ಅಬ್ಬರದ ಪ್ರಚಾರ: ಮೂಲೆ ಸೇರಿದ ಅಪಪ್ರಚಾರ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಏ. 27
ವಿವಿಧ ಪಕ್ಷಗಳ ರಾಜ್ಯ ಮಟ್ಟದ ನಾಯಕರು ನಿತ್ಯ ಒಂದಲ್ಲ ಒಂದು ಆರೋಪ, ಪ್ರತ್ಯಾರೋಪಗಳನ್ನು ಮಾಡುತ್ತಾ ಮತದಾರರ ಚಿತ್ತವನ್ನು ತಮ್ಮತ್ತ ಸೆಳೆಯಲು ಏನೆಲ್ಲಾ ತಂತ್ರ, ಪ್ರತಿತಂತ್ರಗಳನ್ನು ಮಾಡುತ್ತಿದ್ದಾರೆ. ಆದರೆ ಹೂವಿನಹಡಗಲಿ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಪರಸ್ಪರ ಆರೋಪ, ಪ್ರತ್ಯಾರೋಪ ಮಾಡದ ಕಾರಣ ಅಪಪ್ರಚಾರ ಮೂಲೆಗೆ ಸೇರಿ ಮತದಾರರನ್ನು ಸೆಳೆಯುವ ಕಾಯಕದಲ್ಲೇ ನಿರತರಾಗಿದ್ದಾರೆ.
ಕ್ಷೇತ್ರದಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿರುವ ಬಿಜೆಪಿಯ ಚಂದ್ರನಾಯ್ಕ, ಕಾಂಗ್ರೆಸ್ಸಿನ ಪಿ.ಟಿ.ಪರಮೇಶ್ವರ ನಾಯ್ಕ, ಜೆಡಿಎಸ್ನ ಎಲ್.ಪಿ. ಕಠಾರಿ ನಾಯ್ಕ, ಕೆಜೆಪಿಯ ಮಧುನಾಯ್ಕ, ಬಿಎಸ್ಸಾರ್ ಕಾಂಗ್ರೆಸ್ಸಿನ ಹೇಮಂತ್ಕುಮಾರ್ ಭಾರತಿ, ಬಿಎಸ್ಪಿಯ ಉಚ್ಚೆಂಗೆಪ್ಪ, ಎಎನ್ಸಿಯ ಹೂನ್ನೂರಪ್ಪ, ಸಿಪಿಐ (ಎಂಎಲ್)ನ ರಾಘವೇಂದ್ರ ನಾಯ್ಕ ಪಕ್ಷೇತರರಾಗಿರುವ ಹಗರನೂರು ಹರೀಶಕುಮಾರ, ರಾಮಾಂಜನಿ ಕ್ಷೇತ್ರದ ಅಭಿವೃದ್ಧಿಗಾಗಿ ತಮ್ಮ ಪ್ರಣಾಳಿಕೆ ಅಂಶಗಳನ್ನು ಮತದಾರರಿಗೆ ತಿಳಿಸುತ್ತಾ ಮತಯಾಚನೆ ಮಾಡುತ್ತಿದ್ದಾರೆ.
ಕದ ತಟ್ಟಿದ ಅಭ್ಯರ್ಥಿಗಳು: ಬಿಜೆಪಿ ಅಭ್ಯರ್ಥಿ ಶಾಸಕ ಚಂದ್ರನಾಯ್ಕ 5 ವರ್ಷಗಳಲ್ಲಿ ಕ್ಷೇತ್ರದಲ್ಲಾದ ರಸ್ತೆ ಅಭಿವೃದ್ಧಿ, ಗುಂಪು ಗ್ರಾಮಗಳಿಗೆ ಸಂಯುಕ್ತ ಕುಡಿಯುವ ನೀರಿನ ಯೋಜನೆ, ಸಿಂಗಟಾಲೂರು ಏತನೀರಾವರಿ ಯೋಜನೆ, 10 ಸಾವಿರ ಬಡವರಿಗೆ ಬಸವ ವಸತಿ, 10 ಕೆರೆಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತದಾರರ ಬಳಿ ಹೋಗುತ್ತಿದ್ದಾರೆ.
ಇತ್ತ ಕಾಂಗ್ರೆಸ್ ಅಭ್ಯರ್ಥಿ ಪಿ.ಟಿ. ಪರಮೇಶ್ವರ ನಾಯ್ಕ, 5 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಭ್ರಷ್ಟಾಚಾರ, ಮತದಾರರಿಗೆ ಮಾಡಿರುವ ಮೋಸ ಹಾಗೂ ಕ್ಷೇತ್ರದ ಅಭಿವೃದ್ಧಿ ಶ್ರಮಿಸಿ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಿರುವ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶರ ಆಶಯಗಳನ್ನು ಮುಂದಿಟ್ಟುಕೊಂಡು ಕ್ಷೇತ್ರಕ್ಕೆ ಲಗ್ಗೆ ಇಟ್ಟಿದ್ದಾರೆ.
ಬಿಎಸ್ವೈ ಬೆಂಬಲಿಸಿ: ಕೆಜೆಪಿ ಅಭ್ಯರ್ಥಿ ಎಲ್. ಮಧುನಾಯ್ಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸಾಮಾನ್ಯ ಜನಪರ ಯೋಜನೆಗಳನ್ನು, ಸಾಧನೆಗಳು, ಅವರು ಕಂಡಿದ್ದ ಕಲ್ಯಾಣ ಕರ್ನಾಟಕದ ಕನಸು ನನಸು ಮಾಡಲು ಕೆಜೆಪಿಯನ್ನು ಬೆಂಬಲಿಸಿ ಮತ್ತೊಮ್ಮೆ ಯಡಿಯೂರಪ್ಪರನ್ನು ಸಿಎಂ ಮಾಡಲು ಮತದಾರರು ತಮ್ಮನ್ನ ಬೆಂಬಲಸಿ ಎನ್ನುತ್ತಿದ್ದಾರೆ.
ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ, ನಿವೃತ್ತ ಕೆಎಎಸ್ ಅಧಿಕಾರಿ ಹೇಮಂತ್ಕುಮಾರ್ ಭಾರತಿ ತಮ್ಮ ಸೇವಾ ಅವಧಿಯ ಹಿರಿತನ ಮತ್ತು ವೈಜ್ಞಾನಿಕ ಚಿಂತನೆಗಳ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆಂದು ಮತದಾರರ ಬಳಿ ತೆರಳುತ್ತಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಎಲ್.ಪಿ. ಕಠಾರಿನಾಯ್ಕ ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯಕ್ಕೆ ನೀಡಿರುವ ಜನಪರ ಯೋಜನೆಗಳು ಮತ್ತು ತಮ್ಮ ಪಕ್ಷದ ಪ್ರಣಾಳಿಕೆಗಳನ್ನು ಮುಂದಿಟ್ಟುಕೊಂಡು ಮತದಾರರ ಮನೆ ಬಾಗಿಲು ತಟ್ಟುತ್ತಿದ್ದಾರೆ.
ಉಳಿದಂತೆ ಇತರೆ ಬಿಎಸ್ಪಿ, ಸಿಪಿಐ (ಎಂಎಲ್) ಹಾಗೂ ಪಕ್ಷೇತರರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ತಮ್ಮದೇ ಆದ ಪ್ರಣಾಳಿಕೆಗಳನ್ನು ಮುಂದಿಟ್ಟುಕೊಂಡು ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿದ್ದಾರೆ.
ಇಷ್ಟೆಲ್ಲ ಕಾರ್ಯವನ್ನು ಬಿಸಿಲಿನಲ್ಲಿ ಬೆವರಿಳಿಸಿ ಮತದಾರರ ಮನೆಗೆ ಬಂದು ತಿಳಿಹೇಳಿ ತಮ್ಮ ಪಕ್ಷಕ್ಕೆ ಮತ ನೀಡಿ ಎಂದು ಬೇಡಿಕೊಳ್ಳುವ ಅಭ್ಯರ್ಥಿಗಳಿಗೆ ಮತದಾರರು ಮಾತ್ರ ಯಾವ ಗುಟ್ಟು ಬಿಟ್ಟುಕೊಟ್ಟಿಲ್ಲ.