ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಪ್ರಚಾರ ಮಸ್ತು: ಮುಖಂಡರು ಸುಸ್ತು

Lingaraj Badiger
Updated On : 17 Apr 2013, 1:01 am

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಏ. 16
ಹೂವಿನಹಡಗಲಿ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಈಗಗಾಲೇ ಪ್ರಮುಖ 5 ಪಕ್ಷಗಳು ತಮ್ಮ ಹುರಿಯಾಳುಗಳ ಹೆಸರನ್ನು ಘೋಷಿಸಿದ್ದು, ಕೆಲ ಅಭ್ಯರ್ಥಿಗಳಿಗೆ ಬಿ ಫಾರಂ ಸಿಕ್ಕು ಉಮೇದುವಾರಿಕೆ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ನೂರಾರು ಕಾರ್ಯಕರ್ತರನ್ನು ಕಟ್ಟಿಕೊಂಡು ಹಳ್ಳಿಗಳಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಮತದಾರರ ಚಿತ್ತ ಬದಲಿಸಿ ತಮ್ಮ ಪಕ್ಷದತ್ತ ಸೆಳೆದುಕೊಳ್ಳುವ ಕಾರ್ಯ ಭರದಿಂದ ಸಾಗಿದೆ. ಬಹುತೇಕ ಪಕ್ಷಗಳ ನಾಯಕರು ತಮ್ಮ ಗ್ರಾಮಗಳಿಗೆ ಭೇಟಿ ನೀಡುತ್ತಿರುವುದರಿಂದ ಕಾರ್ಯಕರ್ತರಿಗೆ ಹುಮ್ಮಸ್ಸಿನಿಂದ ಪಕ್ಷದ ಕೆಲಸ ಮಾಡಲು ನಾಯಕರು ಆಕ್ಷಿಜನ್ ತುಂಬುತ್ತಿರುವುದು ಸರ್ವೆ ಸಾಮಾನ್ಯವಾಗಿದೆ.
ಬೆಳಗಾದರೆ ಸಾಕು ವಿವಿಧ ಪಕ್ಷಗಳ ಅಭ್ಯರ್ಥಿಗಳಿಗೆ, ಮುಖಂಡರು ಮತ್ತು ಕಾರ್ಯಕರ್ತರಿಗೆ ಬೇಸಿಗೆಯ ಬಿಸಿಲಿನ ಚಿಂತೆ ಕಾಡುತ್ತಿದೆ. ಹೇಗಪ್ಪಾ ಈ ರಣರಣ ಬಿಸಿಲಿನಲ್ಲಿ ಪ್ರಚಾರ ಮಾಡೋದು ಎಂಬ ಚಿಂತೆ ಮುಖಂಡರಲ್ಲಿ ಕಾಡುತ್ತಿದೆ. ಬಿಟ್ಟೆನೆಂದರೂ ಬಿಡದೀ ಮಾಯೆ ಎಂಬಂತೆ ಬಿಸಿಲಾದರೇನು, ಮಳೆಯಾದರೇನು ಪಕ್ಷ ಸಂಘಟನೆ ಮಾಡುತ್ತಾ, ಮತದಾರರ ಓಲೈಕೆಗೆ ಇನ್ನಿಲ್ಲದ ತಂತ್ರಗಾರಿಕೆ ನಡೆಸುತ್ತಿದ್ದಾರೆ.
ಮರಕೋತಿ ಆಟ: ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಮರಕೋತಿ ಆಟ ಬಹುತೇಕ ಎಲ್ಲ ಕ್ಷೇತ್ರ, ಪಕ್ಷಗಳಲ್ಲಿ ನಡೆಯುತ್ತಿದೆ. ರಾಜಕೀಯವನ್ನು ಪಕ್ಕಾ ಕಮರ್ಷಿಯಲ್ ಆಗಿ ತೆಗೆದುಕೊಂಡಿರುವ ಕೆಲ ಪುಡಿ ಗುತ್ತಿಗೆದಾರರು ಗೆಲ್ಲುವ ಕುದುರೆ ಹಿಂದೆ ಹೋದರೆ ಮುಂಬರುವ ದಿನಗಳಲ್ಲಿ ತಾವು ತುಂಡು ಗುತ್ತಿಗೆ ಕೆಲಸಗಳನ್ನು ಮಾಡಿಕೊಂಡು ಸುಖದಿಂದ ಇರಬಹುದೆಂಬ ಲೆಕ್ಕಾಚಾರ ಪುಡಿ ಗುತ್ತಿದಾರರಲ್ಲಿದೆ. ಹೀಗಾಗಿ ಗೆಲ್ಲುವ ಅಭ್ಯರ್ಥಿಗಳ ಬೆನ್ನು ಬಿದ್ದಿದ್ದಾರೆ.
ಜಾತ್ರೆಯತ್ತ ಅಭ್ಯರ್ಥಿಗಳ ಚಿತ್ತ: ಕ್ಷೇತ್ರದ ನಾನಾ ಕಡೆಗಳಲ್ಲಿ ಧಾರ್ಮಿಕ ಹಿನ್ನೆಲೆಯುಳ್ಳ ಜಾತ್ರೆಗಳು ನಡೆಯುತ್ತಿರುವುದು ಈಗ ಹೆಚ್ಚಾಗಿದೆ. ಇದೇ ಸಂದರ್ಭವನ್ನು ಸದುಪಯೋಗ ಪಡಿಸಿಕೊಂಡು ಚುನಾವಣೆ ಲಾಭ ಪಡೆಯಲು ಅಭ್ಯರ್ಥಿಗಳ ಚಿತ್ತ ಜಾತ್ರೆಯತ್ತ ನೆಟ್ಟಿದೆ.
ಕ್ಷೇತ್ರದ ಬನ್ನಿಕಲ್ಲು ಗ್ರಾಮದ ಆಂಜನೇಯ ಸ್ವಾಮಿ ಜಾತ್ರೆಗೆ ಕೆಲ ಅಭ್ಯರ್ಥಿಗಳು ಭೇಟಿನೀಡಿ ದೇವರ ದರ್ಶನ ಪಡೆದು ಎಲ್ಲರ ಗಮನ ಸೆಳೆಯಲು ಹರಸಾಹಸ ಪಟ್ಟಿದ್ದಾರೆ.
ಸಮಸ್ಯೆ ಮರೆತ ಮತದಾರ: ತುಂಗಭದ್ರಾ ನದಿ ತೀರದಲ್ಲಿ ಅವ್ಯಾಹತವಾಗಿ ಅಕ್ರಮ ಮರಳು ಮಾಫಿಯಾ ದಂಧೆಗೆ ತುಂಗಭದ್ರೆ ಒಡಲು ನಲುಗಿ ಹೋಗಿದ್ದು, ಮರಳು ಎತ್ತುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿದು ಹೋಗಿದೆ. ನದಿ ತಟದಲ್ಲೇ ಇದ್ದರೂ ಕುಡಿಯುವ ನೀರಿಗೆ ಹಾಹಾಕಾರ ಮಾತ್ರ ಹಲವು ಗ್ರಾಮಗಳಿಗೆ ತಪ್ಪಿಲ್ಲ. ಗ್ರಾಮಗಳಿಗೆ ನಿರಂತರ ಶುದ್ಧ ಕುಡಿಯುವ ನೀರು, ಅಕ್ರಮ ಮರಳು ದಂಧೆಗೆ ಕಡಿವಾಣ, ರಸ್ತೆ ಅಭಿವೃದ್ಧಿ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳ ಬೇಡಿಕೆಗಳು ಮತದಾರರಿಂದ ಮರೀಚಿಕೆಯಾಗಿವೆ.
ಕ್ಷೇತ್ರದ ಹಳ್ಳಿಗಳಲ್ಲಿ ಅಭ್ಯರ್ಥಿಗಳು ಪ್ರಚಾರಕ್ಕೆ ಬಂದಾಗ ಮತದಾರರು ವೈಯಕ್ತಿಕ ಸ್ವಾರ್ಥ ಲಾಭದ ಬೇಡಿಕೆ ಮುಂದಿಡುತ್ತಿದ್ದಾರೆ ಹೊರತು, ರಾಷ್ಟ್ರೀಯ ಸಂಪತ್ತಾಗಿರುವ ಮರಳನ್ನು ಕೊಳ್ಳೆ ಹೊಡೆದರೂ ಯಾವ ಪಕ್ಷದ ಅಭ್ಯರ್ಥಿಯನ್ನು ತಡೆಗಟ್ಟುವಂತೆ ಮತ್ತು ಶುದ್ಧ ಕುಡಿಯುವ ನೀರು ಪೂರೈಕೆ ವಿಷಯ ಚರ್ಚೆಯಾಗದಿರುವುದು ತುಂಬಾ ನೋವಿನ ಸಂಗತಿ.
ಈ ಹಿಂದೆ ಗ್ರಾಮದ ಹಿರಿಯರು ಒಂದೆಡೆ ಸೇರಿ ಗ್ರಾಮಕ್ಕೆ ಅಗತ್ಯವಿರುವ ಪ್ರಮುಖ ಬೇಡಿಕೆಗಳ ಪಟ್ಟಿ ನೀಡಿ ಮುಂಬರುವ ದಿನಗಳಲ್ಲಿ ಇಂತಹ ಕೆಲಸಗಳಿಗೆ ಒತ್ತು ನೀಡಿದರೆ ಮಾತ್ರ ತಮ್ಮನ್ನ ಬೆಂಬಲಿಸುವ ಸೂಚನೆ ನೀಡುತ್ತಿದ್ದರು. ಆದರೆ ಆ ಹಿಂದಿನ ಗಟ್ಟಿತನದ ಮಾತು, ಸ್ಪಷ್ಟ ಬೇಡಿಕೆಗಳು ಈ ಚುನಾವಣೆಯಲ್ಲಿ ಮರೆಯಾಗುತ್ತಿರುವುದಕ್ಕೆ ಮತದಾರ ಮೈ ಮರೆತು ಮತದಾನ ಮಾಡುವುದೆ ಕಾರಣ ಎಂಬ ಮಾತು ಕೇಳಿ ಬರುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement