ಕಂಪ್ಲಿ: ಬಿಜೆಪಿ ಪ್ರಚಾರ ಆರಂಭ
ಕಂಪ್ಲಿ: ಇಲ್ಲಿಗೆ ಸಮೀಪದ ದೇವಲಾಪುರ ಕಣಿವಿ ಮಾರೆಮ್ಮ ದೇವಿಗೆ ಶುಕ್ರವಾರ ಕಂಪ್ಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ವಿಶೇಷ ಪೂಜೆ ನೆರವೇರಿಸುವುದರೊಂದಿಗೆ, ಬಿಜೆಪಿ ಪಕ್ಷದ ಗೆಲವಿಗಾಗಿ ಟಿಕೆಟ್ ಆಕಾಂಕ್ಷಿಗಳೊಂದಿಗೆ ಮತ ಯಾಚನೆ ಆರಂಭಿಸಿದರು.
ಕಂಪ್ಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಜಿ. ಲಿಂಗನಗೌಡ ಮಾತನಾಡಿ, 5 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಅವೆಲ್ಲವುಗಳನ್ನು ಮತದಾರರಿಗೆ ತಿಳಿಸುವ ಮೂಲಕ ಬಿಜೆಪಿ ಅಭ್ಯರ್ಥಿ ಗೆಲವಿಗಾಗಿ ಮತ ಯಾಚನೆ ಮಾಡುತ್ತೇವೆ ಎಂದರು. ಇದೇ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಗಳಿ ಪಂಪಾಪತಿ ಮಾತನಾಡಿದರು. ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಿ. ಶಿವಕುಮಾರ ಮತ್ತು ಸುಗ್ಗೇನಹಳ್ಳಿ ಗ್ರಾಪಂ ಸದಸ್ಯ ಬಿ. ಕರಿಯಪ್ಪ ನಾಯಕ ಜಂಟಿಯಾಗಿ ಮಾತನಾಡಿ, ನಮ್ಮಿಬ್ಬರಲ್ಲಿ ಯಾರೊಬ್ಬರಿಗೆ ಟಿಕೆಟ್ ನೀಡಿದರು ಸಹ ಗೆಲವಿಗಾಗಿ ಅವಿರತ ಶ್ರಮಿಸುತ್ತೇವೆ ಎಂದು ಹೇಳಿದರು.
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ, ಜಿಪಂ ಮಾಜಿ ಉಪಾಧ್ಯಕ್ಷೆ ಮಂಜಮ್ಮ ಮಲ್ಲೇಶ, ಬಿಜೆಪಿ ಮುಖಂಡರಾದ ಸುಗುಣ, ಶಿವಕೃಷ್ಣಮ್ಮ, ಎಸ್. ನಂದೆಪ್ಪ, ಡಿ.ಎಚ್.ಎಂ. ರವೀಂದ್ರ, ಸಿ. ಶರಣಗೌಡ, ಜೆ. ಶಂಕರ, ವಿ.ಟಿ. ರಾಜು, ಬಂಡಿ ಮಾರೆಪ್ಪ, ಜಿ. ಅಂಜಿನಪ್ಪ, ಕೆ. ಶಿಲ್ಪಾ ನಾಗರಾಜ, ಚಾಗಿ ವೆಂಕಟೇಶ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು.
ಪಾದಯಾತ್ರೆ ಆರಂಭ: ಕಂಪ್ಲಿ ಸಮೀಪದ ಮೆಟ್ರಿ ಗ್ರಾಮದ ಸಿದ್ಧಾರೂಢ ಪಾಂಡುರಂಗ ಯುವ ಸೇವಾ ಮಂಡಳಿ ವತಿಯಿಂದ 8ನೇ ವರ್ಷದ ಪಂಡರಾಪುರ ಪಾದಯಾತ್ರೆಯನ್ನು ಶುಕ್ರವಾರ ಆರಂಭಿಸಲಾಯಿತು. ಮೆಟ್ರಿ ಗ್ರಾಮದ ಪಾಂಡುರಂಗ ದೇವರಿಗೆ ಬೆಳಗ್ಗೆ ಪೂಜೆ ಸಲ್ಲಿಸುವುದರೊಂದಿಗೆ, ಪಾದಯಾತ್ರೆ ಆರಂಭಿಸಿದ ಸುಮಾರು 100ಕ್ಕೂ ಹೆಚ್ಚು ಪಾದಯಾತ್ರಿಗಳು ಏ. 21ರವರೆಗೆ ಸತತ 16 ದಿನಗಳ ಕಾಲ ಪಾದಯಾತ್ರೆ ಮಾಡಲಿದ್ದಾರೆ.