ಎಐವೈಎಫ್ ಕಾರ್ಯಕರ್ತರಿಂದ ಚರಂಡಿ ಸ್ವಚ್ಛತೆ
ಬಳ್ಳಾರಿ: ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ಹಲವು ದಿನಗಳಿಂದ ತುಂಬಿ ಗಬ್ಬುನಾರುತ್ತಿದ್ದ ತೆರೆದ ಚರಂಡಿಯನ್ನು ಎಐವೈಎಫ್ ಸಂಘದ ಕಾರ್ಯಕರ್ತರು ಮೊಟರ್ ಮೂಲಕ ಸೋಮವಾರ ಸ್ವಚ್ಛಗೊಳಿಸಿದರು. ಇಲ್ಲಿನ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಬಳಿಯಿರುವ ಚರಂಡಿಯು ಕಳೆದ ಹಲವಾರು ದಿನಗಳಿಂದ ತುಂಬಿಹೋಗಿದ್ದು, ಇದನ್ನು ಸ್ವಚ್ಛಗೊಳಿಸುವವರೆ ಇಲ್ಲದಂತಾಗಿದೆ. ಚರಂಡಿ ನೀರೆಲ್ಲ ಪಕ್ಕದ ದೇವಸ್ಥಾನದೊಳಗೆ ನುಗ್ಗುತ್ತಿದ್ದು, ಪೂಜೆಗೆಂದು ಬರುವ ಭಕ್ತರು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಯಲ್ಲಿ ಸಂಚರಿಸುವವರೆಲ್ಲ ಮೂಗು ಮುಚ್ಚಿಕೊಂಡು ಹೋಗುತ್ತಿದ್ದಾರೆ. ಈ ಕುರಿತು ಗ್ರಾಪಂ ಪಿಡಿಒಗೆ ತಿಳಿಸಿದರೂ ನಿರ್ಲಕ್ಷ್ಯವಹಿಸಿರುವ ಹಿನ್ನೆಲೆಯಲ್ಲಿ ಸಂಘದ ವತಿಯಿಂದಲೆ ಮೊಟರ್ ಮೂಲಕ ಚರಂಡಿ ಸ್ವಚ್ಛತೆ ಕೈಗೊಳ್ಳಲಾಗಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಕೊಳಗಲ್ಲು ಎರ್ರಿಸ್ವಾಮಿ ತಿಳಿಸಿದರು. ಈಗಾಗಲೇ ಡೆಂಘೀ, ಮಲೇರಿಯಾ ಪ್ರಕರಣಗಳು ಹೆಚ್ಚುತ್ತಿವೆ. ಚರಂಡಿಗಳು ಸ್ವಚ್ಛಗೊಳ್ಳದಿದ್ದಲ್ಲಿ, ಇಂಥಹ ಪ್ರಕರಣಗಳು ಇನ್ನಷ್ಟು ಹೆಚ್ಚಲು ಕಾರಣವಾಗಲಿವೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ, ಗ್ರಾಮದಲ್ಲಿನ ಇನ್ನುಳಿದ ಚರಂಡಿಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಪಾಪರೆಡ್ಡಿ ಕೇಶಪ್ಪ, ದಾಸರ ವಿರೂಪಾಕ್ಷಿ, ಆಟೋ ಎರ್ರಿಸ್ವಾಮಿ, ವೀರೇಶ್, ಮಲ್ಲ, ಆಚಾರಿ ದೇವೇಂದ್ರ, ಬಡಿಗೇರ ಶೇಖಣ್ಣ, ಸಂಡೂರು ಎರ್ರಿಸ್ವಾಮಿ ಇತರರು ಇದ್ದರು.