್ಕೆಗೊಂಡರೆ, ಫಯೀಮ್ ನಾಯಿಕವಾಡಿ 27 ಮತ ಪಡೆದು ಪರಾಭವಗೊಂಡರು. ಮತ ಚಲಾವಣೆಯ ಅಧಿಕಾರ ಹೊಂದಿದ್ದ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವ (ಯಮಕನಮರಡಿ ಶಾಸಕ)ರು ಸೇರಿ ಐದು ಸದಸ್ಯರು ಗೈರಾಗಿದ್ದರೆ, ಶಾಸಕರಾದ ಫೀರೋಜ್ ಸೇಠ್, ಸಂಭಾಜಿ ಪಾಟೀಲ ತಟಸ್ಥರಾಗಿ ಉಳಿದರು. ವಾರ್ಡ್ ನಂ. 28 ರ ಸದಸ್ಯೆ ರೇಣು ಮುತಗೇಕರ 31 ಮತ ಪಡೆದು ಉಪ ಮೇಯರ್ ಆಗಿ ಆಯ್ಕೆಗೊಂಡರು. ಕನ್ನಡ ಅಭ್ಯರ್ಥಿ ಶ್ರೀಯಲಾ ಬಾಹುಬಲಿ ಜನಗೌಡಾ 27 ಮತ ಪಡೆದರು. ಇಲ್ಲೂ ಸಹ ಐವರು ಸದಸ್ಯರು ಗೈರಾಗಿದ್ದರೆ, ಶಾಸಕರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೇ ತಟಸ್ಥರಾಗಿ ಉಳಿದರು.