ಎಸ್.ಪಿಎಸ್ ಬ್ಯಾಂಕ್.ಗೆ ರು. 59 ಲಕ್ಷ ನಿವ್ವಳ ಲಾಭ
ಕನ್ನಡಪ್ರಭ ವಾರ್ತೆ, ಸಂಡೂರು, ಏ. 1
ಸಂಡೂರು ಪಟ್ಟಣ ಸೌಹಾರ್ದ ಸಹಕಾರಿ (ಎಸ್.ಪಿಎಸ್) ಬ್ಯಾಂಕ್ 2012ಟ 13ನೇ ಆರ್ಥಿಕ ವರ್ಷದಲ್ಲಿ ರು. 82.95 ಲಕ್ಷ ಲಾಭ ಗಳಿಸಿದೆ. ಆದಾಯ ತೆರಿಗೆ ಪಾವತಿಸಿದ ಅನಂತರ ರು. 59 ಲಕ್ಷ ನಿವ್ವಳ ಲಾಭ ಗಳಿಸಿದೆ. ಶೀಘ್ರದಲ್ಲಿ ಗ್ರಾಹಕರಿಗೆ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಬ್ಯಾಂಕ್ ಅಧ್ಯಕ್ಷ ಕೆ.ಎಸ್. ನಾಗರಾಜ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಹಣಕಾಸು ವರ್ಷದ ಅಂತ್ಯದಲ್ಲಿ ಠೇವಣಿ ರು. 31.96 ಕೋಟಿ ಇದ್ದು, ಸಾಲ ಮತ್ತು ಮುಂಗಡಗಳು ರು. 12.78 ಕೋಟಿ ಇರುತ್ತದೆ. ಈ ಸಾಲಿನಲ್ಲಿಯೂ ಬ್ಯಾಂಕಿನ ವಸೂಲಾತಿ ಉತ್ತಮವಾಗಿದ್ದು, ಬ್ಯಾಂಕ್ ಕಳೆದ ಹಲವು ವರ್ಷಗಳಿಂದ ಸತತವಾಗಿ ಶೇ. 0 ಎನ್.ಪಿಎ (ಅನುತ್ಪಾದಕ ಆಸ್ತಿ) ಹೊಂದಿರುವುದು ಹೆಮ್ಮೆಯ ವಿಷಯವಾಗಿದೆ. ಈ ಯಶಸ್ಸಿಗೆ ಗ್ರಾಹಕರೇ ಕಾರಣ. ಆರ್ಥಿಕ ಸಂಕಷ್ಟದಲ್ಲೂ ಸಾಲಗಾರರು ತಮ್ಮ ಕಂತುಗಳನ್ನು ಸರಿಯಾದ ಸಮಯಕ್ಕೆ ಪಾವತಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಇದೇ ವೇಳೆ ಸಿಬ್ಬಂದಿ ಸೇವೆಯನ್ನು ಶ್ಲಾಘಿಸಿದರು.
ಬದಲಾದ ಆರ್ಥಿಕ ಹಾಗೂ ಔದ್ಯೋಗಿಕ ಸನ್ನಿವೇಶದಲ್ಲಿ ಮಾಹಿತಿ ತಂತ್ರಜ್ಞಾನದಲ್ಲಾದ ಬದಲಾವಣೆಗೆ ಅನುಗುಣವಾಗಿ ಹೊಸ ತಲೆಮಾರಿನ ಆರ್ಥಿಕ ಸೇವೆಗಳಾದ ಆರ್.ಟಿಜಿಎಸ್ ಹಾಗೂ ಎನ್.ಇಎಫ್.ಟಿ ನೀಡುತ್ತಲಿದೆ. ಬ್ಯಾಂಕ್ ಗ್ರಾಹಕರಿಗೆ ಎಟಿಎಂ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ. ಕೇವಲ ಲಾಭಕ್ಕಾಗಿ ಸಂಸ್ಥೆ ನಡೆಸದೆ, ಸಮಾಜದ ಅಗತ್ಯಗಳಿಗೆ ಸ್ಪಂದಿಸಬೇಕೆನ್ನುವ ಉದ್ದೇಶದೊಂದಿಗೆ, ಬ್ಯಾಂಕ್ ಜನತೆಗೆ ಆರ್ಥಿಕ ಸೇವೆಯ ಜೊತೆಗೆ, ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದೆ ಎಂದರು.