ವಿಕಾಸ ಬ್ಯಾಂಕ್.ಗೆ ರು. 1.45 ಕೋಟಿ ಲಾಭ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಏ. 1
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹಲವು ಪರಿಮಿತಿಗಳ ಮಧ್ಯ ಹೊಸಪೇಟೆ ತಾಲೂಕಿನ ಜನರಿಗೆ ಉತ್ತಮ ಸೇವೆ ನೀಡುತ್ತ ಬಂದಿರುವ ವಿಕಾಸ ಸೌಹಾರ್ದ ಕೋಟ ಆಪರೇಟಿವ್ ಬ್ಯಾಂಕ್ 2012ಟ 13ನೇ ಸಾಲಿನ ಆರ್ಥಿಕ ವರ್ಷದಲ್ಲಿ ರು. 2.28 ಕೋಟಿ ಲಾಭ ಗಳಿಸಿದೆ ಎಂದು ವಿಕಾಸ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ್ ತಿಳಿಸಿದರು.
ಇಲ್ಲಿನ ವಿಕಾಸ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬ್ಯಾಂಕ್ ತೆರಿಗೆ ಅನಂತರ ರು. 1.45 ಕೋಟಿಗಳ ನಿವ್ವಳ ಲಾಭ ಗಳಿಸಿದ್ದು, 6ಟ 7 ವರ್ಷಗಳಿಂದ ಶೇ. 0 ನಿವ್ವಳ ಅನುತ್ಪಾದಕ ಆಸ್ತಿ (ಎನ್.ಪಿಎ) ಸಾಧಿಸುತ್ತಾ ಬಂದಿದೆ. ರು. 3.29 ಕೋಟಿ ಶೇರು ಬಂಡವಾಳ ಹೊಂದಿದ್ದು, ರು. 97.71 ಕೋಟಿ ಠೇವಣಿ ಸಂಗ್ರಹಿಸಲಾಗಿದೆ. ರು. 66.70 ಕೋಟಿಗಳನ್ನು ಸಾಲ ಮತ್ತು ಮುಂಗಡ ನೀಡಲಾಗಿದೆ. ರು. 115.07 ಕೋಟಿ ದುಡಿಯುವ ಬಂಡವಾಳವಾಗಿದ್ದು, ಬ್ಯಾಂಕ್ ರು. 165 ಕೋಟಿ ಒಟ್ಟು ವ್ಯವಹಾರ ನಡೆಸುತ್ತಿದೆ ಎಂದು ಅವರು ವಿವರಿಸಿದರು.
ಪ್ರತಿ ವರ್ಷವೂ ವಿಕಾಸ ಬ್ಯಾಂಕ್ ಕೆಲವು ಹೊಸ ಯೋಜನೆಗಳನ್ನು ರೂಪಿಸುತ್ತ ಬಂದಿದೆ. ಈ ವರ್ಷ 2013 ಮೇ 13 ಅಕ್ಷಯ ತೃತೀಯ ದಿನದಂದು ಎಟಿಎಂ ಡೆಬಿಟ್ ಕಾರ್ಡ್ ಸೇವೆ ಆರಂಭಿಸಲಿದೆ. ಅದಾದ ಬಳಿಕ ವಿಕಾಸ ಬ್ಯಾಂಕ್ ಗ್ರಾಹಕರು ದೇಶದ ಒಂದು ಲಕ್ಷಕ್ಕೂ ಹೆಚ್ಚಿನ ಎಟಿಎಂಗಳಲ್ಲಿ ವ್ಯವಹರಿಸಬಹುದಾಗಿದೆ. ರಾಜ್ಯದಲ್ಲಿ ಎಟಿಎಂ ಡೆಬಿಟ್ ಕಾರ್ಡ್.ನ್ನು ಬಾಗಲಕೋಟೆಯ ಬಸವೇಶ್ವರ ಬ್ಯಾಂಕ್ ಮತ್ತು ಸುಕೋ ಬ್ಯಾಂಕ್ ಮಾತ್ರ ಆರಂಭಿಸಿದೆ ಎಂದು ವಿಶ್ವನಾಥ ಹಿರೇಮಠ ಹೇಳಿದರು.
ಸಿಟಿಎಸ್ 2010 ಹೊಸ ಮಾದರಿಯ ಚೆಕ್.ಗಳನ್ನು ಗ್ರಾಹಕರಿಗೆ ಒದಗಿಸುವ ಜೊತೆಗೆ ಗ್ರಾಹಕರಿಗೆ ವೈಯಕ್ತಿಕ ವಿವರಗಳಿರುವ ಚೆಕ್ ವಿತರಿಸಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ವಿವರಿಸಿದರು.
ವಿಕಾಸ ಬ್ಯಾಂಕ್ ನಿರ್ದೇಶಕರಾದ ಎ. ಸೀನಂಭಟ್, ಎಸ್.ವಿ. ನಾಯ್ಕ, ಎಂ. ವೆಂಕಪ್ಪ, ಎ. ಸತ್ಯನಾರಾಯಣ, ಅನಂತ ಜೋಶಿ, ಬ್ಯಾಂಕ್.ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇ. ಉಮಾದೇವಿ ಸುದ್ದಿಗೋಷ್ಠಿಯಲ್ಲಿದ್ದರು.