ಕಾಸು ಕೊಟ್ಟವರಿಗೆ ಕಾಂಗ್ರೆಸ್ ಟಿಕೆಟ್: ಆರೋಪ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಏ. 7
ಹರಪನಹಳ್ಳಿಯ ಮಾಜಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿರುವ ಹಿನ್ನೆಲೆಯಲ್ಲಿ ಸ್ಥಳೀಯ ಕಾಂಗ್ರೆಸ್ ಆಕಾಂಕ್ಷಿಗಳು ಮತ್ತು ಕಾರ್ಯಕರ್ತರನ್ನು ಕೆರಳುವಂತೆ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ಎಸ್. ದೂದಾನಾಯ್ಕ ಹೇಳಿದರು.
ಪಟ್ಟಣದ ಸಿದ್ದಲಿಂಗಪ್ಪ ಇವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸ್ಥಳೀಯ ಸಮಸ್ಯೆಯನ್ನು ಬಗೆ ಹರಿಸುತ್ತೇವೆಂದು ನಿರಂತರವಾಗಿ ಹೇಳಿಕೊಂಡು ಬಂದಿದ್ದ ಕಾಂಗ್ರೆಸ್ ಹೈಕಮಾಂಡ್, ಹೂವಿನಹಡಗಲಿ ಕ್ಷೇತ್ರದ ಜನತೆಗೆ ಮತ್ತೊಮ್ಮೆ ಆಘಾತ ಉಂಟು ಮಾಡಿದೆ. ಈ ಬಾರಿಯೂ ಮತ್ತೆ ಹೊರಗಿನವರಿಗೆ ಟಿಕೆಟ್ ನೀಡಿದ್ದಾರೆಂದು ದೂರಿದರು.
ಮತ್ತೊಮ್ಮೆ ಅನ್ಯಾಯ: ಡಿಸಿಸಿಗೊಂದು, ಕೆಪಿಸಿಸಿಗೊಂದು ಕಾಂಗ್ರೆಸ್ ಸಂವಿಧಾನ ಇದೆಯೇ? ತಮ್ಮನ್ನು ಈ ಹಿಂದೆ ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆಂದು ಹೇಳಿಕೊಂಡು ಬಂದು ಕೊನೆಗೆ ಸ್ಥಳೀಯರಿಗೆ ಟಿಕೆಟ್ ನೀಡದೆ ಅನ್ಯಾಯ ಮಾಡಿದೆ. ನಿರಂತರವಾಗಿ ತಾವು ರಾಜ್ಯ ಕೆಪಿಸಿಸಿ ಮುಖಂಡರಿಗೆ ಮನವಿ ಮಾಡಿ, ಈ ಹಿಂದೆ ಆಗಿರುವ ಅನ್ಯಾಯವನ್ನು ಮತ್ತೊಮ್ಮೆ ಮಾಡಬಾದೆಂದು ತಿಳಿಸಲಾಗಿತ್ತು. 40 ವರ್ಷಗಳಲ್ಲಿ ಕಳೆದ ಚುನಾವಣೆಯಿಂದ ಹೂವಿನಹಡಗಲಿ ಕ್ಷೇತ್ರ ಮೀಸಲು ಕ್ಷೇತ್ರವಾಗಿದೆ. ಈ ಕ್ಷೇತ್ರದ ಜನತೆಯ ಅನುಕೂಲಕ್ಕಾಗಿ ಮಾಡಿರುವ ಈ ಮೀಸಲಾತಿಯನ್ನು ಪಕ್ಕದ ಹರಪನಹಳ್ಳಿಯವರು ಲಾಭ ಪಡೆದುಕೊಂಡರೆ ಇಲ್ಲಿ ಮೀಸಲಾತಿಯಾದರೂ ಯಾಕೆ ಬೇಕಿತ್ತು ಎಂದು ಪ್ರಶ್ನಿಸಿದರು.
ಈ ಹಿಂದೆ ಹೊರಗಿನವರಿಗೆ ಟಿಕೆಟ್ ನೀಡಿ ಕಾಂಗ್ರೆಸ್ ಸೋತರೂ ಮತ್ತೆ ಹೊರಗಿನವರಿಗೆ ಟಿಕೆಟ್ ನೀಡಿ ಈ ಕ್ಷೇತ್ರದ ಎಸ್ಸಿ ಜನರಿಗೆ ಅನ್ಯಾಯ ಮಾಡಿದ್ದಾರೆ. ಈ ಕ್ರಮವನ್ನು ತಾವು ಬಲವಾಗಿ ಖಂಡಿಸುತ್ತೇವೆ. ಸೋಮವಾರ ಪಟ್ಟಣದಲ್ಲಿ ಸಭೆ ಕರೆಯಲಾಗಿದ್ದು, ಕ್ಷೇತ್ರದ ಕಾರ್ಯಕರ್ತರು, ಮುಖಂಡರು, ಆಕಾಂಕ್ಷಿಗಳು ಚರ್ಚೆ ಮಾಡಿ ಮುಂದಿನ ನಡೆಯನ್ನು ಪ್ರಕಟಿಸುತ್ತೇವೆಂದು ಹೇಳಿದರು.
ಜಿಲ್ಲಾ ಡಿಸಿಸಿ ಅಧ್ಯಕ್ಷರಿಗೆ ಕಾಂಗ್ರೆಸ್ ಸಂವಿಧಾನವೇ ಗೊತ್ತಿಲ್ಲ, ತಾವು 15-16 ಸ್ಥಳೀಯ ಆಕಾಂಕ್ಷಿಗಳು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದೆವು, ಆದರೆ ತಮ್ಮನ್ನ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂಬ ಕಾರಣ ಇಟ್ಟುಕೊಂಡು ಸ್ಥಳೀಯರನ್ನು ನಿರ್ಲಕ್ಷ್ಯ ಮಾಡಿದ್ದಾರೆಂದು ದೂರಿದರು.
ಹಂಪಸಾಗರದ ರಾಮಾನಾಯ್ಕ ಮಾತನಾಡಿ, ಕಾಂಗ್ರೆಸ್‌ನಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಮುಖಂಡರಿಗೆ ಯಾವ ಬೆಲೆಯೂ ಇಲ್ಲದಂತಾಗಿದೆ. ಸ್ಥಳೀಯರನ್ನು ಸಂಪೂರ್ಣ ತಿರಸ್ಕಾರ ಮಾಡಿದ್ದಾರೆ. ರಾಜ್ಯ ಕೆಪಿಸಿಸಿಯವರು ಕಾಸಿಗೆ ಕೈ ಟಿಕೆಟ್ ಮಾರಾಟ ಮಾಡಿಕೊಂಡು ಇಡೀ ಪಕ್ಷದ ನೀತಿ ಸಿದ್ಧಾಂತಗಳಿಗೆ ಎಳ್ಳುನೀರು ಬಿಟ್ಟಿದ್ದಾರೆ. ಸ್ಥಳೀಯರನ್ನು ಬಿಟ್ಟು ಹೊರಗಿನವರಿಗೆ ಟಿಕೆಟ್ ನೀಡಿರುವುದನ್ನು ಖಂಡಿಸಿ ಸಭೆ ನಡೆಸುತ್ತೇವೆ. ಸ್ಥಳೀಯ ವಲಸಿಗರೆಂಬ ಭೇದಕ್ಕೆ ಮತ್ತೆ ಕಾಂಗ್ರೆಸ್ ಹೈಕಮಾಂಡ್ ಜೀವ ತುಂಬಿದೆ ಎಂದರು.
ಈ ಸಂದರ್ಭದಲ್ಲಿ ಬಿ.ಎಲ್. ಶ್ರೀಧರ, ಸಿದ್ದಲಿಂಗಪ್ಪ ಉಪಸ್ಥಿತರಿದ್ದರು.