ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಪೊಲೀಸ್ ಸೇವೆ ಕಷ್ಟಕರ: ನರಸಿಂಗರಾವ್

Vishwanath S
Updated On : 3 Apr 2013, 11:07 am

ಬಳ್ಳಾರಿ: ಪೊಲೀಸ್ ಸೇವೆ ಇತರ ಸೇವೆಗಳಿಗಿಂತ ಭಿನ್ನ ಹಾಗೂ ಕಷ್ಟಕರ ಎಂದು ನಿವೃತ್ತ ಪೊಲೀಸ್ ಉಪನಿರೀಕ್ಷಕ ಎಂ. ನರಸಿಂಗರಾವ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಡಿಎಆರ್ (ಜಿಲ್ಲಾ ಪೊಲೀಸ್ ಕವಾಯತು) ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಸೇವೆ ಮಹತ್ವದ್ದು ಹಾಗೂ ಜವಾಬ್ದಾರಿಯುತವಾದದ್ದು. ಸಾರ್ವಜನಿಕರಲ್ಲಿ ಇಲಾಖೆ ಬಗ್ಗೆ ಗೌರವ, ನಂಬಿಕೆ ಕಾಪಾಡಿಕೊಂಡು ಮುಂದೆ ಸಾಗಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಅಪಘಾತದಿಂದ ಸಾವು ಅಧಿಕವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ವ್ಯವಸ್ಥೆ ಸುಗಮಗೊಳಿಸಲು ಪೊಲೀಸರು ಮುಂದಾಗಬೇಕು. ರಸ್ತೆ ಅಗಲೀಕರಣ, ಟ್ರಾಫಿಕ್ ಸಿಗ್ನಲ್ ಅಳವಡಿಕೆಯಾಗಬೇಕು. ಅಪಘಾತ ನಿಯಂತ್ರಣ ಹಾಗು ಸುಲಲಿತ ವಾಹನಗಳ ಚಾಲನೆಗೆ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ವರ್ಷ ಪೂರ್ತಿ ಬಿಡುವಿಲ್ಲದಂತೆ ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆಗೆ ಅಪವಾದಗಳು ಬರುವುದು ಸಾಮಾನ್ಯ. ಅವುಗಳನ್ನು ನಿಗ್ರಹಿಸಿ, ಸಮಾಜ ಸೇವೆಯಲ್ಲಿ ತೊಡಗಬೇಕು. ಸಾರ್ವಜನಿಕರೊಂದಿಗೆ ಸಂಯಮದಿಂದ ವರ್ತಿಸಿ, ಇಲಾಖೆಗೆ ಹೆಸರು ತರುವಂತಾಗಬೇಕು. ಈ ದಿನದಂದು ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರನ್ನು ಸ್ಮರಿಸುವುದು, ಅವರ ಸಲಹೆ ಪಡೆಯುವುದು ಅಗತ್ಯವಾಗಿದೆ. ನಿವೃತ್ತ ನೌಕರರು ತಮ್ಮ ನಿವೃತ್ತಿ ಜೀವನವನ್ನು ಹಾಳು ಮಾಡಿಕೊಳ್ಳದೆ ಇಲಾಖೆ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತಾ ಮಾತನಾಡಿ, ಸಮವಸ್ತ್ರ ಧರಿಸಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ. ಇದನ್ನು ಸದ್ವಿನಿಯೋಗ ಪಡಿಸಿಕೊಂಡು ಇಲಾಖೆಯ ಘನತೆಯನ್ನು ಸದಾಕಾಲ ಎತ್ತಿ ಹಿಡಿಯಲು ಶ್ರಮಿಸಬೇಕು. ಯಾವುದೇ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಅತ್ಯಂತ ಸೌಜನ್ಯತೆಯಿಂದ ವರ್ತಿಸಿ, ಇಲಾಖೆಯ ಘನತೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ವಂದಿಸಿದರು. ಡಿವೈಎಸ್ಪಿ, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು. ಕಾರ್ಯಕ್ರಮದಲ್ಲಿ 2012-13ನೇ ಸಾಲಿನಲ್ಲಿ ನಿವೃತ್ತರಾದ 55 ಅಧಿಕಾರಿ, ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement