ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕಟ್ಟಡ ದುರಂತ ಪ್ರಕರಣ 'ನೆಲಸಮ'

Vishwanath S
Updated On : 24 Apr 2013, 10:33 am

ಕ.ಪ್ರ.ವಾರ್ತೆ  ,   ಬಳ್ಳಾರಿ  ,   ಏ. 24
ಬಹುಮಹಡಿ ಕಟ್ಟಡ ಕುಸಿದು 27 ಜನರ ಪ್ರಾಣಾಹುತಿ ಪಡೆದು ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಕಟ್ಟಡ ದುರಂತ ಪ್ರಕರಣದ ಸಾಕ್ಷಿಗಳು ಪ್ರತಿಕೂಲವಾಗಿ ಪರಿಣಮಿಸಿದ್ದರಿಂದ ಆರೋಪಿಗಳು ದೋಷಮುಕ್ತರಾಗಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರು ಹಾಗೂ ಮೃತರ ಸಂಬಂಧಿಗಳಲ್ಲಿ ಬಹುತೇಕ ಸಾಕ್ಷಿದಾರರು ಮೂರು ವರ್ಷಗಳು ನಡೆದ ವಿಚಾರಣೆಯಲ್ಲಿ ಘಟನೆ ಬಗ್ಗೆ ಪ್ರತಿಕೂಲ ಸಾಕ್ಷಿ ಹೇಳಿದ್ದರಿಂದ ಪ್ರಕರಣ ಖುಲಾಸೆಗೊಂಡಿದೆ. ಬಳ್ಳಾರಿ ಸಿಜೆಎಂ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿ ಏ.20ರಂದು ತೀರ್ಪು ನೀಡಿದೆ.
ಏನಿದು ಪ್ರಕರಣ?: ಜನವರಿ 26, 2010ರ ರಾತ್ರಿ ಬಳ್ಳಾರಿಯ ಗಾಂಧಿನಗರದಲ್ಲಿರುವ ನಾಲ್ಕು ಅಂತಸ್ತಿನ ನಿರ್ಮಾಣ ಹಂತದಲ್ಲಿರುವ ಕಟ್ಟಡ ಏಕಾಏಕಿ ಕುಸಿದು ಬಿದ್ದಿತ್ತು. ತುತ್ತು ಅನ್ನಕ್ಕೆ ಗುಳೆ ಬಂದು ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ನೆಲಮಾಳಿಗೆಯಲ್ಲಿ ವಾಸಿಸುತ್ತಿದ್ದ 27 ಅಮಾಯಕ ಕಾರ್ಮಿಕರು ಪ್ರಾಣ ಕಳೆದುಕೊಂಡು, 20 ಜನರು ಗಾಯಗೊಂಡಿದ್ದರು. 10ಕ್ಕೂ ಹೆಚ್ಚು ದಿನ ಅರೆಸೇನಾಪಡೆ ಹಾಗೂ ನೂರಾರು ರಕ್ಷಣಾ ಸಿಬ್ಬಂದಿ ಕಟ್ಟಡ ತೆರವು ಕಾರ್ಯಾಚರಣೆ ನಡೆಸಿ, 20ಕ್ಕೂ ಹೆಚ್ಚು ಜನರ ಪ್ರಾಣ ರಕ್ಷಿಸಲಾಗಿತ್ತು.
ಘಟನೆಯಲ್ಲಿ ಪ್ರಾಣ ತೆತ್ತವರು 27 ಮಂದಿ: ಕನ್ನಾರಿ ರುದ್ರಗೌಡ, ಮಹೇಂದ್ರ, ಶಂಕರಪ್ಪ, ದೇವಕಿ, ಜಂಗಲಿ ಮಧು, ಕು. ಕವಿತಾ, ಮಂಜುಳಾ, ನರಸಪ್ಪ, ಸಂದಪಟ್ಟಿ ನಾಗರಾಜ್, ಲಿಂಗಪ್ಪ, ಮಲ್ಲಿಕಾರ್ಜುನ, ಬಸವರಾಜ್, ಮಲಮ್ಮ, ಹುಲುಗಪ್ಪ, ಕು. ರೇಖಾ, ಕು. ಸುರೇಖಾ, ಹುಲಿಗೆಪ್ಪ, ಬಾಲಕೃಷ್ಣಮೂರ್ತಿ, ಮಹಮ್ಮದ್ ಅಬೀದ್ ರಜಾ, ಮಹ್ಮದ್ ಅಜೀಜ್, ನಾಗಮ್ಮ, ನಿಂಗಪ್ಪ, ದುರುಗಪ್ಪ, ರಾಮಲಿಂಗ, ಪುತಳಿಬಾಯಿ, ಕಾಶಿನಾಥ್, ಭೀಮರಾಜ್ ಕಟ್ಟಡ ಕುಸಿತದಿಂದ ಮೃತಪಟ್ಟ ಕಾರ್ಮಿಕರು.
