ಕೂಡ್ಲಿಗಿಗೆ ಕೊಡುಗೆ ಕಡಿಮೆ
ಕೂಡ್ಲಿಗಿ: ಹಳೆಯ ಕೊಟ್ಟೂರು ವಿಧಾನಸಭಾ ಕ್ಷೇತ್ರದ ಬಹುತೇಕ ಭಾಗವೇ 2008ರ ಕ್ಷೇತ್ರ ಮರು ವಿಂಗಡಣೆಯಲ್ಲಿ ಕೂಡ್ಲಿಗಿ ಎಸ್ಟಿ ಮೀಸಲು ವಿಧಾನಸಭೆ ಕ್ಷೇತ್ರವಾಗಿ ಮಾರ್ಪಟ್ಟಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಮೊದಲ ಬಾರಿಗೆ ಬಿ. ನಾಗೇಂದ್ರ ಅವರು ಆಯ್ಕೆಯಾಗಿದ್ದಾರೆ. ಈ ಬಾರಿ ಪಕ್ಷೇತರರಾಗಿ ಕಣಕ್ಕಿಳಿಯುತ್ತಿದ್ದಾರೆ.
2008ರ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಕೂಡ್ಲಿಗಿ ಕ್ಷೇತ್ರದ ಸ್ವಲ್ಪ ಭಾಗ ನೂತನ ಹಗರಿಬೊಮ್ಮನಹಳ್ಳಿ ಕ್ಷೇತ್ರಕ್ಕೆ ಸೇರಿದೆ. ಕೂಡ್ಲಿಗಿ ಕ್ಷೇತ್ರಕ್ಕೆ ಪಕ್ಕದ ಕೊಟ್ಟೂರು ಕ್ಷೇತ್ರದ ಹೆಚ್ಚಿ ಭಾಗ ಸೇರಿತು. ಕ್ಷೇತ್ರದಲ್ಲಿ ಒಟ್ಟು 1,66,190 ಮತದಾರರಿದ್ದು, 85,067 ಪುರುಷ ಮತ್ತು 81,123 ಮಹಿಳಾ ಮತದಾರರಿದ್ದಾರೆ. ಅದರಲ್ಲಿ ಸುಮಾರು 55 ಸಾವಿರಕ್ಕೂ ಹೆಚ್ಚು ವಾಲ್ಮೀಕಿ, 40 ಸಾವಿರಕ್ಕೂ ಹೆಚ್ಚು ಲಿಂಗಾಯತ, ಪರಿಶಿಷ್ಟ ಜಾತಿಯ 35 ಸಾವಿರ, 15 ಸಾವಿರ ಯಾದವ ಸಮುದಾಯ, 10 ಸಾವಿರಕ್ಕೂ ಹೆಚ್ಚು ಕುರುಬ ಸಮುದಾಯದ ಮತಗಳು, 10 ಸಾವಿರಕ್ಕೂ ಹೆಚ್ಚು ಮುಸ್ಲಿಂ ಮತದಾರರು ಇದ್ದಾರೆ. ಇಲ್ಲಿ ಲಿಂಗಾಯತ, ಪರಿಶಿಷ್ಟ ಜಾತಿ ಮತಗಳು ನಿರ್ಣಾಯಕವಾಗಲಿವೆ. ವಾಲ್ಮೀಕಿ ಮತಗಳು ಸಹಜವಾಗಿ ಎಲ್ಲ ಪಕ್ಷಗಳಿಗೆ ಹಂಚಿಹೋಗಲಿವೆ.
ಕ್ಷೇತ್ರದಲ್ಲಿ ಸಮಸ್ಯೆಗಳದ್ದೇ ಕೈಮೇಲು: ಪ್ರತಿವರ್ಷ ಬರಗಾಲದ ದವಡೆಗೆ ತುತ್ತಾಗುತ್ತಿರುವ ಕೂಡ್ಲಿಗಿ ತಾಲೂಕಿನ ಜನತೆಗೆ ಭದ್ರಾ ಮೇಲ್ದಂಡೆ ಯೋಜನೆ ಇನ್ನೂ ಗಗನ ಕುಸುಮವಾಗಿದೆ. ತಾಲೂಕಿನಲ್ಲಿ ನಿತ್ಯ ಫ್ಲೋರೈಡ್ ಯುಕ್ತ ನೀರು ಕುಡಿಯುತ್ತಿದ್ದು, ಜನತೆ ನೂರಾರು ರೋಗ-ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಕೂಡ್ಲಿಗಿ ಪಟ್ಟಣದಲ್ಲಿ ಸುವ್ಯವಸ್ಥಿತ ಬಸ್ ನಿಲ್ದಾಣವಿಲ್ಲದೆ ದಶಕಗಳಿಂದಲೂ ಪ್ರಯಾಣಿಕರು ಪರದಾಡುವಂತಾಗಿದೆ. ಹೊಸ ಬಸ್ಗಳಿಲ್ಲ, ಹಳ್ಳಿಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲ. ಬಾಡಿಗೆ ಕಟ್ಟಡಗಳಲ್ಲೇ ನಡೆಯುವ ಸರ್ಕಾರಿ ಕಚೇರಿಗಳಿಗೆ ಸ್ವಂತ ನೆಲೆ ಇಲ್ಲ. ಮಿನಿವಿಧಾನಸೌಧ ನೆನೆಗುದಿಗೆ ಬಿದ್ದಿದೆ. ನೂರಾರು ಕೆರೆಗಳ ಜೀರ್ಣೋದ್ಧಾರವಿಲ್ಲದೆ ಜೀವಸೆಲೆಯೂ ಇಲ್ಲವಾಗಿದೆ. ಹೀಗೆ ನೂರಾರು ಸಮಸ್ಯೆಗಳನ್ನು ಹೊದ್ದು ಮಲಗಿರುವ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿಗೂ ತತ್ವಾರ ಕಣ್ಣಿಗೆ ರಾಚುತ್ತದೆ. ಇಲ್ಲಿನ ಶಾಸಕರಂತೂ ದೂರವಾಣಿ ಕರೆಗೂ ಸಿಗುವುದು ಕಷ್ಟಸಾಧ್ಯ.
ತಾಲೂಕಿನ ಗುಡ್ಡಗಳಲ್ಲಿ ಹೆಚ್ಚಾಗಿ ಕರಡಿಗಳಿದ್ದು, ರೈತರ ಜಮೀನಿಗೆ ನುಗ್ಗಿ ದಾಂಧಲೆ, ರೈತರ ಮೇಲೆ ದಾಳಿ ನಡೆಸುತ್ತವೆ. ಇದರಿಂದ ಹಲವು ರೈತರು ಗಾಯಗೊಂಡರೆ, ಕೆಲವರು ಕೈಕಾಲು ಕೆಳೆದುಕೊಂಡಿದ್ದಾರೆ. ತಾಲೂಕಲ್ಲಿ ಕರಡಿಧಾಮ ಸ್ಥಾಪನೆ ಬೇಡಿಕೆ ಈಡೇರಿಲ್ಲ.
ಕೈ ಬಂಡಾಯ?: ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿಯಿಂದ ಗೆದ್ದ ಶಾಸಕ ಬಿ. ನಾಗೇಂದ್ರ, ಈ ಬಾರಿ ಬಿಜೆಪಿಗೆ ಗುಡ್ಬೈ ಹೇಳಿ ಆಪ್ತರಾದ ಶ್ರೀರಾಮುಲು ಅವರ ಬಿಎಸ್ಸಾರ್ಗೆ ಸೇರದೆ ದೂರ ಉಳಿದು, 5 ವರ್ಷಗಳ ಸಾಧನೆಯನ್ನೇ ಬಂಡವಾಳ ಮಾಡಿಕೊಂಡು ಪಕ್ಷೇತರನಾಗಿ ಕಣಕ್ಕಿಳಿಯಲು ಯೋಚಿಸಿದ್ದಾರೆ. ಕಳೆದ ಬಾರಿಯ ಪರಾಜಿತ ಕಾಂಗ್ರೆಸ್ನ ನರಸಿಂಹಗಿರಿ ವೆಂಕಟೇಶ್ಗೆ ಈ ಬಾರಿಯೂ ಕೈ ಟಿಕೆಟ್ ದೊರೆತಿದೆ. ಕಾಂಗ್ರೆಸ್ ಟಿಕೆಟ್ ವಂಚಿತ ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ ಬಂಡಾಯದ ಬಾವುಟ ಹಾರಿಸಿರುವುದರಿಂದ ಅವರ ನಡೆ ನಿಗೂಢ. ಕೆಜೆಪಿಯಿಂದ ಡಾ. ತರಸಾಲಪ್ಪಗೆ ಟಿಕೆಟ್ ದೊರೆತಿದೆ. ಬಿಜೆಪಿ, ಜೆಡಿಎಸ್, ಬಿಎಸ್ಸಾರ್ ಇನ್ನೂ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ.
ಆಶೋತ್ತರಗಳಿಗೆ ಸ್ಪಂದಿಸಿದ್ದೇನೆ
ಪಟ್ಟಣದಲ್ಲಿ ಸುಂದರ ದ್ವಿಪಥ ರಸ್ತೆ ನಿರ್ಮಾಣ, ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆಗಳು ಅಭಿವೃದ್ಧಿಯಾಗಿವೆ. ನೊಂದವರಿಗೆ ಅನ್ವೇಷಣೆ ವಾಹನದ ಮೂಲಕ ಸದಾ ಜನತೆಯ ಆಶೋತ್ತರಗಳಿಗೆ ಸ್ಪಂದಿಸಲಾಗಿದೆ. ಶಿಕ್ಷಣ ಹಾಗೂ ಕುಡಿಯುವ ನೀರಿನ ಬಗ್ಗೆ ಸಾಕಷ್ಟು ಯೋಜನೆಗಳು ಈಗಾಗಲೇ ಕಾರ್ಯಗತವಾಗಿದ್ದು, ಗ್ರಾಮೀಣ ಭಾಗಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವ ಮೂಲಕ ಜನತೆಗೆ ನೆಮ್ಮದಿಯ ಬದುಕು ಕಲ್ಪಿಸಿಕೊಡಲಾಗಿದೆ.
- ಬಿ. ನಾಗೇಂದ್ರ, ಶಾಸಕ
ಜನತೆಯಿಂದ ಹಿಡಿಶಾಪ
ಕಳೆದ 5 ವರ್ಷಗಳಲ್ಲಿ ಪಟ್ಟಣದ ದ್ವಿಪಥ ರಸ್ತೆ ಬಿಟ್ಟರೆ ಉಳಿದಂತೆ ಎಲ್ಲ ಕಾಮಗಾರಿಗಳು ಕೇವಲ ನಕ್ಷೆಗಳಲ್ಲಿ, ಯೋಜನೆಗಳಲ್ಲಿವೆ. ಕ್ಷೇತ್ರದ ಜನತೆಗೆ ಇದುವರೆಗೂ ಮೂಗಿನ ಮೇಲೆ ತುಪ್ಪ ಸವರುವ ಕೆಲಸ ನಡೆದಿದೆ. ಸುಸಜ್ಜಿತ ಬಸ್ ನಿಲ್ದಾಣ, ಭದ್ರಾ ಮೇಲ್ದಂಡೆಯಂತಹ ಯೋಜನೆಗಳು ಸಾಕಾರಗೊಂಡಿಲ್ಲ. ಕುಡಿಯುವ ನೀರು ಇಲ್ಲದೇ ಈಗಲೂ ಹಳ್ಳಿಗಳಲ್ಲಿ ಜನತೆ ಹಿಡಿಶಾಪ ಹಾಕುತ್ತಿದ್ದಾರೆ. ಇಡೀ ರಾಷ್ಟ್ರದಲ್ಲಿ ಅಪರೂಪವಾಗಿರುವ ಗಾಂಧೀಜಿ ಚಿತಾಭಸ್ಮವಿರುವ ಸ್ಮಾರಕವನ್ನು ಅಭಿವೃದ್ಧಿ ಮಾಡುವ ಗೋಜಿಗೆ ಶಾಸಕರು ಹೋಗಿಲ್ಲ.
- ಎಸ್. ವೆಂಕಟೇಶ್, ಕಾಂಗ್ರೆಸ್ ಅಭ್ಯರ್ಥಿ
ಉತ್ತಮ ಅಭಿವೃದ್ಧಿಯಾಗಿದೆ
ಹೈಟೆಕ್ ರಸ್ತೆಯಿಂದ ಇಡೀ ಕೂಡ್ಲಿಗಿ ಪಟ್ಟಣ ಸುಂದರಗೊಂಡಿದ್ದು, ಪ್ರಯಾಣಿಕರಿಗೆ, ಜನತೆಗೆ ಅನುಕೂಲವಾಗಿದೆ. ಅಲ್ಲದೆ ಕೂಡ್ಲಿಗಿ ತಾಲೂಕಿನ ಹಳ್ಳಿ, ಹಳ್ಳಿಗಳ ರಸ್ತೆಗಳು ಅಭಿವೃದ್ಧಿ ಕಂಡಿವೆ. ಇದುವರೆಗೂ ಇದ್ದ ಪರಿಸ್ಥಿತಿಗೆ ಹೋಲಿಸಿದರೆ ಕಳೆದ 5 ವರ್ಷಗಳಲ್ಲಿ ಎಂದೆಂದೂ ಕಾಣದ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಆದರೆ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆ ಸೇರಿದಂತೆ ತಾಲೂಕಿನ ಆಸ್ಪತ್ರೆಗಳೇ ರೋಗಗ್ರಸ್ತವಾಗಿದ್ದು, ವೈದ್ಯರಿಲ್ಲದೆ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕ್ಷೇತ್ರದ ಜನತೆಗೆ ಫ್ಲೋರೈಡ್ ಯುಕ್ತ ನೀರು ಕುಡಿಯುವ ದೌರ್ಭಾಗ್ಯ ಬಂದಿದೆ.
- ಪುರುಷೋತ್ತಮ, ಮತದಾರ
ಗುಳೆ ಹೋಗುವುದು ತಪ್ಪಿಲ್ಲ
ಕೂಡ್ಲಿಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದರೂ ಕೆಲ ಜ್ವಲಂತ ಸಮಸ್ಯೆಗಳು ಉಳಿದಿವೆ. ಕ್ಷೇತ್ರದಲ್ಲಿ ಕೂಡ್ಲಿಗಿ ಪಟ್ಟಣ, ಬೇರೆಡೆ ರಸ್ತೆಗಳ ಅಭಿವೃದ್ಧಿ ಮಾಡಿದ್ದರೂ ಕುಡಿಯುವ ನೀರು ಮುಂತಾದ ದೂರದೃಷ್ಟಿ ಯೋಜನೆಗಳು ಜಾರಿಯಾಗಿಲ್ಲ. ಕೆರೆಗಳ ಜೀರ್ಣೋದ್ಧಾರ, ಗುಳೆ ಹೋಗುವುದನ್ನು ತಪ್ಪಿಸಲು ಪರ್ಯಾಯ ಯೋಜನೆಗಳು, ಇತರ ಸಮಸ್ಯೆಗಳನ್ನು ಕ್ಷೇತ್ರ ಎದುರಿಸುತ್ತಿದೆ.
- ಯು. ನಾಗೇಶ್, ಮತದಾರ
-ಭೀಮಣ್ಣ ಗಜಾಪುರ