ನಾಮಪತ್ರ ಸಲ್ಲಿಕೆಗೆ ಕೈ ಕಾರ್ಯಕರ್ತರ ವಿರೋಧ
ಹಗರಿಬೊಮ್ಮನಹಳ್ಳಿ: ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಎಲ್. ಮಾರೆಣ್ಣ ಅವರಿಗೆ ಯಾವುದೆ ಕಾರಣಕ್ಕೂ ನಾಮಪತ್ರ ಸಲ್ಲಿಸಲು ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರೇ ಬಿಗಿಪಟ್ಟು ಹಿಡಿದ ಘಟನೆ ಬುಧವಾರ ಇಲ್ಲಿನ ತಾಲೂಕು ಕಚೇರಿ ಬಳಿ ನಡೆಯಿತು.
ಕ್ಷೇತ್ರದ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸ್ಥಳೀಯರಿಗೆ ಟಿಕೆಟ್ ನೀಡದೇ ಹೊರಗಿನ ಬಂದ ಮಾರೆಣ್ಣ ಅವರಿಗೆ ನೀಡಲಾಗಿದೆ. ಪಕ್ಷದ ಕ್ರಮವನ್ನು ಉಗ್ರವಾಗಿ ಖಂಡಿಸಲು ನಾವು ಮಾರೆಣ್ಣಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡುವುದಿಲ್ಲ ಎಂದು ಒಕ್ಕೊರಲಿನಿಂದ ಆಗ್ರಹಿಸಿದರು. ಇದರಿಂದಾಗಿ ಕೆಲಹೊತ್ತು ತಾಲೂಕು ಕಚೇರಿ ಮುಂಭಾಗದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಪರಿಸ್ಥಿತಿಯ ಸೂಕ್ಷ್ಮತೆ ಆರಿತ ಪೊಲೀಸರು ಪರ್ಯಾಯ ಮಾರ್ಗದಿಂದ ಅಭ್ಯರ್ಥಿಗೆ ಪ್ರವೇಶ ಕಲ್ಪಿಸಿಕೊಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಗೆ ನಾಮಪತ್ರ ಸಲ್ಲಿಸಲು ಅನುವು ಮಾಡಿಕೊಟ್ಟರು. ಕೊಟ್ಟೂರಿನ ಕಾಂಗ್ರೆಸ್ ಮುಖಂಡ ಹರ್ಷವರ್ಧನ್, ಆರ್. ರಾಮನಗೌಡ, ಎಚ್.ಎಂ. ನಾಗರಾಜ ಮಾರೆಣ್ಣ ಅವರ ಜತೆ ಇದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಸ್ಥಳೀಯ ಮುಖಂಡರ ಗೈರು ಹಾಜರಾತಿ ಎದ್ದುಕಾಣುತ್ತಿತ್ತು. ಇದರಿಂದಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ಮತ್ತಷ್ಟು ಹೆಚ್ಚಾಗಿದೆ. ಪರ್ಯಾಯ ಮಾರ್ಗದಿಂದ ತೆರಳಿ ನಾಮಪತ್ರ ಸಲ್ಲಿಸಿದ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಇತ್ತ ಕಚೇರಿ ಮುಂಭಾಗದಲ್ಲಿ ನೆರೆದಿದ್ದ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಪಕ್ಷದ ವರಿಷ್ಠರ ವಿರುದ್ಧ ಕಿಡಿಕಾರಿದರು.