ಧಾರ್ಮಿಕೋತ್ಸವಕ್ಕೆ ತಟ್ಟಿದ ನೀತಿ ಸಂಹಿತೆ ಬಿಸಿ
ಕೊಟ್ಟೂರು: ಧಾರ್ಮಿಕ ದಿನಾಚರಣೆ ಸೇರಿ ಪ್ರತಿ ತಿಂಗಳು ದೇವಸ್ಥಾನಗಳಲ್ಲಿ ಧಾರ್ಮಿಕೋತ್ಸವ ಆಚರಿಸಬೇಕು ಎನ್ನುವ ಧಾರ್ಮಿಕ ದತ್ತಿ ಇಲಾಖೆಯ ಆದೇಶಕ್ಕೆ ಚುನಾವಣಾ ನೀತಿ ಸಂಹಿತೆ ಬಿಸಿ ತಟ್ಟಿದೆ.
ಯುಗಾದಿ ದಿನವನ್ನು ಇನ್ನು ಮುಂದೆ ಧಾರ್ಮಿಕ ದಿನಾಚರಣೆಯಾಗಿ ಪ್ರತಿ ವರ್ಷ ಆಚರಿಸುವ ಕಾರ್ಯಕ್ರಮಕ್ಕೆ ಚಾಲನೆ ದೊರಕಲಿದೆ ಎಂದು ಸಾರಿಕೊಂಡಿದ್ದ ಇಲಾಖೆಯ ಆಶಯ ಕೇವಲ ಕಾಗದ ಪತ್ರಗಳಿಗೆ ಸೀಮಿತವಾದಂತಾಗಿದೆ.
ಚುನಾವಣೆ ನೀತಿ ಸಂಹಿತೆಯ ನೆಪವೊಡ್ಡಿ ಧಾರ್ಮಿಕ ದಿನ ಆಚರಣೆಗೆ ಸಿದ್ಧತೆ ಕೈಗೊಳ್ಳಬೇಕಿದ್ದ ಇಲಾಖಾಧಿಕಾರಿಗಳು ಪೂಜೆಗೆ ಮಾತ್ರ ಕಾರ್ಯಕ್ರಮವನ್ನು ಸೀಮಿತಗೊಳಿಸಿ ಕೈ ತೊಳೆದುಕೊಂಡಿದ್ದರು. ಇದರೊಂದಿಗೆ ಪ್ರತಿ ಮಾಸಿಕ ಧಾರ್ಮಿಕೋತ್ಸವ ಕಾರ್ಯಕ್ರಮಕ್ಕೂ ಇದೇ ಕಾರಣ ನೀಡಿ ಹಲವು ದೇವಸ್ಥಾನದ ಅಧಿಕಾರಿಗಳು ತಮ್ಮ ಇಲಾಖೆಯ ಆಯುಕ್ತರೇ ಹೊರಡಿಸಿರುವ ಆದೇಶಕ್ಕೆ ಎಳ್ಳು ನೀರು ಬಿಡತೊಡಗಿದ್ದಾರೆ.
ಪ್ರತಿ ತಿಂಗಳ ಧಾರ್ಮಿಕೋತ್ಸವ ಸಮಾರಂಭದಲ್ಲಿ ವಿಶೇಷ, ಸಭೆ, ಉಪನ್ಯಾಸ, ಸಂಗೀತ ಕಾರ್ಯಕ್ರಮ ಆಯೋಜಿಸಬೇಕೆಂದು ಆಯುಕ್ತರು ರಾಜ್ಯದ ಎಲ್ಲ ದೇವಸ್ಥಾನಗಳಿಗೆ ಆದೇಶಿಸಿದ್ದರು.
ಕಾರ್ಯಕ್ರಮ ಅನುಷ್ಠಾನಗೊಳಿಸಬೇಕಿದ್ದ ಮುಜರಾಯಿ ಇಲಾಖೆಯ ಅಧೀನ ಅಧಿಕಾರಿಗಳು ತಮ್ಮ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಇದೀಗ ಆಯೋಜಿಸಲು ಮುಂದಾಗದೇ ಪ್ರತಿಯೊಂದಕ್ಕೂ ಚುನಾವಣಾ ನೀತಿ ಸಂಹಿತೆಯತ್ತ ಬೆರಳುಮಾಡಿ ತೋರಿಸತೊಡಗಿದ್ದಾರೆ. ಕೇವಲ ಪೂಜೆ ಕಾರ್ಯಕ್ರಮಗಳಿಗೆ ಮಾತ್ರ ಧಾರ್ಮಿಕ ದಿನಾಚರಣೆ ಮತ್ತು ಧಾರ್ಮಿಕೋತ್ಸವ ಸಮಾರಂಭವನ್ನು ಸೀಮಿತಗೊಳಿಸಿರುವ ಅಧಿಕಾರಿಗಳು ಮಾರ್ಚ್ ತಿಂಗಳಿಂದ ಎ.ಬಿ. ಗ್ರೇಡ್ ದೇವಸ್ಥಾನಗಳಲ್ಲಿ ಪೂರ್ಣ ಪ್ರಮಾಣದ ಕಾರ್ಯಕ್ರಮಗಳಿಗೆ ಚಾಲನೆ ನೀಡಬೇಕಿತ್ತು.
ಆಯುಕ್ತರ ಆದೇಶವನ್ನು ಕೆಲ ದೇವಸ್ಥಾನಗಳ ಅಧಿಕಾರಿಗಳು ತಮ್ಮ ಮೂಗಿನ ನೇರಕ್ಕೆ ಬಳಸಿಕೊಂಡು ಘೋಷಿತ ಕಾರ್ಯಕ್ರಮ ನಡೆಸಲು ಹಿಂದೇಟು ಹಾಕುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಇಲ್ಲಿನ ಜನತೆಯ ಪ್ರಶ್ನೆಯಾಗಿದೆ.