ಭೀಮಾನಾಯ್ಕ ರಾಜಿನಾಮೆ ನೀಡಲಿ
ಸಂಡೂರು: ತಾಲೂಕಿನ ಚೋರನೂರು ಕ್ಷೇತ್ರದ ಜಿಪಂ ಸದಸ್ಯ ಭೀಮಾನಾಯ್ಕ ಸ್ವಹಿತಾಸಕ್ತಿಗಾಗಿ ರಾಜಕೀಯವನ್ನು ಬಳಸಿಕೊಳ್ಳುತ್ತ, ಆಗಾಗ್ಗೆ ಪಕ್ಷಾಂತರ ಹಾಗೂ ಕ್ಷೇತ್ರ ಬದಲಾವಣೆ ಮಾಡುತ್ತಿದ್ದಾರೆ. ಅವರಿಗೆ ನೈತಿಕತೆ ಇದ್ದರೆ ಜಿಪಂ ಸದಸ್ಯತ್ವಕ್ಕೆ ರಾಜಿನಾಮೆ ನೀಡಲಿ ಎಂದು ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಎಫ್. ಕುಮಾರನಾಯ್ಕ ಆಗ್ರಹಿಸಿದ್ದಾರೆ. ಭೀಮಾ ನಾಯ್ಕ ಅವರು ಸಂತೋಷ ಲಾಡ್ ಜತೆಗಿದ್ದು 2005ರಲ್ಲಿ ಜೆಡಿಎಸ್ನಿಂದ ತಾಲೂಕಿನ ಯಶವಂತನಗರ ಜಿಪಂ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದರು. ಆಮೇಲೆ ಕ್ಷೇತ್ರದ ಕಡೆ ತಿರುಗಿಯೂ ನೋಡಿಲ್ಲ. ಕಾಂಗ್ರೆಸ್ ಸೇರಿ 2010ರಲ್ಲಿ ನಡೆದ ಜಿಪಂ ಚುನಾವಣೆಯಲ್ಲಿ ಚೋರನೂರು ಕ್ಷೇತ್ರದಿಂದ ಆಯ್ಕೆಯಾದರು. ಇತ್ತೀಚೆಗೆ ಜಿಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಅಡ್ಡ ಮತ ಚಲಾಯಿಸಿದರು ಎಂದು ಭಾನುವಾರ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ಕುಮಾರ್ ದೂರಿದ್ದಾರೆ.
ಇಂದು ಶ್ರೀರಾಮುಲು ನಾಮಪತ್ರ
ಬಳ್ಳಾರಿ: ಬಿಎಸ್ಸಾರ್ ಕಾಂಗ್ರೆಸ್ ಪಕ್ಷದಿಂದ ಏ. 15ರಂದು ಪಕ್ಷದ ಸಂಸ್ಥಾಪಕ ಅಧ್ಯಕ್ಷ ಬಿ. ಶ್ರೀರಾಮುಲು ಸೇರಿದಂತೆ 54 ಜನರು ರಾಜ್ಯಾದ್ಯಂತ ನಾಮಪತ್ರ ಸಲ್ಲಿಸಲ್ಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಬಿ. ಶ್ರೀರಾಮುಲು, ಕಂಪ್ಲಿ ವಿಧಾನಸಭಾ ಕ್ಷೇತ್ರದಿಂದ ಶ್ರೀರಾಮುಲು ಅಳಿಯ, ಕ್ಷೇತ್ರದ ಹಾಲಿ ಶಾಸಕ ಟಿ.ಎಚ್. ಸುರೇಶ್ಬಾಬು, ರಾಯಚೂರು ಕ್ಷೇತ್ರದಿಂದ ನಟಿ ಪೂಜಾಗಾಂಧಿ, ಹರಪ್ಪನಹಳ್ಳಿಯಿಂದ ಸಿರಾಜ್ ಶೇಖ್ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದರು.