ಹೂವಿನಹಡಗಲಿ 22 ನಾಮಪತ್ರ ಸಲ್ಲಿಕೆ
ಹೂವಿನಹಡಗಲಿ: ಹೂವಿನಹಡಗಲಿ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು ಬುಧವಾರ ಕೊನೆ ದಿನವಾಗಿದ್ದು, 8 ನಾಮಪತ್ರ ಸಲ್ಲಿಕೆಯಾಗಿವೆ, ಒಟ್ಟಾರೆ 15 ಮಂದಿ ವಿವಿಧ ಪಕ್ಷಗಳ ಅಭ್ಯರ್ಥಿಗಳಿಂದ 22 ನಾಮಪತ್ರ ಸಲ್ಲಿಕೆಯಾಗಿವೆ.
ಜೆಡಿಎಸ್ನಿಂದ ಡಾ. ಎಲ್.ಪಿ. ಕಠಾರಿನಾಯ್ಕ, ಸಿಪಿಐ(ಎಂಎಲ್)ನಿಂದ ರಾಘವೇಂದ್ರ ನಾಯ್ಕ, ಎಎನ್ಸಿಯಿಂದ ಎ.ಕೆ. ಹೊನ್ನೂರಪ್ಪ, ಪಕ್ಷೇತರರಾಗಿ ನಿವೃತ್ತ ತಹಸೀಲ್ದಾರ್ ಶಿವಪ್ಪ, ಜಿ. ಬುಳ್ಳಪ್ಪ, ರಾಮಾಂಜನಿ, ಪುತ್ರೇಶ, ಹಲಗಿ ಸುರೇಶ ನಾಮಪತ್ರ ಸಲ್ಲಿಸಿದ್ದಾರೆಂದು ಚುನಾವಣಾಧಿಕಾರಿ ಕೆ. ರಾಮಪ್ಪ ತಿಳಿಸಿದ್ದಾರೆ.
ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಬುಳ್ಳಪ್ಪ
ಹೂವಿನಹಡಗಲಿ: ಚುನಾವಣೆ ಆರಂಭದಿಂದಲ್ಲೂ ಕಾಂಗ್ರೆಸ್ಗೆ ಬಂಡಾಯ ಎಂಬುದು ಬೇತಾಳನಂತೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಜು. ಬುಳ್ಳಪ್ಪ ನಾಮಪತ್ರ ಸಲ್ಲಿಸಿದ್ದಾರೆ.
ಇಲ್ಲಿನ ಮಿನಿ ವಿಧಾನಸೌಧದಲ್ಲಿ ಹೂವಿನಹಡಗಲಿ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಹೈಕಮಾಂಡ್ ಸ್ಥಳೀಯ ಅಭ್ಯರ್ಥಿಗಳಿಗೆ ಮತ್ತು ಮತದಾರರಿಗೆ ಸೆಡ್ಡು ಹೊಡೆದು ಮಾಜಿ ಶಾಸಕರೊಬ್ಬರಿಗೆ ಟಿಕೆಟ್ ನೀಡಿದೆ. ಇದರಿಂದ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಿಗೆ ತುಂಬಾ ನೋವು ಉಂಟಾಗಿದೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆಂದು ಹೇಳಿದರು.
ಕಳೆದ 60 ವರ್ಷಗಳಿಂದ ಪರಿಶಿಷ್ಟ ಜಾತಿ ಜನಾಂಗಗಳು ಕಾಂಗ್ರೆಸ್ ಬೆಂಬಲಿಸಿ ಮತ ನೀಡುತ್ತಾ ಬಂದಿದ್ದಾರೆ. ಪಕ್ಷದಲ್ಲಿ ಮುಖ್ಯವಾಹಿನಿಯಲ್ಲಿರುವ ಮುಖಂಡರು ಕಾಂಗ್ರೆಸ್ಗೆ ಎಷ್ಟು ಬಾರಿ ಮತ ಹಾಕಿದ್ದಾರೆಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಯಾವ ಕಾರಣಕ್ಕೂ ಕಣದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕ್ಷೇತ್ರದ ಮತದಾರರು ಯಾವ ತೀರ್ಪು ಕೊಟ್ಟರೂ ಅದನ್ನು ಸ್ವೀಕರಿಸಲು ಸಿದ್ಧರಾಗಿದ್ದು, ಒಂದು ವೇಳೆ ಕ್ಷೇತ್ರದ ಮತದಾರರು ತಮಗೆ ಮತದಾನ ಮಾಡಿ ಗೆಲವು ತಂದು ಕೊಟ್ಟರೆ ಮತ್ತೆ ಕಾಂಗ್ರೆಸ್ ಸೇರುವುದಾಗಿ ತಿಳಿಸಿದರು.