ಸ್ಲಂ ಜನಾಂದೋಲನ ಸಮಿತಿ ಪ್ರಣಾಳಿಕೆ ಬಿಡುಗಡೆ
ಹೊಸಪೇಟೆ: ಸ್ಲಂ ಜನಾಂದೋಲನ-ಕರ್ನಾಟಕ ಹೊಸಪೇಟೆ ಸ್ಲಂ ಜನಜಾಗೃತಿ ಆಂದೋಲನ ಸಮಿತಿಯಿಂದ ವಿಧಾನಸಭೆ ಚುನಾವಣೆ-2013 ನಿಮಿತ್ತ ಪ್ರಣಾಳಿಕೆ ಬಿಡುಗಡೆ, ಬಾಬು ಜಗಜೀವನ್ರಾಂ ಜಯಂತಿಯನ್ನು ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ಆಚರಿಸಲಾಯಿತು. ಪ್ರಣಾಳಿಕೆಯನ್ನು ಡಾ. ಸುಲೋಚನಾ ಬಿಡುಗಡೆಗೊಳಿಸಿದರು.
ವಿಧಾನಸಭೆ ಚುನಾವಣೆ-2013 ಸ್ಲಂ ನಿವಾಸಿಗಳ ಪ್ರಣಾಳಿಕೆ ವಿವರ ಇಂತಿದೆ.
ಕರ್ನಾಟಕದಲ್ಲಿರುವ ಕೊಳಗೇರಿ ನಿವಾಸಿಗಳಿಗೆ ಭೂಮಿ ಹಕ್ಕನ್ನು ಖಾತರಿಗೊಳಿಸಿ ಭೂ ಒಡೆತನ ನೀಡಬೇಕು. ರಾಜ್ಯದ ಸುಮಾರು 5752 ಕೊಳಚೆ ಪ್ರದೇಶಗಳಲ್ಲಿ ಬದುಕುತ್ತಿರುವ ಕೊಳಗೇರಿ ನಿವಾಸಿಗಳಿಗೆ ಇದುವರೆಗೂ ಭೂ ಒಡೆತನ ನೀಡಿಲ್ಲ. ಹಾಗಾಗಿ ರಾಜ್ಯದಲ್ಲಿರುವ ಎಲ್ಲಾ ಕೊಳಗೇರಿಗಳನ್ನು ಒಂದೇ ಬಾರಿ ಕಾನೂನು ಮಾನ್ಯತೆ ನೀಡಿ ಸ್ಲಂ ಘೋಷಣೆ ಮಾಡಿ ಹಕ್ಕುಪತ್ರ ನೋಂದಣಿ ಪ್ರಮಾಣ ಪತ್ರವನ್ನು ನೀಡಬೇಕು.
ಕೊಳಗೇರಿಗಳ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯವನ್ನು ಘೋಷಿಸಿಸಬೇಕು. ಕರ್ನಾಟಕದ ಜನಸಂಖ್ಯೆಯಲ್ಲಿ ಒಂದು ಕೋಟಿಗೂ ಮೇಲ್ಪಟ್ಟು ನಗರವಂಚಿತ ಸಮುದಾಯಗಳು ವಾಸ ಮಾಡುತ್ತಿದ್ದು, ಸಾವಿರಾರು ಕೋಟಿ ಕೋಟಿಗಳು ಸ್ಲಂಗಳ ಅಭಿವೃದ್ಧಿಗೆ ಹರಿದು ಬರುತ್ತಿದ್ದು, ಈಗಿರುವ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಇದನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ವಸತಿ ಖಾತೆಯಿಂದ ಕೊಳಗೇರಿ ಅಭಿವೃದ್ಧಿ ಮಂಡಳಿಯನ್ನು ಬೇರ್ಪಡಿಸಿ ನಗರದ ಬಡಜನರ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವರನ್ನು ಮತ್ತು ಸಚಿವಾಲಯವನ್ನು ಘೋಷಿಸಬೇಕು.
2011ರ ಜನಗಣತಿ ಆಧಾರದ ಮೇಲೆ ಸ್ಲಂ ನಿವಾಸಿಗಳಿಗೆ ಬಜೆಟ್ನಲ್ಲಿ ಪಾಲು ನಿಗದಿಯಾಗಬೇಕು. ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ನಗರ ಬಡಜನರು, ಕೊಳಗೇರಿ ನಿವಾಸಿಗಳಿಗೆ ಮತ್ತು ನಗರವಂಚಿತ ಸಮುದಾಯಗಳಿಗೆ ಕರ್ನಾಟಕ ರಾಜ್ಯ ಸರ್ಕಾರದ ವಾರ್ಷಿಕ ಬಜೆಟ್ನಲ್ಲಿ ನಮ್ಮ ಜನಸಂಖ್ಯೆಗೆ ಅನುಗುಣವಾಗಿ ರಾಜಸ್ವದಲ್ಲಿ ಹಣವನ್ನು ಮೀಸಲಿಟ್ಟು ಕೊಳಗೇರಿ ನಿವಾಸಿಗಳ ನಾಗರಿಕ ಮೂಲಭೂತ ಸೌಲಭ್ಯಗಳಿಗೆ, ವಸತಿ ಮತ್ತು ಭೂಸ್ವಾಧೀನಕ್ಕೆ ಈ ಹಣವನ್ನು ಬಳಕೆಯಾಗುವಂತೆ ಮಾಡಬೇಕು ಎಂಬುದು ಪ್ರಣಾಳಿಕೆ ಪ್ರಮುಖ ಅಂಶ. ಸ್ಲಂ ಸಮಿತಿ ಉಪಾಧ್ಯಕ್ಷ ಸುನೀಲ್ ಅಧ್ಯಕ್ಷತೆ ವಹಿಸಿದ್ದರು. ರಾವುಲ ನಾಗಪ್ಪ, ಮಾಧವರಾವ್, ಬಾಬು ಜಗಜೀವನ್ರಾಂಸಂಘದ ಅಧ್ಯಕ್ಷ ಎಚ್.ಎಸ್. ವೆಂಕಪ್ಪ, ಮಹಿಳಾ ಘಟಕದ ಅಧ್ಯಕ್ಷ ಮೈಮುನ್ನೀಸಾ, ಮಂಜುಳಾ ಮಾಳ್ಗಿ, ಸಮಿತಿ ಸಂಚಾಲಕಿ ಎನ್. ಹುಲಿಗೆಮ್ಮ, ರಾಜ್ಯ ಸಂಘಟನಾ ಸಂಚಾಲಕ ರಾಮಚಂದ್ರ, ಮಾರೆಮ್ಮ, ನಾಗಲಕ್ಷ್ಮಿ, ವೆಂಕಮ್ಮ, ಗೀತಾಂಜಲಿ, ತಿಪ್ಪಮ್ಮ, ಗಿರೀಶ್, ವೆಂಕಟೇಶ್ ಉಪಸ್ಥಿತರಿದ್ದರು.