ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬೆಂಗಳೂರೇತರ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ

Vishwanath S
Updated On : 21 Apr 2013, 1:19 am

ಕ.ಪ್ರ. ವಾರ್ತೆ  ಬಳ್ಳಾರಿ  ಏ.20
ಸರ್ವರಿಗೂ ಸಮಪಾಲು, ಸಮಬಾಳು ಸಿದ್ಧಾಂತ, ಸಮಗ್ರ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ ಗುರಿ, ಆರ್ಥಿಕ ಸ್ವಾತಂತ್ರ್ಯ ಮತ್ತು ಸ್ವಾವಲಂಬನೆಯ ಕನಸು. ಇವುಗಳ ಸಾಧನೆಗೆ ಗುಣಮಟ್ಟದ ಶಿಕ್ಷಣ, ಉದ್ಯೋಗ, ಉತ್ತಮ ವಸತಿ ಹಾಗೂ ಸುಧಾರಿತ ಆರೋಗ್ಯ ಸೇವೆಗೆ ಒತ್ತು. ಗ್ರಾಮೀಣ ಕರ್ನಾಟಕಕ್ಕೂ ಜಾಗತೀಕರಣ ಸ್ಪರ್ಶದ ಕ್ರಿಯಾಯೋಜನೆ. ಇದು 'ಬಡವರ, ಶ್ರಮಿಕರ, ರೈತರ' ಕಾಂಗ್ರೆಸ್ ಪ್ರಣಾಳಿಕೆಯ ಒಟ್ಟಾರೆ ಸಾರಾಂಶ.
ಶನಿವಾರ ಬಿಎಸ್ಸಾರ್ ಕಾಂಗ್ರೆಸ್ ಕಚೇರಿಯಲ್ಲಿ ಆರು ಪುಟಗಳ ಚುನಾವಣಾ ಪ್ರಣಾಳಿಕೆಯನ್ನು ಪಕ್ಷದ ಸಂಸ್ಥಾಪಕ ಅಧ್ಯಕ್ಷ ಬಿ. ಶ್ರೀರಾಮುಲು, ಮುಖಂಡರಾದ ರವೀಂದ್ರ ರೇಷ್ಮೆ ಹಾಗೂ ವಿರೂಪಾಕ್ಷಪ್ಪ ಬಿಡುಗಡೆ ಮಾಡಿದರು. ಬಿ. ಶ್ರೀರಾಮುಲು ಮಾತನಾಡಿ, 'ಸರ್ಕಾರಿ ಶಾಲೆಗಳಲ್ಲಿ ಕನ್ನಡದ ಜತೆಗೆ ಇಂಗ್ಲಿಷ್ ಕಲಿಕೆಗೆ ಆದ್ಯತೆ ನೀಡಬೇಕು. 1ನೇ ತರಗತಿಯಿಂದಲೇ ಇಂಗ್ಲಿಷ್ ಕಲಿಕೆಗೆ ಅವಕಾಶ ನೀಡಿದರೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ' ಎಂದು ತಿಳಿಸಿದರು.
ವಿಭಿನ್ನವಾಗಿ ಪ್ರಣಾಳಿಕೆ ಬಿಡುಗಡೆ: ಬಿಎಸ್ಸಾರ್ ಕಾಂಗ್ರೆಸ್ ಪ್ರಣಾಳಿಕೆಯನ್ನು ಬಡವ, ರೈತ ಹಾಗೂ ಶ್ರಮಿಕರಿಂದ ವಿಭಿನ್ನವಾಗಿ ಬಿಡುಗಡೆ ಮಾಡಿಸಲಾಯಿತು. ಪಕ್ಷದ ಪ್ರಚಾರಕ್ಕೆ ಏ. 21ರಂದು ಬಳ್ಳಾರಿ ತಾಲೂಕಿನ ಚೇಳ್ಳಗುರ್ಕಿ ಗ್ರಾಮದಿಂದ ಚಾಲನೆ ನೀಡಲಾಗುತ್ತದೆ. ಏ. 24ರಂದು ಶ್ರೀರಾಮುಲು ಅವರ ಪಾದಯಾತ್ರೆಗೆ ಒಂದು ವರ್ಷವಾಗುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಬೆಳಗ್ಗೆ 9ರಿಂದ 12ರ ವರೆಗೆ ಪಾದಯಾತ್ರೆ ಮಾಡುತ್ತಾರೆ. ಮಂಗಳೂರಿನಲ್ಲಿ ಎಸ್‌ಡಿಪಿಐನ 7 ಅಭ್ಯರ್ಥಿಗಳಿಗೆ, ಚಾಮರಾಜನಗರದಲ್ಲಿ ವಾಟಾಳ್ ನಾಗರಾಜ್‌ಗೆ, ಉಡುಪಿಯಲ್ಲಿ 4 ಪಕ್ಷೇತರರಿಗೆ ಬಿಎಸ್ಸಾರ್ ಕಾಂಗ್ರೆಸ್ ಬೆಂಬಲ ನೀಡಲಿದೆ ಎಂದು ಪಕ್ಷದ ಮುಖಂಡ ರವೀಂದ್ರ ರೇಷ್ಮೆ ಹೇಳಿದರು.
ಪ್ರಣಾಳಿಕೆಯ ಪ್ರಮುಖ ಅಂಶಗಳು:
- ಯಜಮಾನ ಪರಂಪರೆ, ಕೌಟುಂಬಿಕ ಪಾಳೇಗಾರಿಕೆ ಮತ್ತು ಗುಲಾಮಿ ನಿಷ್ಠೆಗೆ ಪ್ರತಿಯಾಗಿ ಸ್ವಾಭಿಮಾನಿ ಕರ್ನಾಟಕ ಸ್ಥಾಪನೆ.
- ಹೋರಾಟ ಮತ್ತು ಅಧಿಕಾರ ರಾಜಕಾರಣದ ನಡುವಿನ ಅಂತರ ನಿವಾರಿಸಲು ಆದ್ಯತೆ.
- 'ತಾಯಿ ಮಡಿಲು' ಯೋಜನೆ ಜಾರಿ. ಶಾಲೆಗೆ ಹೋಗುವಂತೆ ಮಕ್ಕಳನ್ನು ಉತ್ತೇಜಿಸುವ ತಾಯಂದಿರಿಗೆ ವಿಶೇಷ ಪ್ರೋತ್ಸಾಹಧನ.
- ಸಾಮಾನ್ಯ ಪದವಿ ಅಥವಾ ವೃತ್ತಿ ಶಿಕ್ಷಣದ ಕಾಲೇಜುಗಳ ಬಡ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ.
-ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲು ಪ್ರತಿ ಜಿಲ್ಲೆಯಲ್ಲಿ ಒಂದು ಪ್ರೊ. ಎಲ್.ಜಿ. ಹಾವನೂರ್ ಪ್ರತಿಭಾ ವಿಕಾಸ ಕೇಂದ್ರ ಸ್ಥಾಪನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement