ಸೂರಿಗಾಗಿ ಗ್ರಾಪಂ ಕಚೇರಿ ಮುತ್ತಿಗೆ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಏ. 2
ನೆರೆ ಹಾವಳಿ ಹಿನ್ನೆಲೆಯಲ್ಲಿ ನದಿ ತೀರದ ಮಾಗಳ ಗ್ರಾಮದ ಬಸ್ತಿ ಓಣಿ, ಬ್ಯಾಡರಗೇರಿ ಸ್ಥಳಾಂತರ ಮಾಡಿರುವ ಸರ್ಕಾರ ಈವರೆಗೂ ನವ ಗ್ರಾಮದ ಆಸರೆ ಮನೆಗಳನ್ನು ನೀಡದ ಕಾರಣ ರೊಚ್ಚಿಗೆದ್ದ ಸಂತ್ರಸ್ತರು ಮಂಗಳವಾರ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಮೂಲಭೂತ ಸೌಕರ್ಯ ನೀಡದಿದ್ದರೇ ಚುನಾವಣೆ ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಸಂತ್ರಸ್ತರು ಎದುರಿಸುತ್ತಿರುವ ಸಮಸ್ಯೆಗಳನ್ನು ಹತ್ತಾರು ಬಾರಿ ಜಿಲ್ಲಾಧಿಕಾರಿ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ. ಅಳಿದುಳಿದ ಮನೆಗಳ ನಿರ್ಮಾಣಕ್ಕೆ ಪರವಾನಿಗೆ ನೀಡದ ಗ್ರಾಪಂ ಅಧಿಕಾರಿಗಳು ಈವರೆಗೂ ಈ ಎರಡು ಓಣಿಗಳಲ್ಲಿ ಸಿಸಿ ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್ ದೀಪ ಸೇರಿದಂತೆ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿಲ್ಲ. ಸರ್ಕಾರ ನೀಡಿರುವ ಬಸವ ವಸತಿ ಯೋಜನೆ ಮನೆಗಳನ್ನು ನಿರ್ಮಾಣ ಮಾಡಲು ಪರವಾನಿಗೆ ನೀಡದೇ ಕೂಲಿ ಕಾರ್ಮಿಕರು ಬಯಲಲ್ಲಿ ಬದುಕು ಸಾಗಿಸುವಂತಾಗಿದೆ ಎಂದು ಈಟಿ ಕೋಟೆಪ್ಪ, ಆರ್. ವಸಂತ ತಮ್ಮ ನೋವನ್ನು ತೋಡಿಕೊಂಡರು.
ಕಳೆದ 3 ವರ್ಷಗಳಿಂದ ಸಂತ್ರಸ್ತರು ಅಳಿದುಳಿದ ಮನೆಗಳಲ್ಲೇ ವಾಸ ಮಾಡುತ್ತಿದ್ದಾರೆ. ಮಳೆ ಬಂದಾಗ ಸಂಪೂರ್ಣ ಸೋರುವ ಸೂರು ಬಿದ್ದು ಪ್ರಾಣ ಹೋದರೆ ಯಾರು ದಿಕ್ಕು? ನಮ್ಮನ್ನ ಸಾಯಲು ಬಿಡದೇ ಬದುಕಲು ಬಿಡದೇ ಅತಂತ್ರ ಸ್ಥಿತಿಗೆ ತಂದಿಟ್ಟಿದ್ದಾರೆ. ಕೊಳಗೇರಿ ಅಭಿವೃದ್ಧಿ ಮಂಡಳಿ ಆಮೆಗತಿಯಲ್ಲಿ ಮನೆ ನಿರ್ಮಾಣ ಮಾಡುತ್ತಿದೆ. ಉಳಿದಂತೆ ನಿರ್ಮಾಣವಾಗಿರುವ 100 ಮನೆಗಳು ಸಂಪೂರ್ಣ ಕಳಪೆಯಾಗಿದ್ದರೂ ಈ ಕುರಿತು ಜಿಲ್ಲಾಧಿಕಾರಿ ಕನಿಷ್ಠ ಕಾಳಜಿ ತೋರದೆ ನಿರ್ಲಕ್ಷ್ಯ ತಾಳಿ ಸಂತ್ರಸ್ತರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಆದೇಶ ಹಿಂಪಡೆಯಲಿ: 3 ವರ್ಷಗಳ ಹಿಂದೆ ಸರ್ಕಾರ ಆಸರೆ ಅಡಿ ಸ್ಥಳಾಂತರವಾಗುತ್ತಿರುವ ಗ್ರಾಮಗಳಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬಾರದು ಎಂಬ ಆದೇಶದಿಂದ ಸಂತ್ರಸ್ತರು ನಲುಗಿ ಹೋಗಿದ್ದಾರೆ. ಶೀಘ್ರ ಸರ್ಕಾರ ಈ ಆದೇಶ ಹಿಂಪಡೆದು ಮನೆ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸದಿದ್ದರೇ ಚುನಾವಣೆ ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿದ್ದಾರೆ. ಗ್ರಾಮದೊಳಗೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಹಿನ್ನೀರು ಬರುತ್ತಿದ್ದು, ಈ ಕುರಿತು ಯೋಜನಾ ಸ್ಥಳದಲ್ಲೇ ಸಂತ್ರಸ್ತರು ಅಡುಗೆ ಮಾಡಿ ಧರಣಿ ಸತ್ಯಾಗ್ರಹ ಮಾಡಿದ್ದರು. ಗ್ರಾಮದೊಳಗೆ ಹಿನ್ನೀರು ಬಂದರೇ ತಾವು ಹೇಗೆ ಬದುಕಬೇಕು, ಆದ್ದರಿಂದ ಯೋಜನೆ ವ್ಯಾಪ್ತಿಯಲ್ಲಿ ಮುಳುಗಡೆ ಪಟ್ಟಿಗೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿದ್ದರು.
ಗ್ರಾಪಂ ಕಚೇರಿಗೆ ಬೀಗ ಹಾಕಲು ಯತ್ನಿಸಿದ ಸಂತ್ರಸ್ತರು ಜಿಲ್ಲಾಧಿಕಾರಿ ಭೇಟಿ ನೀಡಿ ಸಮಸ್ಯೆ ಬಗೆಹರಿಯುವ ತನಕ ತಾವು ಧರಣಿಯಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದರು. ತಾಪಂ ನರೇಗ ಸಹಾಯಕ ನಿರ್ದೇಶಕ ಹೊಳಲಯ್ಯ ಭೇಟಿ ನೀಡಿ ಮನವಿ ಮೇಲಧಿಕಾರಿಗಳಿಗೆ ಕಳಿಸುತ್ತೇವೆ. ಏ. 5ರ ವರೆಗೆ ಕಾಲಾವಕಾಶ ನೀಡಿ ಎಂದು ಮನವೊಲಿಸಿದಾಗ ಧರಣಿಯಿಂದ ಹಿಂದೆ ಸರಿದರು. ಧರಣಿಯಲ್ಲಿ ಈಟಿ ಕೋಟೆಪ್ಪ, ನಿಂಗಪ್ಪ, ಈಟಿ ರಾಮಣ್ಣ, ನೀಲಪ್ಪ, ಮಠದ ರಾಜಪ್ಪ, ಶರಣು, ಶಿವಪುತ್ರಪ್ಪ, ನಿರಲಿಗಿ ಸಿದ್ದಪ್ಪ, ಆರ್. ವಸಂತ, ಬಿ. ಸಂತೋಷ, ಎಂ. ನಾರಾಯಣರೆಡ್ಡಿ, ಮಾಬುಸಾಬ್, ದಸ್ತುಸಾಬ್, ದಿಡುಗಪ್ಪ ಭಾಗವಹಿಸಿದ್ದರು.