ಬಿಎಸ್ಸಾರ್ ಪಕ್ಷದ ಅಭ್ಯರ್ಥಿ ಭೀಮಾನಾಯ್ಕ ಜೆಡಿಎಸ್ಗೆ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಏ. 16
ಅದನ್ ಬಿಟ್ಟು ಇದು, ಇದನ್ ಬಿಟ್ಟು ಅದು ಎಂಬ ಮಾತನ್ನೇ ಪಾಲಿಸಿರುವ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಘೋಷಿತ ಅಭ್ಯರ್ಥಿ ಎಸ್. ಭೀಮಾನಾಯ್ಕ ತಮ್ಮ ನಿರ್ಧಾರವನ್ನು ಹಠಾತ್ತನೆ ಬದಲಾಯಿಸಿ ಜೆಡಿಎಸ್ ಸೇರಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲೂ ಜೆಡಿಎಸ್ ಅಭ್ಯರ್ಥಿಯಾಗಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಭೀಮಾನಾಯ್ಕ ನಂತರದ ದಿನಗಳಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡು ಜಿಪಂ ಸದಸ್ಯರಾಗಿದ್ದರು. ಕಾಂಗ್ರೆಸ್ಸಿನ ಪ್ರಬಲ ಆಕಾಂಕ್ಷಿಯಾಗಿದ್ದ ಅವರು, ಕೆಲ ತಿಂಗಳ ಹಿಂದೆ ನಡೆದ ಜಿಪಂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ಇತರೆ ನಾಲ್ವರು ಸದಸ್ಯರೊಂದಿಗೆ ಬಿಎಸ್ಸಾರ್ ಕಾಂಗ್ರೆಸ್ ಜತೆ ಕೈಜೋಡಿಸಿ ಬಿಎಸ್ಸಾರ್ ಅಧಿಕಾರ ಪಡೆಯುವಂತೆ ಮಾಡಿದ್ದರು.
ಭೀಮಾನಾಯ್ಕ ಅವರನ್ನು ಕಾಂಗ್ರೆಸ್ನಿಂದ ಅಮಾನತುಗೊಳಿಸಲಾಗಿತ್ತು. ನಂತರದ ದಿನಗಳಲ್ಲಿ ಬಿಎಸ್ಸಾರ್ ಸೇರ್ಪಡೆಗೊಂಡ ಅವರು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಪಕ್ಷದ ಅಭ್ಯರ್ಥಿಯಾಗಿ ಬಿಂಬಿತರಾಗಿದ್ದರು. ಬಿಎಸ್ಸಾರ್ ಕೂಡ ಇವರಿಗೆ ಟಿಕೆಟ್ ಘೋಷಣೆ ಮಾಡಿತ್ತು. ಆದರೆ ಕೆಲ ವಿದ್ಯಮಾನಗಳನ್ನು ಅರಿತ ಇವರು ಇದೀಗ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ನಾಮಪತ್ರ: ಬುಧವಾರ ಜೆಡಿಎಸ್ ಅಭ್ಯರ್ಥಿಯಾಗಿ ಭೀಮಾನಾಯ್ಕ ಹಗರಿಬೊಮ್ಮನಹಳ್ಳಿಯಲ್ಲಿ ನಾಮಪತ್ರ ಸಲ್ಲಿಸಲಿದ್ದು, ಈಗಾಗಲೆ ಜೆಡಿಎಸ್ ಜಿಲ್ಲಾಧ್ಯಕ್ಷ ಸೂರ್ಯನಾರಾಯಣ ರೆಡ್ಡಿ, ಪಕ್ಷದ ಅಧಿಕೃತ ಬಿ ಫಾರಂನ್ನು ಭೀಮಾನಾಯ್ಕರಿಗೆ ತಲುಪಿಸಿದ್ದಾರೆ. ಭೀಮಾನಾಯ್ಕ ಜೆಡಿಎಸ್ ಸೇರಿ ಸ್ಪರ್ಧಿಸಿರುವುದು ತಮಗೆ ಖುಷಿ ತಂದಿದೆ. ಅವರ ಆಗಮನವನ್ನು ಸ್ವಾಗತಿಸುತ್ತೇವೆ ಎಂದು ಜೆಡಿಎಸ್ ಸ್ಥಳೀಯ ಮುಖಂಡ ಎನ್. ಗೋಪಿ ತಿಳಿಸಿದರು.