ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸಂಪತ್ತು ಲೂಟಿ ಫಲವೇ ಜೈಲುವಾಸ

Lingaraj Badiger
Updated On : 26 Apr 2013, 10:54 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 25
ಜನಾರ್ದನ ರೆಡ್ಡಿ ಹಾಗೂ ಜಗನ್‌ಮೋಹನ್ ರೆಡ್ಡಿ ಸಾರ್ವಜನಿಕ ಸಂಪತ್ತನ್ನು ಲೂಟಿ ಮಾಡಿದ ಫಲವಾಗಿ ಸಿಬಿಐ ತನಿಖೆ ಎದುರಿಸಿ, ಜೈಲುವಾಸ ಅನುಭವಿಸುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ವಿ. ಹನುಮಂತರಾವ್ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಅವರು ಅಕ್ರಮ ಗಣಿಗಾರಿಕೆ ನಡೆಸಿದ ಹಿನ್ನೆಲೆಯಲ್ಲಿ ಜೈಲಿಗೆ ಹೋಗಿದ್ದರಿಂದ ಅವರ ಸಹೋದರ ಸೋಮಶೇಖರ ರೆಡ್ಡಿ ಅವರು ಬಳ್ಳಾರಿಯಲ್ಲಿ ಸ್ಪರ್ಧಿಸಿಲ್ಲ ಎಂದು ಹೇಳಿದರು.
ಬಳ್ಳಾರಿ ಕಾಂಗ್ರೆಸ್ ಮುಖಂಡರಲ್ಲಿನ ಭಿನ್ನಮತದ ಕುರಿತಾಗಿ ಮಾತನಾಡಿ, ಮುಖಂಡರಲ್ಲಿ ಭಿನ್ನಮತ ಇರುವುದು ನಿಜ, ಮುಂದಿನ ಎರಡು ದಿನಗಳಲ್ಲಿ ಭಿನ್ನಮತ ಶಮನವಾಗಿ ಎಲ್ಲರೂ ಒಟ್ಟಾಗಿ ಚುನಾವಣೆಯಲ್ಲಿ ಕೆಲಸ ಮಾಡುತ್ತಾರೆ. ಪಕ್ಷವು ರಾಜ್ಯದಲ್ಲಿ ಸ್ವಷ್ಟಬಹುಮತದಿಂದ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಲ್ಲ ರಾಜಕೀಯ ಪಕ್ಷಗಳಲ್ಲಿ ಇರುವಂತೆ ನಮ್ಮ ಪಕ್ಷದಲ್ಲೂ ಭಿನ್ನಮತ ಇದೆ. ಈಗಾಗಲೇ ಭಿನ್ನಮತ ತೋರಿರುವ ಪಕ್ಷದ ಮುಖಂಡರೊಂದಿಗೆ ಚರ್ಚಿಸಲಾಗಿದೆ. ಶೀಘ್ರದಲ್ಲೇ ಎಲ್ಲವೂ ಬಗೆಹರಿಯಲಿವೆ ಎಂದ ಅವರು, ಜನತೆ ಕಾಂಗ್ರೆಸ್‌ಗೆ ಮತಹಾಕಬೇಕೆಂದು ನಿರ್ಧರಿಸಿದ್ದಾರೆ. ಇದನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ರಾಜ್ಯಾದ್ಯಂತ ಕಾಂಗ್ರೆಸ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.
ಗುಜರಾತ್ ಶೈನಿಂಗ್ ಇಲ್ಲ: ಇಂಡಿಯಾ ಈಸ್ ಶೈನಿಂಗ್ ಎಂದು ಗುಜರಾತ್ ಸಿಎಂ ನರೇಂದ್ರ ಮೋದಿ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ವಾಸ್ತವವಾಗಿ ದೇಶದಲ್ಲಿ ಕಾಂಗ್ರೆಸ್ ಶೈನ್ ಆಗುತ್ತಿದೆ. ನರೇಂದ್ರ ಮೋದಿ ಅವರು ಗುಜರಾತಿನಲ್ಲಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಮೋದಿ ಬಗ್ಗೆ ಬಿಜೆಪಿಯವರಿಗೆ ವಿಶ್ವಾಸ ಇಲ್ಲದಂತಾಗಿದೆ. ಕರ್ನಾಟಕದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನೇತೃತ್ವದಲ್ಲಿ ಎಲ್ಲ ರಾಜ್ಯ ನಾಯಕರು ಒಗ್ಗಟ್ಟಿನ ಪ್ರಚಾರ ಕೈಗೊಂಡಿದ್ದಾರೆ. ಜನತೆ ಈ ಬಾರಿ ಬದಲಾವಣೆ ಬಯಸುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಕುಟುಂಬದವರ ಭ್ರಷ್ಟಾಚಾರ ಕಾಂಗ್ರೆಸ್‌ಗೆ ವರದಾನಗವಾಗುತ್ತದೆ ಎಂದು ವಿಶ್ಲೇಷಿಸಿದರು.
49 ಕಂಪನಿ ಪರವಾನಗಿ ರದ್ದು: ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ ಲಾಡ್ ಅವರಿಗೆ ಸಂಬಂಧಿಸಿದ ಕಂಪನಿಯ ಪರವಾನಗಿಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿರುವ ಕುರಿತು ಮಾತನಾಡಿ, ಕೇವಲ ಅನಿಲ್ ಲಾಡ್ ಅವರ ಗಣಿ ಕಂಪನಿ ಮಾತ್ರ ರದ್ದಾಗಿಲ್ಲ. ಇತರ 49 ಕಂಪನಿಗಳು ರದ್ದಾಗಿವೆ ಎಂದು ಹೇಳುವ ಮೂಲಕ ಲಾಡ್ ಅವರನ್ನು ಸಮರ್ಥನೆ ಮಾಡಿಕೊಳ್ಳಲು ಮುಂದಾದರು. ಪಕ್ಷದ ಪಾಲಿಸಿಯಂತೆ ಟಿಕೆಟ್ ಹಂಚಿಕೆ ಮಾಡಲಾಗಿದೆ. ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಿರುವ ವಿಷಯವನ್ನಿಟ್ಟುಕೊಂಡು ಅನಿಲ್ ಲಾಡ್‌ಗೆ ಟಿಕೆಟ್ ನೀಡಲಾಗಿದೆ. ಪಕ್ಷ ಸೂಕ್ತವಾಗಿ ನಿರ್ಧರಿಸಿಯೇ ಅಬ್ದುಲ್ ವಹಾಬ್, ಅನಿಲ್ ಲಾಡ್, ಸಂತೋಷ್ ಲಾಡ್ ಅವರಿಗೆ ಟಿಕೆಟ್ ನೀಡಿದೆ. ವಿಜಯನಗರ ಕ್ಷೇತ್ರಕ್ಕೆ ಅಬ್ದುಲ್ ವಹಾಬ್‌ಗೆ ಟಿಕೆಟ್ ನೀಡುವ ಮೂಲಕ ಅಲ್ಪಸಂಖ್ಯಾತರ ವರ್ಗಕ್ಕೆ ಆದ್ಯತೆ ನೀಡಲಾಗಿದೆ ಎಂದರು.
ಜಿಲ್ಲಾ ಮುಖಂಡರಲ್ಲಿ ಒಗ್ಗಟ್ಟಿಲ್ಲ ಎಂಬ ಕಾರಣಕ್ಕೆ ರಾಹುಲ್ ಗಾಂಧಿ ಅವರ ಕಾರ್ಯಕ್ರಮ ರದ್ದಾಯಿತು ಎಂಬ ಮಾತಿನಲ್ಲಿ ಸತ್ಯವಿಲ್ಲ. ಎಐಸಿಸಿಯು ಸಿಂಧನೂರಿನಲ್ಲಿ ಕಾರ್ಯಕ್ರಮ ಮಾಡಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಬಳ್ಳಾರಿ ಕಾರ್ಯಕ್ರಮ ರದ್ದಾಗಿದೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.
ನುಣುಚಿಕೊಂಡರು: ಪತ್ರಕರ್ತರು ಹೆಚ್ಚಿನ ಪ್ರಶ್ನೆಗಳನ್ನು ಕೇಳಲು ಮುಂದಾದರೆ, ನಾವು ಹೇಳಿದ್ದನ್ನು ಬರೆದುಕೊಂಡು ಹೋಗಬೇಕು. ಒಬ್ಬ ಪತ್ರಕರ್ತ ಒಂದು ಪ್ರಶ್ನೆ ಮಾತ್ರ ಕೇಳಬೇಕು ಎಂದು ಕಟ್ಟುನಿಟ್ಟು ಮಾಡಲು ಮುಂದಾದಾಗ, ಪತ್ರಕರ್ತರು ವಿರೋಧ ವ್ಯಕ್ತಪಡಿಸಿದರು. ಪತ್ರಕರ್ತರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸದೆ ಪತ್ರಿಕಾಗೋಷ್ಠಿಗೆ ವಿದಾಯ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ವೀಕ್ಷಕ ಎಸ್.ಪಿ.ವಿ. ರೆಡ್ಡಿ, ನಗರ ಅಭ್ಯರ್ಥಿ ಅನಿಲ್ ಲಾಡ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆಂಜನೇಯಲು, ಕಮಲಾ ಮರಿಸ್ವಾಮಿ, ಬೆಂಬಲಿಗರು, ಮುಖಂಡರು, ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement