'ನೈತಿಕ ಮತದಾನ' ಬೀದಿನಾಟಕ ಪ್ರದರ್ಶನ
ಬಳ್ಳಾರಿ: ವಿಧಾನಸಭಾ ಚುನಾವಣೆಯಲ್ಲಿ ಮುಕ್ತ ಮತದಾನ ಮಾಡಲು ಮತದಾರರಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದಲ್ಲಿ 'ನೈತಿಕ ಮತದಾನ' ಎಂಬ ಬೀದಿನಾಟಕವನ್ನು ಬುಧವಾರ ಏರ್ಪಡಿಸಲಾಗಿತ್ತು. ಜಿಲ್ಲಾ ಪಂಚಾಯಿತಿ ಸಿಇಓ ಎಂ. ಮಂಜುನಾಥ್ ನಾಯಕ್ ಬೀದಿ ನಾಟಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಅಚ್ಚುಮೆಚ್ಚಿನ ಮಾಧ್ಯಮವಾದ ಬೀದಿನಾಟಕದ ಮೂಲಕ ಹಿಂದಿನ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮೇ 5ರಂದು ಎಲ್ಲ ಮತದಾರರು ಮುಕ್ತವಾಗಿ ಮತಗಟ್ಟೆಗೆ ಆಗಮಿಸಿ, ಸೂಕ್ತ ಅಭ್ಯರ್ಥಿಗೆ ಮತ ಚಲಾಯಿಸಬೇಕು. ಯಾವುದೇ ಮತದಾರನು ಮತದಾನದಿಂದ ವಂಚಿತನಾಗಬಾರದು. ಮತದಾನ ಪ್ರಮಾಣ ಹೆಚ್ಚಳವಾದಷ್ಟು ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಅನಕ್ಷರಸ್ಥ ಮತದಾರರನ್ನು ಜಾಗೃತಗೊಳಿಸಲು ಬೀದಿನಾಟಕ, ವಸ್ತುಪ್ರದರ್ಶನ, ಆಡಿಯೋ-ವೀಡಿಯೋ ಪ್ರದರ್ಶನ, ಧ್ವನಿವರ್ಧಕದಲ್ಲಿ ಬಿತ್ತರಿಸುವುದು ಸೇರಿದಂತೆ ವಿವಿಧ ಮಾಧ್ಯಮ ಬಳಕೆ ಮಾಡಲಾಗಿದೆ. ಯುವಕ/ಯುವತಿ ಮಂಡಳಿಗಳು, ಸ್ವ-ಸಹಾಯ ಸಂಘಗಳು, ಅಂಗನವಾಡಿ ಕಾರ್ಯಕರ್ತೆಯರ ಮೂಲಕವೇ ಅರಿವು ಮೂಡಿಸಲಾಗುತ್ತಿದೆ ಎಂದರು. ಕುರುವಳ್ಳಿ ಜಾಗೃತಿ ಕಲಾ ಬಳಗದ ಕಲಾವಿದರಾದ ತಿಮ್ಮಯ್ಯ ಮತ್ತು ತಂಡದವರು ಬೀದಿ ನಾಟಕ ಪ್ರದರ್ಶಿಸಿದರು. ಜಿಲ್ಲಾ ವಾರ್ತಾಧಿಕಾರಿ ಎಚ್. ಶ್ರೀನಿವಾಸ, ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ರಾಧಾಕೃಷ್ಣ ರೆಡ್ಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚಾಂದ್ಬಾಷಾ ಮತ್ತಿತರರಿದ್ದರು.