ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸಿಂಗಾಪುರ ಸಂಕಲ್ಪ ಸಾಕಾರಗೊಂಡಿಲ್ಲ

Vishwanath S
Updated On : 6 Apr 2013, 11:37 am

ಬಳ್ಳಾರಿ: ರೆಡ್ಡಿ ಬಳಗಕ್ಕೆ ಮತ್ತು ಶ್ರೀರಾಮುಲು ಸ್ಥಾಪಿಸಿದ ಬಿಎಸ್ಸಾರ್ ಪಕ್ಷದ ಕೇಂದ್ರ ಬಿಂದುವಾಗಿರುವ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ಇಡೀ ರಾಜ್ಯದಲ್ಲಿಯೇ ಗಮನ ಸೆಳೆದಿದೆ. ಈ ಕ್ಷೇತ್ರ ರೆಡ್ಡಿ ಸಹೋದರರು ಹಾಗೂ ಬಿ.ಶ್ರೀರಾಮುಲು ಅಸ್ತಿತ್ವದ ಪ್ರಶ್ನೆಗೆ ಚುನಾವಣಾ ಫಲಿತಾಂಶ ಉತ್ತರ ನೀಡುವ ಕ್ಷೇತ್ರ ಇದಾಗಿದೆ. ಈ ಹಿನ್ನೆಲೆಯಲ್ಲಿ ರೆಡ್ಡಿ ಸಹೋದರರು ಕ್ಷೇತ್ರದಲ್ಲಿ ಗೆಲವು ಸಾಧಿಸಬೇಕೆಂಬ ಅನಿವಾರ್ಯತೆ ಇದೆ. ಕಾಂಗ್ರೆಸ್‌ಗೆ ಪ್ರಾಬಲ್ಯ ಸಾಧಿಸುವ ಇಚ್ಛೆ. ಈ ಎರಡರ ಮಧ್ಯೆ ಕ್ಷೇತ್ರದ ಮತದಾರ ಯಾರಿಗೆ ಒಲಿಯುತ್ತಾನೆ ಎಂಬ ಕದನ ಕುತೂಹಲ ಕ್ಷೇತ್ರದಲ್ಲಿ ಏರ್ಪಟ್ಟಿದೆ.
2008ರಲ್ಲಿ ಪುನರ್ ವಿಂಗಡಣೆ ಸಂದರ್ಭದಲ್ಲಿ ಕ್ಷೇತ್ರದ ಸ್ವಲ್ಪಭಾಗ ನೂತನ ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಹರಿದು ಹಂಚಿಹೋಯಿತು. ಬಳ್ಳಾರಿ ನಗರದ ವಿಧಾನಸಭಾ ಕ್ಷೇತ್ರದಲ್ಲಿ 35 ವಾರ್ಡ್‌ಗಳಿದ್ದು, ಅದರಲ್ಲಿ 9 ವಾರ್ಡ್‌ಗಳು ಗ್ರಾಮೀಣ ಕ್ಷೇತ್ರಕ್ಕೆ ಹೋಗಿದ್ದರಿಂದ ಕ್ಷೇತ್ರದಲ್ಲಿ ಮುಸ್ಲಿಂ ಜನಸಂಖ್ಯೆ ಕಡಿಮೆಯಾಗಲು ಕಾರಣವಾಯಿತು. ಇದೀಗ ಕ್ಷೇತ್ರದಲ್ಲಿ ಲಿಂಗಾಯಿತ, ಮುಸ್ಲಿಂ, ಪರಿಶಿಷ್ಟ ಜಾತಿಯ ಪ್ರಭಾವವೇ ಹೆಚ್ಚಾಗಿದೆ. ಆದರೂ ಇಲ್ಲಿ ಜಾತಿ ಲೆಕ್ಕಾಚಾರಕ್ಕಿಂತ ಪಕ್ಷದ ಪ್ರಭಾವ, ವೈಯಕ್ತಿಕ ವರ್ಚಸ್ಸುಗಳೇ ಹೆಚ್ಚಾಗಿ ಪ್ರಭಾವ ಬೀರುತ್ತವೆ.
