ಕೈ ಟಿಕೆಟ್ ತಪ್ಪಲು ಕೊಂಡಯ್ಯ, ಅಲ್ಲಂ ಕಾರಣ
ಕೊಟ್ಟೂರು: ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ತಮಗೆ ದೊರಕದೆ ಇರುವುದಕ್ಕೆ ಕೆ.ಸಿ. ಕೊಂಡಯ್ಯ, ಅಲ್ಲಂ ವೀರಭದ್ರಪ್ಪನವರೆ ಕಾರಣ ಎಂದು ಕಾಂಗ್ರೆಸ್ ಟಿಕೆಟ್ ವಂಚಿತ ಕೆಜೆಪಿ ಅಭ್ಯರ್ಥಿ ಪಿ.ಎಚ್. ದೊಡ್ಡರಾಮಣ್ಣ ನೇರ ಆರೋಪ ಮಾಡಿದರು.
ಇದುವರೆಗೆ ಕಾಂಗ್ರೆಸ್ ಪಕ್ಷದ ಪ್ರತಿ ಕಾರ್ಯದಲ್ಲಿ ತಮ್ಮನ್ನು ಬಳಸಿಕೊಂಡು ಇದೀಗ ತಮಗೆ ದೊಡ್ಡ ಬಗೆಯಲ್ಲಿ ವಂಚನೆ ಗೈದಿದ್ದು, ಕಾಂಗ್ರೆಸ್ ಪಕ್ಷ ಹಾಗೂ ಮುಖಂಡರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲೆಂದೇ ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದೇನೆ ಎಂದರು.
ಭಾನುವಾರ ಇಲ್ಲಿನ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ದರ್ಶನಾಶೀರ್ವಾದ ಪಡೆದು, ಸರಳ ರೀತಿಯಲ್ಲಿ ಪ್ರಚಾರ ಕೈಗೊಂಡ ನಂತರ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನಿಂದ ಬಹುದೊಡ್ಡ ಪಾಠ ಕಲಿಯಲು ತಮಗೆ ಸುದೀರ್ಘ 40 ವರ್ಷಗಳು ಬೇಕಾದವು. ಸಾಮಾಜಿಕ ನ್ಯಾಯದಂತಹ ಸ್ಲೋಗನ್‌ಗಳನ್ನು ಬಳಸಿಕೊಂಡು ಪಕ್ಷದ ಮುಖಂಡರು ತಮ್ಮ ಸ್ವಾರ್ಥ ಸಾಧನೆ ಗೈಯುತ್ತಿದ್ದಾರೆ ಎಂದು ದೂರಿದರು. ಈ ಹಿಂದೆ ರೆಡ್ಡಿ ಬಣದವರು ಕೋಟ್ಯಂತರ ರುಪಾಯಿ ಆಮಿಷ ತೋರಿಸಿ ಬಿಜೆಪಿಗೆ ಸೆಳೆಯಲು ಪ್ರಯತ್ನಸಿದ್ದರು. ಆಗ ತಾವು ಕಾಂಗ್ರೆಸ್ಸಿಗೆ ಅಂಟಿಕೊಂಡು ಪಕ್ಷನಿಷ್ಠೆ ಮೆರೆದೆ. ಈ ಅಂಶಗಳು ಕಾಂಗ್ರೆಸ್ ಧುರೀಣರಿಗೆ ಬೇಕಿಲ್ಲ. ವಿದ್ರೋಹ ಮಾಡುವುದೇ ಪಕ್ಷದ ಸಿದ್ಧಾಂತವಾಗಿದೆ ಎಂದು ಕಾಂಗ್ರೆಸ್ ಟಿಕೆಟ್ ನೀಡದೆ ಇರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಇಂದು ನಾಮಪತ್ರ ಸಲ್ಲಿಕೆ: ಯಡಿಯೂರಪ್ಪ ರಾಜಕೀಯದಲ್ಲಿನ ತಮ್ಮ ಹಿರಿತನವನ್ನು ಗಮನಿಸಿ ತಮ್ಮನ್ನು ಗುರುತಿಸಿ ಇದೀಗ ತಮ್ಮ ಪಕ್ಷಕ್ಕೆ ಬರಮಾಡಿಕೊಂಡು ಸ್ಪರ್ಧಿಸಲು ತಮಗೆ ಹಗರಿಬೊಮ್ಮನಹಳ್ಳಿ ಕ್ಷೇತ್ರಕ್ಕೆ ಕೆಜೆಪಿಯ ಬಿ ಫಾರಂ ನೀಡಿದ್ದಾರೆ. ಅವರ ಆಶಯದಂತೆ ತಾವು ಏ. 15ರಂದು ನಾಮಪತ್ರ ಸಲ್ಲಿಸುವೆ. ಚುನಾವಣಾ ಪ್ರಚಾರಕ್ಕೆಂದು ಯಡಿಯೂರಪ್ಪನವರು ಕೊಟ್ಟೂರು ಮತ್ತು ಹಗರಿಬೊಮ್ಮನಹಳ್ಳಿಗೆ ಆಗಮಿಸಿ ಮತ ಯಾಚಿಸಲಿದ್ದಾರೆ ಎಂದರು.