ಆನಂದ್ ಸಿಂಗ್ ಬಿರುಸಿನ ಪ್ರಚಾರ
ಹೊಸಪೇಟೆ: ವಿಜಯನಗರ (ಹೊಸಪೇಟೆ) ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಮಂಗಳವಾರ ನಗರದ ವಿವಿಧ ವಾರ್ಡ್ಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಮತದಾರರನ್ನು ಉದ್ದೇಶಿಸಿ ಮಾತನಾಡಿದ ಆನಂದ್, ಇದು ಪ್ರತಿಷ್ಠೆಯ ಕ್ಷೇತ್ರವಾಗಿದ್ದು, ಇಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿರುವುದು ಕ್ಷೇತ್ರದ ಜನರಿಗೆ ಪ್ರತಿ ಗ್ರಾಮದಲ್ಲೂ ನೋಡಲು ಸಿಗುತ್ತಿವೆ. ಇದನ್ನು ಗಮನಿಸಿ ತಮ್ಮನ್ನು ಮತ್ತೆ ಆಯ್ಕೆ ಮಾಡುವಂತೆ ಮನವಿ ಮಾಡಿದರು.
ತಾವು ಮೊದಲ ಬಾರಿಗೆ ಕ್ಷೇತ್ರದ ಶಾಸಕರಾದಾಗ ಸಾಕಷ್ಟು ಸಮಸ್ಯೆಗಳಿದ್ದವು. ಅವುಗಳನ್ನು ಬಗೆಹರಿಸುವ ಇಚ್ಛಾಶಕ್ತಿಯಿಂದ ನಗರೋತ್ಥಾನ ಯೋಜನೆಯಡಿ ಅನುದಾನ ತಂದು ಅಭಿವೃದ್ಧಿಗೆ ಬಳಸಿದೆವು. ಈಗ ಹೊಸಪೇಟೆ ಸ್ಪಲ್ಪಮಟ್ಟಿಗೆ ಸುಂದರವಾಗಿ ಕಾಣುವಂತಾಗಿದೆ. ಇನ್ನೂ ಕೆಲ ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದ್ದು, ಮತ್ತೆ ತಮ್ಮನ್ನು ಆಯ್ಕೆ ಮಾಡುವಂತೆ ವಿನಂತಿಸಿಕೊಂಡರು. ನಗರದ ಚಪ್ಪರದಳ್ಳಿ, ಕಬ್ಬೇರು ಪೇಟೆ, ತಾಲೂಕು ಕ್ರೀಡಾಂಗಣ, ಡ್ಯಾಂ ರಸ್ತೆ ಮುಂತಾದ ಪ್ರದೇಶಗಳಿಗೆ ತೆರಳಿ ಮತ ಯಾತನೆ ನಡೆಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್. ಚಂದ್ರಬಾಬು, ನಗರಸಭೆ ಮಾಜಿ ಅಧ್ಯಕ್ಷ ಎಂ. ಅಮ್ಜದ್, ಮಾಜಿ ಸದಸ್ಯರಾದ ಉಸ್ಮಾನ್, ಎಸ್. ಗಾಳೆಪ್ಪ, ರಹಿಮಾನ್, ತಾಲೂಕು ಬಿಜೆಪಿ ಅಧ್ಯಕ್ಷ ವಿನಾಯಕ ಸ್ವಾಮಿ, ಸ್ಥಳೀಯ ಮುಖಂಡ ವೈ. ಯಮುನೇಶ್ ಇದ್ದರು.