ಸಾಬೀತಾಗದ ಆರೋಪಗಳು: ಲಕ್ಷ್ಮಿದೇವಿ ಎಂಬವರು ಈ ನಿವೇಶನವನ್ನು ತಮ್ಮ ಪುತ್ರಿ ಭಾಗ್ಯರೇಖಾಗೆ ನೀಡಿದ್ದರು. ನಿರ್ಮಾಣ ಹಂತದದಲ್ಲಿದ್ದ ಈ ಕಟ್ಟಡದ ಸಿವಿಲ್ ಎಂಜಿನಿಯರ್ ಸೋಮಶೇಖರ್. ಇವರು ಈ ಜಾಗದಲ್ಲಿ ಪ್ಲ್ಯಾನ್ ಪ್ರಕಾರ ಕಟ್ಟಡ ಕಟ್ಟಿಲ್ಲ ಎಂದು ಮಹಾನಗರ ಪಾಲಿಕೆ ನೋಟಿಸ್ ಜಾರಿ ಮಾಡಿತ್ತು. ಸೆಟ್‌ಬ್ಯಾಕ್ ಬಿಟ್ಟಿಲ್ಲ, ಮೆಟೀರಿಯಲ್ಸ್ ಸರಿಯಾಗಿಲ್ಲ. ಬುನಾದಿ ಸರಿಯಾಗಿ ಹಾಕಿದ್ದಿಲ್ಲ. ಸ್ಥಳದಲ್ಲಿರುವ ಬಾವಿಗಳನ್ನು ಸರಿಯಾಗಿ ಮುಚ್ಚಿಲ್ಲ. ಕಾಲಂ ಸರಿಯಾಗಿ ಕಟ್ಟಿಲ್ಲ ಎಂಬಿತ್ಯಾದಿ ಕಾರಣಗಳಿಂದ ಕಟ್ಟಡ ಬಿದ್ದು ಹೋಗಿದೆ. ಕಾರ್ಮಿಕರು ನಿರ್ಮಾಣ ಹಂತದ ಕಟ್ಟಡದ ಕೆಳಗೆ ವಾಸ ಮಾಡುವಂತಿಲ್ಲ ಎಂಬ ನಿಯಮವಿದೆ. ಆದರೂ ಈ ಎಲ್ಲ ನಿಮಯಗಳನ್ನು ಅವರು ಪಾಲಿಸಿಲ್ಲ ಎಂದು ಆರೋಪಿಸಲಾಗಿತ್ತು.
100ಕ್ಕೂ ಹೆಚ್ಚು ಸಾಕ್ಷ್ಯ ಗುರುತು: ಘಟನೆಯಲ್ಲಿ ಮೃತಪಟ್ಟವರ ಸಂಬಂಧಿಕರು ಹಾಗೂ ಗಾಯಗೊಂಡವರು, ಶವ ಪಂಚನಾಮೆ ಹಾಕಿದ ಸಾಕ್ಷಿಗಳೆಲ್ಲ ತಿರುಗಿ ಬಿದ್ದ ಕಾರಣ ಪ್ರಕರಣಕ್ಕೆ ಪುರಾವೆಗಳು ಇಲ್ಲದಂತಾಯಿತು. ಹೀಗಾಗಿ, ಆರೋಪಿ ಸೋಮಶೇಖರ್ ಪ್ರಕರಣದಿಂದ ಖುಲಾಸೆಗೊಂಡಿದ್ದಾರೆ. ದೂರುದಾರ ಭರತೇಶ್ ಎಂಬ ವಿದ್ಯಾರ್ಥಿಯೂ ಪ್ರತಿಕೂಲ ಸಾಕ್ಷಿಯಾಗಿದ್ದು ಉಲ್ಲೇಖನೀಯ.
ಕಟ್ಟಡ ಕುಸಿತದ ಪ್ರಕರಣ ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ತನಿಖಾಧಿಕಾರಿಯಾಗಿ ಟಿ.ಎಂ. ಬಸವರಾಜ್ ತನಿಖೆ ನಡೆಸಿ, ಬಳ್ಳಾರಿಯ ಸಿಜೆಎಂ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯ ಈ ಕುರಿತು ವಿಚಾರಣೆ ನಡೆಸಿತ್ತು. ಸರ್ಕಾರದ ಪರ ಸರ್ಕಾರಿ ಸಹಾಯಕ ಅಭಿಯೋಜಕ ದಳವಾಯಿ ಚಕ್ರಪಾಣಿ ವಾದ ಮಂಡಿಸಿದ್ದರು.

-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement