ಮೋಸ ಮಾಡಲ್ಲವೆಂದು ರಕ್ತದಲ್ಲಿ ಬರೆದು ಕೊಡುವೆ: ಬಿಎಸ್‌ವೈ
ಹೂವಿನಹಡಗಲಿ: ರಾಜ್ಯದ ಮತದಾರರು ಕೆಜೆಪಿಗೆ ಬೆಂಬಲಿಸಿದರೆ ಪ್ರಾಮಾಣಿಕ, ಸತ್ಯ, ನಿಷ್ಠೆಯಿಂದ ಕೆಲಸ ಮಾಡುತ್ತೇನೆ. ಬೇಕಾದರೇ ಇದನ್ನು ರಕ್ತದಲ್ಲಿ ಬರೆದು ಕೊಡುತ್ತೇನೆ. ಮತ ನೀಡಿದ ಮತದಾರರಿಗೆ ಮೋಸ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಪಟ್ಟಣದ ಹೊರವಲಯದಲ್ಲಿ ಭಾನುವಾರ ಕೆಜೆಪಿಯ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ, ಜಾತಿಯಿಂದ ಯಾರೂ ಬೆಳೆಯಲು ಸಾಧ್ಯವಿಲ್ಲ. ಹಣ, ಹೆಂಡ, ಅಧಿಕಾರ, ಜಾತಿ ವಿಷ ಬೀಜ ಬಿತ್ತಿ ಮತದಾರರಿಗೆ ಮೋಸ ಮಾಡುವ ಜಾಯಮಾನ ನನ್ನದಲ್ಲ. ದೇಶದಲ್ಲೇ ಮೊದಲ ಬಾರಿಗೆ ಕೃಷಿ ಬಜೆಟ್ ನೀಡಿದ್ದೇನೆ. 1 ಲಕ್ಷ ಕೋಟಿ ಬಜೆಟ್ ಏರಿಸಿ, ತೆರಿಗೆ ಸೋರಿಕೆ ತಡೆದು ರಾಜ್ಯವನ್ನು ಸಮಗ್ರ ಅಭಿವೃದ್ಧಿ ಮಾಡಿದ್ದೇನೆ ಎಂದರು.