ಕೆಜೆಪಿ ಬೆಂಬಲಿತ ಅಭ್ಯರ್ಥಿ ತಾವೇ: ಬಂಡೇಗೌಡ
ಬಳ್ಳಾರಿ: ಬಳ್ಳಾರಿ ನಗರ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಪಾರ್ಥಸಾರಥಿ ತಳ್ಳೂರಿ ಸಲ್ಲಿಸಿದ ನಾಮಪತ್ರ ತಿರಸ್ಕೃತವಾಗಿರುವುದರಿಂದ, ಬಳ್ಳಾರಿ ನಗರ ಕ್ಷೇತ್ರದ ಕೆಜೆಪಿ ಬೆಂಬಲಿತ ಅಭ್ಯರ್ಥಿ ತಾವೇ ಎಂದು ಬಳ್ಳಾರಿ ನಗರದ ಪಕ್ಷೇತರ ಅಭ್ಯರ್ಥಿ ಬಂಡೇಗೌಡ ಹೇಳಿಕೊಂಡಿದ್ದಾರೆ.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಶೀರ್ವಾದ ತಮ್ಮ ಮೇಲಿದ್ದು, ಗೆದ್ದು ಬರುವ ವಿಶ್ವಾಸವಿದೆ ಎಂದರು. ಈಗಾಗಲೇ ಕೆಜೆಪಿ ಮುಖಂಡರಾದ ಧನಂಜಯ ಕುಮಾರ್, ಗೋಖೋಲೆ ಅವರು ಕೆಜೆಪಿ ಬೆಂಬಲದೊಂದಿಗೆ ಮುಂದುವರಿಯುವಂತೆ ಸೂಚಿಸಿದ್ದಾರೆ. ತಮಗೆ ಟೀ ಕಪ್-ಸಾಸರ್ ಚಿಹ್ನೆ ನೀಡಲಾಗಿದೆ. ತಮ್ಮ ಕರಪತ್ರದಲ್ಲಿ ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ, ಇತರ ನಾಯಕರ ಚಿತ್ರ ಮುದ್ರಿಸಿಕೊಂಡು ಮತದಾರರ ಮನೆ ಬಾಗಿಲಿಗೆ ಹೋಗುತ್ತಿದ್ದೇವೆ ಎಂದರು.
ಯಡಿಯೂರಪ್ಪ ಅಧಿಕಾರ ಅವಧಿಯಲ್ಲಿ ರಾಜ್ಯದಲ್ಲಿ ನಿರೀಕ್ಷಿತ ಅಭಿವೃದ್ಧಿಯಾಗಿದೆ. ಅವರು ಕಡಿಮೆ ಅವಧಿಯಲ್ಲಿ ಹತ್ತಾರು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅವರ ಅಭಿವೃದ್ಧಿ ಕೆಲಸಗಳು ತಮ್ಮ ಗೆಲುವಿಗೆ ಸಹಕಾರಿಯಾಗಲಿವೆ ಎಂದರು. ನಗರದ ಜನರಿಗೆ ಕುಡಿವ ನೀರು ಸೇರಿದಂತೆ ಕನಿಷ್ಠ ಸೌಲಭ್ಯಗಳಿಗೆ ಒತ್ತು ಕೊಡುವುದು. ಶಾಂತಿ, ಸೌಹಾರ್ದತೆ ಕಾಪಾಡುವುದು ನನ್ನ ಮೊದಲ ಆದ್ಯತೆ ಎಂದು ತಿಳಿಸಿದರು.
ಪಕ್ಷದ ನಗರ ಘಟಕ ಅಧ್ಯಕ್ಷ ನಲ್ಲಬೋತುಲ ರಾಮದಾಸು, ಮುಖಂಡರಾದ ಕಪ್ಪಗಲ್ ರಸೂಲ್ಸಾಬ್, ಮಹಮ್ಮದ್ ಪೈ, ಮನ್ನಾವರ್ ಹುಸೇನ್ ಮತ್ತಿತರರು ಇದ್ದರು.