ಸುದ್ದಿ ಸಂಕ್ಷೇಪ
ಇಂದು, ನಾಳೆ ವಿದ್ಯುತ್ ವ್ಯತ್ಯಯ
ಬಳ್ಳಾರಿ: ಜೆಸ್ಕಾಂನ 110 ಕೆವಿ ಸಬ್ ಸ್ಟೇಷನ್‌ನಲ್ಲಿ 20 ಎಂವಿಎ ವಿದ್ಯುತ್ ಪರಿವರ್ತಕದಲ್ಲಿ ತುರ್ತು ತಾಂತ್ರಿಕ ದೋಷ ಕಂಡುಬಂದಿರುವುದರಿಂದ ನಗರದ ಕೆಲವು ಪ್ರದೇಶಗಳಲ್ಲಿ ಏ. 28 ಹಾಗೂ 29ರಂದು ಪ್ರತಿ 2 ಗಂಟೆಗಳಿಗೊಮ್ಮೆ ಮಧ್ಯಂತರವಾಗಿ 1 ಗಂಟೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಡಬ್ಲ್ಯು.ಎಂ. ಶಶಿಧರ್ ಶಿವಾಚಾರ್ಯ ತಿಳಿಸಿದ್ದಾರೆ. ತಾಂತ್ರಿಕ ದೋಷ ಸರಿಪಡಿಸುವ ಸಲುವಾಗಿ 10 ಎಂವಿಎ ವಿದ್ಯುತ್ ಪರಿವರ್ತಕದಿಂದ ತಾತ್ಕಾಲಿಕವಾಗಿ ಪರ್ಯಾಯ ವಿದ್ಯುತ್ ಕಲ್ಪಿಸಲಾಗಿದೆ. ನಗರದ ಗುಗ್ಗರಹಟ್ಟಿ, ಜೈನ್ ಮಾರ್ಕೆಟ್, ಮೋತಿ ವೃತ್ತ, ಬುಡಾ ಕಚೇರಿ, ಬಳ್ಳಾರಿ ಕೋಟೆ, ಮಿಲ್ಲರ್ ಪೇಟೆ, ಬೊಮ್ಮನಾಳ್ ರಸ್ತೆ, ಅಂದ್ರಾಳು ರಸ್ತೆ, ವೆಂಕಟಮ್ಮ ಕಾಲನಿ, ಕಾರ್ಕಲತೋಟ, ಮುಂಡರಗಿ ಕೈಗಾರಿಕಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಇಂದು ದತ್ತಿ ಉಪನ್ಯಾಸ
ಬಳ್ಳಾರಿ: ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಶಾಖೆ, ಡಾ. ಪ್ಯಾಟಿ ಶ್ರೀನಿವಾಸಾಚಾರ್ ದತ್ತಿ ಸಮಿತಿ ಸಹಯೋಗದಲ್ಲಿ ಏ. 28ರಂದು ಸಂಜೆ 7 ಗಂಟೆಗೆ ನಗರದ ಐಎಂಎ ಹೌಸ್‌ನ ಗಡಿಗಿ ಚೆನ್ನಪ್ಪ ಸಭಾಂಗಣದಲ್ಲಿ ದತ್ತಿ ಉಪನ್ಯಾಸ ಏರ್ಪಡಿಸಿದೆ. ಅತಿಥಿ ಉಪನ್ಯಾಸಕರಾಗಿ ಬೆಂಗಳೂರಿನ ಡಾ. ರಾಜಪಾಲ್ ಸಿಂಗ್ ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಅಧ್ಯಕ್ಷ ಡಾ. ಆರ್. ಅಜಿತ್ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಾಖಲೆ ಇಲ್ಲದ ರು. 10 ಲಕ್ಷ ವಶ
ಬಳ್ಳಾರಿ: ಸೂಕ್ತ ದಾಖಲೆ ಇಲ್ಲದೇ ಸಾರಿಗೆ ಬಸ್‌ನಲ್ಲಿ ಸಾಗಿಸುತ್ತಿದ್ದ ರು. 10 ಲಕ್ಷ ಹಣವನ್ನು ಬಳ್ಳಾರಿ ತಾಲೂಕು ಕುಡುತಿನ ಪೊಲೀಸ್ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶನಿವಾರ ಸಂಜೆ ಹೊಸಪೇಟೆಯಿಂದ ಬಳ್ಳಾರಿಗೆ ಶ್ರೀರಾಮ್‌ಭಾಷ ಎಂಬುವವರು ಸಾರಿಗೆ ಬಸ್‌ನಲ್ಲಿ ಹಣ ತೆಗೆದುಕೊಂಡು ಹೋಗುತ್ತಿದ್ದಾಗ ಕುಡುತಿನ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಬಸ್‌ನ್ನು ಪರಿಶೀಲಿಸಿದ್ದಾರೆ. ಆಗ ಈ ಹಣ ಪತ್ತೆಯಾಗಿದೆ. ಈ ಕುರಿತು ಶ್ರೀರಾಮ್‌ಭಾಷ ಅವರನ್ನು ದಾಖಲೆ ಕೇಳಿದರೆ ಯಾವುದೇ ದಾಖಲೆಗಳನ್ನು ನೀಡದ ಹಿನ್ನೆಲೆಯಲ್ಲಿ ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಈ ಕುರಿಚು ಕುಡುತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರಡಿ ಮರಿಯಮ್ಮ ನಿಧನ
ಹೊಸಪೇಟೆ: ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಮರಡಿ ಮರಿಯಮ್ಮ (75) ಮಂಗಳವಾರ ನಿಧನ ಹೊಂದಿದ್ದಾರೆ. ಮೃತರಿಗೆ ಆರು ಪುತ್ರರು, ಮೂವರು ಪುತ್ರಿಯರು, ಮೊಕ್ಕಳು, ಬಂಧುಗಳು ಇದ್ದಾರೆ. ಮರಿಯಮ್ಮ ನಿಧನಕ್ಕೆ ಹಗರಿಬೊಮ್ಮನಹಳ್ಳಿ ಶಾಸಕ ನೇಮಿರಾಜ್ ನಾಯ್ಕ, ಜೆಡಿಎಸ್ ಅಭ್ಯರ್ಥಿ ಭೀಮಾನಾಯ್ಕ, ಕಾಂಗ್ರೆಸ್ ಅಭ್ಯರ್ಥಿ ಮಾರೆಣ್ಣ, ಕೆಜೆಪಿ ಅಭ್ಯರ್ಥಿ ದೊಡ್ಡರಾಮಣ್ಣ, ಕೆ. ಶಿವಮೂರ್ತಿ, ಗೋವಿಂದ ಪರುಶುರಾಮ ಇತರರು ಸಂತಾಪ ಸೂಚಿಸಿದ್ದಾರೆ.