ಜನತೆಯ ಋಣ ತೀರಿಸಲು ಕಂಕಣಬದ್ಧ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಏ. 28
ನನ್ನಲ್ಲಿರುವ ನಿಷ್ಠೆ, ಪ್ರಾಮಾಣಿಕತೆ ಹಾಗೂ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದ ಜನತೆ, ಪಕ್ಷದ ಮುಖಂಡರು ನೋಡಿದ್ದಾರೆ. ಕ್ಷೇತ್ರದಲ್ಲಿ ಹೆಚ್ಚೆಚ್ಚು ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎನ್ನುವ ಕುರಿತು ಸದಾ ಚಿಂತಿಸುವ ದೃಷ್ಟಿಯನ್ನು ನಾನು ಹೊಂದಿರುವುದನ್ನೂ ಜನತೆ ಕಂಡುಕೊಂಡಿದ್ದಾರೆ. ಪ್ರಥಮ ಬಾರಿಗೆ ಶಾಸಕನಾದ ನನಗೆ ಪ್ರವಾಸೋದ್ಯಮ, ಜಿಲ್ಲಾ ಉಸ್ತುವಾರಿ ಸಚಿವನನ್ನಾಗಿ ಮಾಡಿ, ರಾಜಕಾರಣದಲ್ಲಿ ಸ್ಥಾನ-ಮಾನ ನೀಡಿ ಗುರುತಿಸಿದ್ದಾರೆ. ಸಿಕ್ಕ ಅವಕಾಶ ಮತ್ತು ಅಧಿಕಾರದ ಋಣ ತೀರಿಸಲು ತಾವು ಕಂಕಣಬದ್ಧ.
ಹೀಗೆಂದು ತಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳು ಮತ್ತು ತಮ್ಮ ಅನುಭವಗಳನ್ನು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು 'ಕನ್ನಡಪ್ರಭ'ಕ್ಕೆ ನೀಡಿರುವ ಸಂದರ್ಶನದಲ್ಲಿ ಹಂಚಿಕೊಂಡರು. ನಾನು ರಾಜಕಾರಣಕ್ಕೆ ಬರುವ ಮುನ್ನ ಸಮಾಜ ಸೇವೆ ಮಾಡಿಕೊಂಡಿದ್ದೆ. ನನ್ನ ಸೇವೆ ಕಂಡು ಕ್ಷೇತ್ರದ ಜನರು ಒಗ್ಗಟ್ಟಾಗಿ ನೀವು ರಾಜಕಾರಣಕ್ಕೆ ಬರಬೇಕು. ನೀವು ಮಾಡುವ ಸಮಾಜ ಸೇವೆ ಜತೆಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ. ಆದ್ದರಿಂದ ರಾಜಕಾರಣಕ್ಕೆ ಬರಲೇಬೇಕು ಎಂದು ಒತ್ತಾಯ ಮಾಡಿದ್ದರಿಂದ ರಾಜಕಾರಣಕ್ಕೆ ಬರುವಂತಾಯಿತು ಎನ್ನುತ್ತಾರೆ ಆನಂದ್ ಸಿಂಗ್. ಸಂದರ್ಶನದಲ್ಲಿ ಅವರು ಹೇಳಿದ ತಮ್ಮ ಅನುಭವಗಳ ಪೂರ್ಣಪಾಠ ಇಂತಿದೆ.
ಜನತೆ ಆಶೀರ್ವಾದ: ಸಮಾಜದಲ್ಲಿ ಸ್ಪಲ್ಪಮಟ್ಟಿಗೆ ಗುರುತಿಸಿಕೊಂಡ ಮೇಲೆ ಕ್ಷೇತ್ರದ ಜನರು ನನಗೆ ಶಾಸಕ ಮತ್ತು ಸಚಿವ ಸ್ಥಾನ ಬರುವಂತೆ ಆಶೀರ್ವಾದ ಮಾಡಿದ್ದಾರೆ. ಬಿಜೆಪಿಯಿಂದ ಪ್ರಥಮ ಬಾರಿಗೆ ಗೆದ್ದು ಮಂತ್ರಿ ಆದ ಮೇಲೆ ನನ್ನ ಜನ್ಮ ಸಾರ್ಥಕವಾಯಿತು ಅಂದುಕೊಂಡೆ. ಇನ್ನು ರಾಜಕಾರಣ ಸಾಕು ಎಂದುಕೊಂಡು ಕೆಲ ದಿನಗಳ ವರೆಗೆ ರಾಜಕೀಯದಿಂದ ದೂರು ಉಳಿಯಬೇಕು ಎಂದುಕೊಂಡಿದ್ದೆ. ಆದರೆ ಪಕ್ಷದ ಮುಖಂಡರು ಹಾಗೂ ಕ್ಷೇತ್ರದ ಜನರು ಮತ್ತೊಮ್ಮೆ ಈ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಒತ್ತಾಯ ಮಾಡಿದ್ದರಿಂದ ಈ ಬಾರಿಯೂ ಸ್ಪರ್ಧಿಸಿದ್ದೇನೆ.
ಆತ್ಮವಿಶ್ವಾಸವಿದೆ: 5 ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದನ್ನು ಕ್ಷೇತ್ರದ ಜನತೆ ಕಣ್ಣಾರೆ ಕಂಡಿದ್ದಾರೆ. ಹೊಸಪೇಟೆಯಲ್ಲಿ ನೂತನ ಬಸ್ ನಿಲ್ದಾಣ, ಮುರಾರಿ ಶ್ರೀರಾಮುಲು ಪಾರ್ಕ್, ನೆಹರೂ ಪಾರ್ಕ್, ನಗರಸಭಾ ನೂತನ ಕಟ್ಟಡ, ತಾಲೂಕು ಕ್ರೀಡಾಂಗಣದಲ್ಲಿ ಒಳಾಂಗಣ ಕ್ರೀಡಾಂಗಣ, ಪ್ರವಾಸಿ ಮಂದಿರದಲ್ಲಿ ನೂತನ ಕಟ್ಟಡ, ಮೇನ್ ಬಜಾರ್ ರಸ್ತೆ ಅಗಲೀಕಣ, ರಸ್ತೆ ಅಭಿವೃದ್ಧಿ, ಹಳ್ಳಿ ಹಳ್ಳಿಗೆ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ, ವಿದ್ಯುತ್ ದೀಪಗಳ ಅಳವಡಿಕೆ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಈ ಹಿಂದೆ ಯಾರೂ ಮಾಡದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೀರಿ, ಕ್ಷೇತ್ರದಲ್ಲಿ ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಾದರೆ ನೀವೇ ಸಮರ್ಥ ಅಭ್ಯರ್ಥಿ ಎಂದು ಜನತೆ ಮತ್ತು ಪಕ್ಷದ ಮುಖಂಡರು ಹೇಳಿದ್ದರಿಂದ ಸ್ಪರ್ಧಿಸಿದ್ದೇನೆ. ಈ ಬಾರಿಯೂ ತಮಗೆ ಜನತೆ ಆಶೀರ್ವಾದ ಮಾಡುತ್ತಾರೆ ಎನ್ನುವ ನಂಬಿಕೆ, ವಿಶ್ವಾಸವಿದೆ.
ಕ್ಷೇತ್ರದಲ್ಲಿ ಶೇ. 70ರಷ್ಟು ಪ್ರಚಾರ ನಡೆಸಿದ್ದೇನೆ. ನಗರ ಹಾಗೂ ಗ್ರಾಮೀಣ ಪ್ರದೇಶದ ಜನತೆ ಉತ್ತಮ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಪ್ರಚಾರಕ್ಕೆ ಇನ್ನೂ 5 ದಿನಗಳು ಉಳಿದಿವೆ. ಕ್ಷೇತ್ರಾದ್ಯಂತ ತೆರಳಿ ಮತಯಾಚನೆ ನಡೆಸುವೆ. ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಮೆಚ್ಚಲೇಬೇಕಾಗಿದೆ. ಕಟ್ಟುನಿಟ್ಟಿನ ನೀತಿ ಸಂಹಿತೆ ಇಲ್ಲದಿದ್ದರೆ ಹಣ ಮತ್ತು ಮದ್ಯದ ಹೊಳೆ ಹರಿಯುತ್ತಿತ್ತು. ಈಗ ಮತದಾರರು ಜಾಗೃತರಾಗಬೇಕು. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವವರಿಗೆ ಅವಕಾಶ ಕಲ್ಪಿಸಿಕೊಡಬೇಕು ಎನ್ನುವುದು ನನ್ನ ಭಾವನೆ. ಮತದಾರರು ಸಹ ಈಗ ಜಾಗೃತರಾಗಿದ್ದು, ಉತ್ತಮ ವ್ಯಕ್ತಿಗಳನ್ನೇ ಆಯ್ಕೆ ಮಾಡುತ್ತಾರೆ ಎನ್ನುವ ನಂಬಿಕೆ ಇದೆ.
-ಸಿ.ಕೆ. ನಾಗರಾಜ್