ನಿರೀಕ್ಷಿತ ಅಭಿವೃದ್ಧಿ ಇಲ್ಲ: ಬಳ್ಳಾರಿ ನಗರ ಕ್ಷೇತ್ರ ಮಹಾನಗರ ಪಾಲಿಕೆ ಹೊಂದಿದ್ದರೂ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಮಾಡಿಲ್ಲ. ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲ ಎನ್ನಬಹುದು. ಪ್ರಮುಖ ರಸ್ತೆಗಳ ಅಭಿವೃದ್ಧಿಯಾಗಿದೆ. ನಗರದಲ್ಲಿನ ಪಾರ್ಕ್‌ಗಳ ಅಭಿವೃದ್ಧಿಯಾಗಿವೆ. ವಿಷ್ಣುವರ್ಧನ್, ಅಂಬೇಡ್ಕರ್ ಪಾರ್ಕ್ ಸೇರಿದಂತೆ ಇತರ ಪಾರ್ಕ್‌ಗಳನ್ನು ಕ್ಷೇತ್ರದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ನಗರದಲ್ಲಿ ನೀರು ಪೂರೈಕೆ ಉದ್ದೇಶದಿಂದ ನೂರಾರು ಕೋಟಿ ವೆಚ್ಚದಲ್ಲಿ ಮೋಕಾದಿಂದ ಕುಡಿಯುವ ನೀರಿನ ಯೋಜನೆ ಪ್ರಗತಿ ಹಂತದಲ್ಲಿದೆ. ನಗರ ಪ್ರದೇಶದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೂ ಇನ್ನೂ ಹೆಚ್ಚು ಸಿಸಿ ರಸ್ತೆ ನಿರ್ಮಾಣ ಮಾಡಬೇಕಾಗಿದೆ. ಇದಲ್ಲದೇ ಇತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ ಕಾರ್ಯ ಪ್ರಗತಿ ಹಂತದಲ್ಲಿದೆ.
ಆದರೆ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಬೇಕಾಗಿದ್ದು ಸಾಕಷ್ಟು ಇದೆ. ನಗರವನ್ನು ಸಿಂಗಾಪುರ ಮಾಡುತ್ತೇವೆ ಎಂಬ ಶಾಸಕರ ಕಲ್ಪನೆ ಸಾಕಾರಗೊಂಡಿಲ್ಲ. ನಗರವು ನೈರ್ಮಲ್ಯದ ಕೊರತೆಯಿಂದ ಬಳಲುತ್ತಿದೆ. ನಗರದ ಒಳ ಬಡಾವಣೆಗಳು ಅಭಿವೃದ್ಧಿ ಕಂಡಿಲ್ಲ, ಕುಡಿಯುವ ನೀರಿನ ಸಮಸ್ಯೆ ಬೇಸಿಗೆಯಲ್ಲಿ ತೀವ್ರ ಉಲ್ಬಣಿಸುತ್ತಿದೆ. ಇನ್ನು ಕ್ಷೇತ್ರದ ವ್ಯಾಪ್ತಿಯಲ್ಲಿ ಶೌಚಾಲಯಗಳು, ವೈಯಕ್ತಿಕ ಶೌಚಾಲಯಗಳ ವ್ಯವಸ್ಥೆಯಾಗಬೇಕಿದೆ. ಸ್ಲಂಗಳು ಅಭಿವೃದ್ಧಿ ಕಾಣಬೇಕಿದೆ. ಸೂರಿಲ್ಲದವರಿಗೆ ಸೂರು ಒದಗಿಸಿಕೊಡುವುದು ಸೇರಿದಂತೆ ಹಲವಾರು ಸಮಸ್ಯೆಗಳಿಂದ ಬಳ್ಳಾರಿ ನಗರ ಕ್ಷೇತ್ರ ಬಳಲುತ್ತಿದೆ.
