ಶ್ರೀರಾಮುಲು ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ
ಬಳ್ಳಾರಿ: ಬಿ. ಶ್ರೀರಾಮುಲು ಅವರು ಸುಳ್ಳು ಭರವಸೆ ನೀಡಿ, ಹಲವು ವರ್ಷಗಳಿಂದ ದಿನ ದೂಡುತ್ತಾ ಸಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿಲ್ಲ ಎಂದು ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಸುಂಡಿ ಹೊನ್ನೂರಪ್ಪ ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಜನರು ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಗ್ರಾಮೀಣ ಜನರು ಈಗಲೂ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಒದಗಿಸಿಲ್ಲ, ಇನ್ನು ಶೌಚಾಲಯ ವ್ಯವಸ್ಥೆ, ರಸ್ತೆ ಅಭಿವೃದ್ಧಿಯಂತೂ ಕನಿಷ್ಟ ಪ್ರಮಾಣದಲ್ಲೂ ಕಾಳಜಿ ವಹಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬದಲಾವಣೆಯನ್ನು ಕ್ಷೇತ್ರದ ಮತದಾರ ಬಯಸುತ್ತಿದ್ದಾರೆ ಎಂದರು. ಕೇವಲ ಸುಳ್ಳು ಭರವಸೆಗಳಿಂದ ಜನರ ಸಮಸ್ಯೆಗಳ ಪರಿಹಾರವಾಗುವುದಿಲ್ಲ. ಬಾಯಲ್ಲೇ ಅಭಿವೃದ್ಧಿ ಮಂತ್ರ ಜಪಿಸುತ್ತಿದ್ದಾರೆ. ಇದರಿಂದಾಗಿ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಜನರು ಬೇಸತ್ತು ಹೋಗಿದ್ದಾರೆ. ಕುಡಿಯುವ ನೀರಿಗೂ ಒದ್ದಾಟವಿದೆ. ಹತ್ತು ವರ್ಷಗಳ ಕಾಲ ಶಾಸಕರಾಗಿದ್ದ ಶ್ರೀರಾಮುಲು, ಜನರಿಗೆ ಯಾವ ಕೆಲಸ ಮಾಡಿಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.
ಜನರು ಬದಲಾವಣೆಯನ್ನು ಬಯಸಿದ್ದು, ಕಾಂಗ್ರೆಸ್ಗೆ ಈ ಬಾರಿ ಮತದಾರರು ಒಲಿಯುತ್ತಾರೆ ಎಂಬ ಭರವಸೆ ಇದ್ದು, ಈ ಬಾರಿ ತಮ್ಮ ಗೆಲವು ಖಚಿತ. ರಾಜ್ಯದೆಲ್ಲೆಡೆ ಕಾಂಗ್ರೆಸ್ಗೆ ಬೆಂಬಲ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ತಮಗೆ ಬಿಎಸ್ಸಾರ್ ಪಕ್ಷವೆ ನೇರ ಎದುರಾಳಿಯಾಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕ್ಷೇತ್ರದಲ್ಲಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ. ತಮ್ಮ ಮಾತು ಕೇವಲ ಭರವಸೆಗೆ ಸೀಮಿತವಾಗದೆ ಕಾರ್ಯರೂಪಕ್ಕೆ ತರಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅಸುಂಡಿ ನಾಗರಾಜಗೌಡ, ವೈ. ಕಗ್ಗಲ್ ಸಮುದ್ರರಾಜ್, ಅಲ್ಲಾಭಕ್ಷ, ಪ್ರಭಾಕರ, ಗಂಗಪ್ಪ ರೂಪನಗುಡಿ, ಶ್ರೀನಿವಾಸ ವೀರಾಪುರ ಮತ್ತಿತರರಿದ್ದರು.
--
ಸ್ವಾವಲಂಬಿ ಕ್ಷೇತ್ರವನ್ನಾಗಿಸುವುದು ನಮ್ಮ ಗುರಿ: ಹೇಮಂತಕುಮಾರ್
ಹೂವಿನಹಡಗಲಿ: ಈ ಬಾರಿ ಹೂವಿನಹಡಗಲಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್ಸಾರ್ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಮತ ನೀಡಿದರೆ ತಾವು ಮೊದಲ ಆದ್ಯತೆಯಾಗಿ ಸ್ವಾಲಂಬಿ ಕ್ಷೇತ್ರವನ್ನಾಗಿ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಸೋಮವಾರ ಮಿನಿ ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈವರೆಗಿನ ಸರ್ಕಾರಗಳು ಯೋಜನೆಗಳು ಸವಕಳಿ ನಾಣ್ಯಗಳಾಗಿವೆ. ಆದರೆ, ಗ್ರಾಮೀಣ ಭಾಗದ ಮಹಿಳೆಯರು, ಯುವಕರು, ರೈತರು ಸ್ವಾಲಂಬನೆಯಿಂದ ಬದುಕು ದಾರಿಯನ್ನು ತೋರಿಸಿಲ್ಲ ಆದರಿಂದ ಇದಕ್ಕೆ ಮೊದಲ ಆದ್ಯತೆ ನೀಡಿತ್ತೇವೆಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆ, ರೈತರಿಗೆ ಅನುಕೂಲವಾಗುವ ನೀರು ಸದ್ಬಳಕೆ ಮಾಡಿಕೊಳ್ಳಲು ಚೆಕ್ಡ್ಯಾಂಗಳ ನಿರ್ಮಾಣ, ಸಹಕಾರಿ ಕ್ಷೇತ್ರದ ಮೂಲಕ ಮಹಿಳೆಯರಿಗೆ ಗೃಹ ಕೈಗಾರಿಕೆಗಳ ಮೂಲಕ ದೈನಂದಿನ ಬದುಕಿಗೆ ಅಗತ್ಯವಿರುವ ವಸ್ತುಗಳ ತಯಾರಿಕೆ ಮಾಡಿ ಆ ಮೂಲಕ ಸ್ವಾಲಂಬನೆ ಸಾಧಿಸಿ ಸ್ವಾಭಿಮಾನದಿಂದ ಬದುಕುವ ವಾತವರಣ ಮೂಡಿಸುತ್ತೇನೆಂದು ಹೇಳಿದರು.
ಸರ್ಕಾರ ಸಾರ್ವಜನಿಕರಿಂದ ಸಂಗ್ರಹಿಸಿರುವ ತೆರಿಗೆಯು ಸಾಕಷ್ಟು ಪ್ರಮಾಣದಲ್ಲಿ ಸೋರಿಕೆಯಾಗುತ್ತಿದೆ, ವಸತಿಯಂತಹ ಯೋಜನೆಗಳನ್ನು ಪದೆ ಪದೇ ಮಂಜೂರು ಮಾಡದೆ ವೈಜ್ಞಾನಿಕ ತಳಹದಿ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಬೇಕೆಂಬ ಕನಸು ಹೊಂದಿದ್ದೇನೆಂದ ಅವರು, ವೋಟ್ ಬ್ಯಾಂಕ್ಗಾಗಿ ಬಹುತೇಕ ಪಕ್ಷಗಳು ಜಾತಿ ಆಧಾರದ ಮೇಲೆ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ, ಇದರಿಂದ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.