19ರಿಂದ ವಿರೂಪಾಕ್ಷೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ
ಕೊಪ್ಪಳ: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಕ್ಷೇತ್ರದ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ಏ. 19ರಿಂದ 27ರವರೆಗೆ ಜರುಗಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ, ಏ. 19ರಂದು ಸಂಜೆ ಶ್ರೀ ಪಂಪಾ ವಿರೂಪಾಕ್ಷೇಶ್ವರ ಸ್ವಾಮಿ ಬ್ರಹ್ಮೋತ್ಸ, ಸ್ವಸ್ತಿ ವಾಚನ, ಆಚಾರ್ಯಾದಿ ಋತ್ವಿಗ್ವರಣ, ಯಾಗಶಾಲಾ ಪ್ರವೇಶ, ರಕ್ಷಾಬಂಧನ, ಅಂಕುರಾರ್ಪಣೆ, ವಾಸ್ತು ಪೂಜೆ, ಕಲಶ ಸ್ಥಾಪನೆ, ಭೇರಿತಾಡನ, ಧ್ವಜಾರೋಹಣ, ಬಲಿಪ್ರದಾನ, ಸಿಂಹವಾಹನೋತ್ಸವ ಶ್ರೀ ಚಕ್ರತೀರ್ಥ ಕೋದಂಡ ರಾಮ ಸ್ವಾಮಿಯವರ ಸನ್ನಿಧಿಯಲ್ಲಿ ಶ್ರೀ ವಾಲ್ಮೀಕಿ ವಿರಚಿತ ಶ್ರೀ ಮದ್ರಾಮಾಯಣ ಪಾರಾಯಣ ಪ್ರಾರಂಭ ಹಾಗೂ ಜಪ ಪಾರಾಯಣಾಧಿಗಳು ಜರುಗಲಿವೆ.
ಏ. 20ರಂದು ಬೆಳಗ್ಗೆ ಸಿಂಹವಾಹನೋತ್ಸವ ಹಾಗೂ ರಾತ್ರಿ ಚಂದ್ರ ಮಂಡಲ ವಾಹನೋತ್ಸವ ಜರುಗಲಿದೆ. ಏ. 21ರಂದು ಬೆಳಗ್ಗೆ ಸೂರ್ಯಪ್ರಭ ವಾಹನೋತ್ಸವ ಹಾಗೂ ರಾತ್ರಿ ಶೇಷವಾಹನೋತ್ಸವ ಜರುಗಲಿದೆ. ಏ. 22ರಂದು ಬೆಳಗ್ಗೆ ಶೇಷವಾಹನೋತ್ಸವ ಹಾಗೂ ರಾತ್ರಿ ಪುಷ್ಪಮಂಟಪ ವಾಹನೋತ್ಸವ ಜರುಗಲಿದೆ. ಏ. 23ರ ಬೆಳಗ್ಗೆ 9.30ಕ್ಕೆ ಪುಷ್ಪಮಂಟಪ ವಾಹನೋತ್ಸವ ಹಾಗೂ ಶ್ರೀ ವಿರೂಪಾಕ್ಷ ವಿದ್ಯಾರಣ್ಯ ಪೀಠದ ಪ್ರಪ್ರಥಮ ಪೀಠಾಧೀಶ ಶ್ರೀ ವಿದ್ಯಾರಣ್ಯ ಮಹಾಸ್ವಾಮಿಗಳವರ ಜಯಂತಿ ಹಾಗೂ ರಾತ್ರಿ 9.30ಕ್ಕೆ ಶ್ರೀ ಪಂಪಾವಿರೂಪಾಕ್ಷೇಶ್ವರ ಸ್ವಾಮೀಜಿ ಕಲ್ಯಾಣೋತ್ಸವ ಹಾಗೂ ರಜತ ನಂದಿ ವಾಹನೋತ್ಸವ ಕಾರ್ಯಕ್ರಮ ಜರುಗಲಿದೆ. ಏ. 24ರ ಬೆಳಗ್ಗೆ ಹಾಗೂ ರಾತ್ರಿ ರಜತ ಗಜವಾಹನೋತ್ಸವ, ಏ. 25ರ ಬೆಳಗ್ಗೆ 10.45ಕ್ಕೆ ಬ್ರಹ್ಮರಥೋತ್ಸವ ಶ್ರೀ ಪಂಪಾವಿರೂಪಾಕ್ಷೇಶ್ವರ ಸ್ವಾಮಿ ಹಾಗೂ ಶ್ರೀ ವಿರೂಪಾಕ್ಷ ವಿದ್ಯಾರಣ್ಯ ಪೀಠಾಧಿಶ್ವರರ ನವರತ್ನ ಖಚಿತ ಕಿರೀಟದೊಂದಿಗೆ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಸಂಜೆ 4ಕ್ಕೆ ಧ್ವಜಗಳ ಹರಾಜು ಹಾಗೂ ರಥೋತ್ಸವ ಜರುಗಲಿದೆ.
ಏ. 26ರ ರಾತ್ರಿ ರಜತ ಅಶ್ವವಾಹನೋತ್ಸವ ಮೃಗಯಾತ್ರೆ (ಕಿರಾತಾಲಂಕಾರ), ಏ. 27ರ ಬೆಳಗ್ಗೆ ಪೂರ್ಣಾಹುತಿ ವಸಂತೋತ್ಸವ ಬೆಳಗ್ಗೆ 10.30ಕ್ಕೆ ಚಕ್ರತೀರ್ಥ ಶ್ರೀ ಕೋದಂಡರಾಮಸ್ವಾಮಿ ಕಲ್ಯಾಣೋತ್ಸವ ಹಾಗೂ ಬ್ರಹ್ಮರಥೋತ್ಸವ, ರಾ. 8.30ಕ್ಕೆ ಮನ್ಮುಖ ತೀರ್ಥದಲ್ಲಿ ಪಂಪಾ ವಿರೂಪಾಕ್ಷೇಶ್ವರ ಸ್ವಾಮಿಯ ತೆಪ್ಪೋತ್ಸವ ಜರುಗಲಿದೆ ಎಂದು ವಿಜಯನಗರ ಸಾಮ್ರಾಜ್ಯ ರಾಜಗುರು ಪರಂಪರಾ ಮತ್ತು ಕರ್ನಾಟಕ ಸಿಂಹಾಸನದ ಪೀಠಾಧಿಪತಿ ಹಂಪಿ ವಿರೂಪಾಕ್ಷ ವಿದ್ಯಾರಣ್ಯ ಸ್ವಾಮಿ ಹಾಗೂ ಶ್ರೀ ಪಂಪಾವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್. ಪ್ರಕಾಶ್‌ರಾವ್ ತಿಳಿಸಿದ್ದಾರೆ.