ಮರಿಯಮ್ಮನಹಳ್ಳಿ: ಇಂದು ಪುಣ್ಯಾನಂದಪುರಿ ಸ್ವಾಮೀಜಿ ಪುಣ್ಯಾರಾಧನೆ
ಹೊಸಪೇಟೆ: ತಾಲೂಕಿನ ಮರಿಯಮ್ಮನಹಳ್ಳಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಹಾಗೂ ಬಳ್ಳಾರಿಯ ಅಖಿಲ ಕರ್ನಾಟಕ ವಾಲ್ಮೀಕಿ ಗುರುಪೀಠದ ಆಶ್ರಯದಲ್ಲಿ ಜಗದ್ಗುರು ಪುಣ್ಯಾನಂದಪುರಿ ಮಹಾಸ್ವಾಮಿಗಳ 6ನೇ ಪುಣ್ಯಾರಾಧನೆ ಕಾರ್ಯಕ್ರಮ ಮರಿಯಮ್ಮನಹಳ್ಳಿ ವಾಲ್ಮೀಕಿ ಸಮುದಾಯ ಭವನದಲ್ಲಿ ಏ. 3ರಂದು ಬೆಳಗ್ಗೆ 8 ಗಂಟೆಗೆ ನಡೆಯಲಿದೆ.
ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಮಹಾಸಂಸ್ಥಾನದ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹೊಸಪೇಟೆಯ ದಿ ಸಿಟಿ ಬ್ಯಾಂಕ್ ಅಧ್ಯಕ್ಷ ಬಂಡೆ ರಂಗಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಮರಿಯಮ್ಮನಹಳ್ಳಿ ಘಟಕದ ಅಧ್ಯಕ್ಷ ತಳವಾರ ಹುಲುಗಪ್ಪ ಅಧ್ಯಕ್ಷತೆ ವಹಿಸುವರು.
ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಡಾ. ರಂಗರಾಜ್ ವನದುರ್ಗ ಅವರು ಪುಣ್ಯಾನಂದಪುರಿ ಮಹಾಸ್ವಾಮೀಜಿ ಅವರ ಕುರಿತು ಉಪನ್ಯಾಸ ನೀಡಿವರು.
ಬಳ್ಳಾರಿ ಜಿಲ್ಲೆಯ 7 ತಾಲೂಕಿನಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಪಂಗೆ ಆಯ್ಕೆಗೊಂಡಿರುವ ವಾಲ್ಮೀಕಿ ಸಮಾಜದ ಸದಸ್ಯರಿಗೆ ಸನ್ಮಾನ, ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಬ್ರೆಡ್, ಹಾಲು ಮತ್ತು ಹಣ್ಣು ವಿತರಣೆ, ರಕ್ತದಾನ ಶಿಬಿರ, ಅಂಗವಿಕಲರಿಗೆ ಮತ್ತು ವಯೋವೃದ್ಧರಿಗೆ ವಸ್ತ್ರದಾನ, ಅನ್ನದಾಸೋಹ ಕಾರ್ಯಕ್ರಮ ನಡೆಯಲಿದೆ.