ಲಿಂಗಾಯಿತ, ಮುಸ್ಲಿಂ ವರ್ಗವೇ ನಿರ್ಣಾಯಕ
ಬಳ್ಳಾರಿ ನಗರ ಕ್ಷೇತ್ರದಲ್ಲಿ ಮುಸ್ಲಿಂ ಹಾಗೂ ಲಿಂಗಾಯಿತ ಸಮುದಾಯದ ಮತದಾರರು ಹೆಚ್ಚಾಗಿದ್ದಾರೆ.  92,422 ಪುರುಷ, 92, 794 ಮಹಿಳಾ ಮತದಾರರು ಸೇರಿ ಒಟ್ಟು 1,85,216 ಮತದಾರರ ಈ ಕ್ಷೇತ್ರ ಹೊಂದಿದಜೆ. ಇದರಲ್ಲಿ ಮುಸ್ಲಿಂ ಸಮುದಾಯ ಮತ್ತು ಲಿಂಗಾಯಿತ ಮತದಾರರು 40 ಸಾವಿರಕ್ಕೂ ಹೆಚ್ಚು ಇದ್ದಾರೆ. ಪರಿಶಿಷ್ಟ ಜಾತಿಯ ಮತದಾರರ 3ನೇ ಸ್ಥಾನದಲ್ಲಿದ್ದಾರೆ. ಇಲ್ಲಿ ಮುಸ್ಲಿಂ, ಲಿಂಗಾಯಿತ ಸಮುದಾಯದ ಮತಗಳು ಯಾರಿಗೆ ಬೀಳುತ್ತೋ ಆ ಅಭ್ಯರ್ಥಿ ಗೆಲವು ಖಂಡಿತ. ವಿಪರ್ಯಾಸವೆಂದರೆ ಇಲ್ಲಿಯವರೆಗೆ ಈ ಸಮುದಾಯದ ಒಬ್ಬರೂ ಕ್ಷೇತ್ರದಲ್ಲಿ ಆಯ್ಕೆಯಾಗಿಲ್ಲ. ಪುರುಷ ಮತದಾರರಿಗಿಂತ ಮಹಿಳಾ ಮತದಾರರೆ ಇಲ್ಲೂ ಮೇಲುಗೈ ಸಾಧಿಸಿದ್ದಾರೆ.
ಜಿದ್ದಾಜಿದ್ದಿನ ಚುನಾವಣೆ: ಈ ಕ್ಷೇತ್ರದಲ್ಲಿ ಬಿಎಸ್ಸಾರ್ ಕಾಂಗ್ರೆಸ್‌ನಿಂದ ಸೋಮಶೇಖರ ರೆಡ್ಡಿ ಅವರು ಹೆಸರು ಕೇಳಿಬರುತ್ತಿದ್ದರೂ, ಅಧಿಕೃತವಾಗಿ ಘೋಷಣೆಯಾಗಿಲ್ಲ. ಕಾಂಗ್ರೆಸ್‌ನಿಂದ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ. ಇದರಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂಬ ಗೊಂದಲ ಇನ್ನು ಮುಂದುವರಿದಿದೆ. ಟಿಕೆಟ್ ನೀಡುವಿಕೆಯಲ್ಲಿ ಕಾಂಗ್ರೆಸ್ ಎಡವಿದರೆ ಬಂಡಾಯದ ಬಿಸಿ ಎದುರಿಸಿದರೂ ಅಚ್ಚರಿಯಿಲ್ಲ. ಇನ್ನು ಜೆಡಿಎಸ್, ಬಿಜೆಪಿ, ಕೆಜೆಪಿ ಅಭ್ಯರ್ಥಿಯನ್ನು ಘೋಷಿಸಿಲ್ಲ. ಬಿಎಸ್ಸಾರ್, ಕಾಂಗ್ರೆಸ್ ಮಧ್ಯೆ ಪ್ರಬಲ ಪೈಪೋಟಿ ನಡೆಯಲಿದ್ದು, ಕಾಂಗ್ರೆಸ್ ಟಿಕೆಟ್ ಯಾರಿಗೆ ನೀಡುತ್ತಾರೆಂಬ ಆಧಾರದಡಿ ಕದನ ಕುತೂಹಲ ಮತ್ತಷ್ಟು ರಂಗೇರಲಿದೆ. ಒಟ್ಟಾರೆ ಜಿದ್ದಾಜಿದ್ದಿನ ಚುನಾವಣೆ ನಡೆಯಲಿದೆ ಎಂದೇ ಹೇಳಬಹುದು.
ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ
ಬಳ್ಳಾರಿ ನಗರದಲ್ಲಿ ಕುಡಿಯುವ ನೀರು, ಸ್ವಚ್ಛತೆಗೆ, ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ. ಬೆರಳಣಿಕೆಯ ರಸ್ತೆಗಳು ಬಿಟ್ಟರೆ, ಉಳಿದ ರಸ್ತೆಗಳು ಅಭಿವೃದ್ಧಿ ಕಂಡಿಲ್ಲ. 10 ವರ್ಷಗಳ ಅವಧಿಯಲ್ಲಿ ನಗರದ ಯಾವುದೇ ರಸ್ತೆಗಳು ಡಾಂಬರೀಕರಣ ಕಂಡಿಲ್ಲ. ವಿದ್ಯುತ್ ಕಣ್ಣಮುಚ್ಚಾಲೆ ಹೆಚ್ಚಾಗಿದೆ. ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ನಿರಾಶ್ರಿತರಿಗೆ ಈವರೆಗೆ ಸೂರೊದಗಿಸಿಲ್ಲ. ನಗರದ ಜನತೆಯ ನಿರೀಕ್ಷೆ ಸಂಪೂರ್ಣವಾಗಿ ಹುಸಿಯಾಗಿದೆ. ಶಾಸಕರು ಹೇಳಿಕೊಳ್ಳುವಂಥ ಅಭಿವೃದ್ಧಿ ಮಾಡುವಲ್ಲಿ ವಿಫಲರಾಗಿದ್ದಾರೆ.
- ಎನ್. ಪ್ರತಾಪ ರೆಡ್ಡಿ,ಕಾಂಗ್ರೆಸ್ ಮುಖಂಡ
ಮೂಲ ಸೌಲಭ್ಯ ಕೊರತೆ
ನಗರದಲ್ಲಿ ಕೆಲವೆ ರಸ್ತೆಗಳು ಅಭಿವೃದ್ಧಿಯಾಗಿದ್ದು, ಅವುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ಸಾರ್ವಜನಿಕರ ದೃಷ್ಟಿಯಿಂದ ಆಲೋಚನೆ ಮಾಡಿಲ್ಲ. ಕುಡಿಯುವ ನೀರಿನ ಪರಿಸ್ಥಿತಿ ಹೇಳತೀರದು. 15 ದಿನಗಳಿಗೊಮ್ಮೆ ಕೊಳಾಯಿ ನೀರು ಬರುತ್ತಿದೆ. ವಿದ್ಯುತ್ ಅಭಾವ ಹೆಚ್ಚಾಗಿದೆ. ಮೂಲ ಸೌಲಭ್ಯಗಳ ಕೊರತೆಯನ್ನು ನಗರದ ಜನತೆ ಎದುರಿಸುತ್ತಲೆ ಇದ್ದಾರೆ. ಇವುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಲ್ಲ.
- ಸಿದ್ಮಲ್ ಮಂಜುನಾಥ್, ಮತದಾರ
ನೀರಿನ ಕೊರತೆ ನೀಗಿಲ್ಲ
ಬೇಸಿಗೆ ಕಾಲದಲ್ಲಿ ಬಳ್ಳಾರಿ ನಗರದಲ್ಲಿ ನೀರಿನ ಕೊರತೆ ನೀಗಿಲ್ಲ. ಇನ್ನು ಬಡವರಿಗೆ ಸರಿಯಾಗಿ ಪಡಿತರ ಚೀಟಿ ವಿತರಣೆಯಾಗಿಲ್ಲ, ನಗರದಲ್ಲಿ ಸ್ಲಂ ಪ್ರದೇಶದಲ್ಲಿ ನೈರ್ಮಲ್ಯದ ಕೊರತೆ ಎದ್ದು ಕಾಣುತ್ತಿದೆ. ಅವುಗಳು ಅಭಿವೃದ್ಧಿಯನ್ನು ಕಂಡಿಲ್ಲ, ಅಭಿವೃದ್ಧಿ ಆಗಿರುವುದು ಕಡಿಮೆ, ಆಗಬೇಕಾಗಿದ್ದು ಸಾಕಷ್ಟು ಇದೆ. ರಸ್ತೆ, ಕುಡಿಯುವ ನೀರು, ವಿದ್ಯುತ್ ಸಮಸ್ಯೆ ಸಾಕಷ್ಟು ಇದೆ. ಆ ಕಡೆಗೆ ಗಮನ ಹರಿಸಿಲ್ಲ. -ಕುಂದಾಪುರ ನಾಗರಾಜ್, ಮತದಾರ.

-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement