ತೇರುಮನೆ ಸೇರಿದ ತೇರುಗಡ್ಡೆ
ಕೊಟ್ಟೂರು: ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ಬೃಹತ್ ಗಾತ್ರದ ತೇರು ಗಡ್ಡೆ ಸಮೇತ ಗಾಲಿಗಳನ್ನು ತೇರುಮನೆಯ ಒಳಗೆ ಎಳೆಯುವ ಧಾರ್ಮಿಕ ಕಾರ್ಯಕ್ರಮ ಗುರುವಾರ ಸಂಜೆ ಶ್ರದ್ಧಾ ಭಕ್ತಿಗಳೊಂದಿಗೆ ನೆರವೇರಿತು. ಶ್ರೀಸ್ವಾಮಿಯ ರಥದ ಗಾಲಿಗಳನ್ನು ಪ್ರತಿ ವರ್ಷದ ಪದ್ಧತಿಯಂತೆ ಯುಗಾದಿ ಹಬ್ಬದ ಪಾಡ್ಯದ ದಿನದಂದು ತೇರು ಶೆಡ್ಡಿನೊಳಗೆ ಹಾಕುವ ಸಂಪ್ರದಾಯದಂತೆ ಹಿರೇಮಠದ ಧರ್ಮಕರ್ತ ಬಳಗ ಮತ್ತು ಕ್ರಿಯಾಮೂರ್ತಿ ಮಲ್ಲಿಕಾರ್ಜುನ ಸ್ವಾಮೀಜಿ ಆಸೀನರಾಗಿದ್ದ ತೇರುಗಡ್ಡೆಯನ್ನು ನೆರೆದಿದ್ದ ಭಕ್ತರು ಜಯಕಾರಗಳೊಂದಿಗೆ ಎಳೆದು ನಮಿಸಿದರು.
ಪಂಚಾಂಗ ಪಠಣ: ಯುಗಾದಿ ಹಬ್ಬದೊಂದಿಗೆ ಆರಂಭವಾದ ವಿಜಯನಾಮ ಸಂವತ್ಸರದ ನೂತನ ಪಂಚಾಂಗ ಪಠಣದ ಕೈಂಕರ್ಯ ಇಲ್ಲಿನ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ಹಿರೇಮಠದಲ್ಲಿ ಗುರುವಾರ ಸಂಜೆ ನೆಡೆಯಿತು. ಧರ್ಮಕರ್ತ ಬಳಗದ ಶೇಖರಯ್ಯ, ದೊಡ್ಡವೀರಯ್ಯ ಅವರು ಈ ಸಂದರ್ಭದಲ್ಲಿ ಹೊಸ ವರ್ಷದ ರಾಶಿ ಫಲಗಳನ್ನು ವಿವರಿಸಿದರು. ಸಿಂಹ, ಮಿಥುನ ಮತ್ತು ತುಲಾ ರಾಶಿಯವರು ಅತ್ಯುತ್ತಮ ಫಲದಾಯಕವಾಗಿ ಈ ವರ್ಷ ಏಳ್ಗೆ ಕಾಣಬಹುದಾಗಿದೆ ಎಂದು ಹೇಳಿದರು. ಮುಂಗಾರು ಮಳೆಗಿಂತ ಹಿಂಗಾರು ಮಳೆ ನೂತನ ವರ್ಷದಲ್ಲಿ ಚೆನ್ನಾಗಿ ಬರಲಿದ್ದು, ರೈತಾಪಿ ವರ್ಗದ ಬದುಕನ್ನು ಬೆಳಗಲಿವೆ. ಕಳೆದ ವರ್ಷಕ್ಕಿಂತ ಅತ್ಯುತ್ತಮ ಮಳೆ, ಬೆಳೆಯನ್ನು ಕಾಣಬಹುದಾಗಿದೆ ಎಂದರು.
ಧರ್ಮಕರ್ತ ಎ.ಎಂ.ಕೆ. ನಾಗರಾಜ, ಧಾರ್ಮಿಕ ದತ್ತಿ ಇಲಾಖೆಯ ಕೆ.ಜಿ. ಶಾಂತವೀರಪ್ಪ ಪಟ್ಟಣದ ಆಯಗಾರ ಬಳಗದವರು ಉಪಸ್ಥಿತರಿದ್ದರು.