ಕೈ ಶಾಸಕರಿಲ್ಲದ ಕಡೆ ಕಾರ್ಯಕರ್ತರ ರಕ್ಷಣೆಗೆ ಸಿಎಂಗೆ ಪತ್ರ
ಹಗರಿಬೊಮ್ಮನಹಳ್ಳಿ: ಕಾಂಗ್ರೆಸ್ ಶಾಸಕರಿಲ್ಲದ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರು ಚುನಾವಣೆ ಸೋಲಿನಿಂದ ಎದೆಗುಂದಬೇಡಿ, ನಮ್ಮ ಪಕ್ಷದ ಶಾಸಕರಿಲ್ಲದ ಕ್ಷೇತ್ರಗಳ ಕಡೆಗೆ ಹೆಚ್ಚು ಮುತುವರ್ಜಿ ವಹಿಸುವಂತೆ ಮತ್ತು ಅಲ್ಲಿನ ಕಾರ್ಯಕರ್ತರ ರಕ್ಷಣೆಗಾಗಿ ಮುಖ್ಯಮಂತ್ರಿ ಹಾಗೂ ಎಲ್ಲ ಸಚಿವರಿಗೆ ಪತ್ರ ಬರೆಯುವುದಾಗಿ ಕೆಪಿಸಿಸಿ ವೀಕ್ಷಕ ಹಾಗೂ ಮಾಜಿ ಸಚಿವ ಸಿ.ಆರ್. ಸಗೀರ್ ಆಹ್ಮದ್ ಹೇಳಿದರು.
ಲೋಕಸಭಾ ಚುನಾವಣೆ ನಿಮಿತ್ತ ಗುರುವಾರ ಸಂಜೆ ತಾಲೂಕಿನ ಚಿಂತ್ರಪಳ್ಳಿ ಗ್ರಾಮದ ಶಾಸಕ ಅನಿಲ್ ಲಾಡ್ ಫಾರಂಹೌಸ್ನಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿ, ಹೂವಿನಹಡಗಲಿ ಕ್ಷೇತ್ರದ ಜತೆಗೆ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಜವಾಬ್ದಾರಿಯನ್ನು ಹೊತ್ತುಕೊಳ್ಳಿ, ಈ ಎರಡು ಕ್ಷೇತ್ರಗಳು ನಿಮ್ಮ ಎರಡು ಕಣ್ಣುಗಳಂತೆ ಭಾವಿಸಿ, ಆ ಮೂಲಕ ನಮ್ಮ ಪಕ್ಷದ ಕಾರ್ಯಕರ್ತರನ್ನು ರಕ್ಷಿಸುವಂತೆ ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ ನಾಯ್ಕ ಅವರಲ್ಲಿ ಸಗೀರ್ ಆಹಮದ್ ಮನವಿ ಮಾಡಿದರು.
ಖರ್ಗೆ ರೂವಾರಿ: ಹೈದಾರಾಬಾದ್ ಕರ್ನಾಟಕ ಪ್ರಾಂತಕ್ಕೆ ಸಂವಿಧಾನ ಬದ್ಧ ವಿಶೇಷ ಸ್ಥಾನಮಾನ ಸಿಗಲು ಕೇಂದ್ರದಲ್ಲಿನ ಕಾಂಗ್ರೆಸ್ ಸರ್ಕಾರ ಕಾರಣ. ಮುಖ್ಯವಾಗಿ ಈ ಭಾಗದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ಪರಿಶ್ರಮ ಇದರ ಹಿಂದೆ ಸಾಕಷ್ಟಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಕಾರ್ಯಕರ್ತರಲ್ಲಿ ಕೋರಿದರು.
ಕೇಂದ್ರದಲ್ಲಿ ಸೋನಿಯಾ ಗಾಂಧಿ ಅವರ ನೇತೃತ್ವದ ಯುಪಿಎ ಮೈತ್ರಿಕೂಟದ ಸರ್ಕಾರ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತಪರ ಬಜೆಟ್ ಮಂಡಿಸುವ ಮೂಲಕ ರೈತರ ಹಿತರಕ್ಷಣೆ ಮಾಡಿದೆ. ಅದೇ ರೀತಿ ಜನಪರ ನೀತಿಗಳನ್ನು ರೂಪಿಸಿ ಜನಸಾಮಾನ್ಯರ ಬದುಕಿಗೆ ಭದ್ರತೆ ನೀಡುವ ಕೆಲಸ ಮಾಡಿವೆ. ಈ ಎಲ್ಲ ಅಂಶಗಳನ್ನು ಜನರಿಗೆ ಮುಟ್ಟಿಸುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲುವಿನ ದಡಕ್ಕೆ ತಂದು ನಿಲ್ಲಿಸಬೇಕೆಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಸಂಸದ ಎನ್.ವೈ. ಹನುಮಂತಪ್ಪ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಕೆಪಿಸಿಸಿ ಕಾರ್ಯದರ್ಶಿ ವೆಂಕಟರಾವ್ ಘೋರ್ಪಡೆ, ಜಿಪಂ ಮಾಜಿ ಉಪಾಧ್ಯಕ್ಷ ವೈ. ದೇವೇಂದ್ರಪ್ಪ, ಮುಖಂಡರಾದ ಕಮಲಾ ಮರಿಸ್ವಾಮಿ, ಹೆಗ್ಡಾಳ ರಾಮಣ್ಣ, ಕಲ್ಲುಕಂಭ ಪಂಪಾಪತಿ, ಬಿ.ವಿ. ಶಿವಯೋಗಿ, ವಾಣಿ ಶಿವಶಂಕರಗೌಡ, ಕೆ.ಎಂ. ಹಾಲಪ್ಪ ಇತರ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕರ್ತರ ಹಿತ ಕಾಪಾಡುವೆ: ಸಚಿವ ಪಿಟಿಪಿ
ಹಗರಿಬೊಮ್ಮನಹಳ್ಳಿ: ನನ್ನ ಮೈಮನದಲ್ಲಿ ಹರಿಯುತ್ತಿರುವುದು ಕಾಂಗ್ರೆಸ್ ರಕ್ತ, ಪಕ್ಷಕ್ಕೆ ದ್ರೋಹ ಬಗೆದವರನ್ನು ನಾನೆಂದು ಕ್ಷಮಿಸಲಾರೆ. ಕಷ್ಟ ಕಾಲದಲ್ಲಿ ಪಕ್ಷದ ಜತೆಗಿದ್ದು ಪಕ್ಷ ಸಂಘಟಿಸಿರುವ ಕಾರ್ಯಕರ್ತರ ಹಿತ ರಕ್ಷಣೆ ಖಂಡಿತ ಮಾಡುತ್ತೇನೆ ಎಂದು ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಯ ನೀಡಿದರು.
ಸಮಾಲೋಚನಾ ಸಭೆಯಲ್ಲಿ ಪಕ್ಷ ವಿರೋಧಿಗಳಿಗೆ ನೀವು ಬೆಂಬಲ ನೀಡುತ್ತಿದ್ದಿರಿ, ಅವರ ಕಾರ್ಯಗಳನ್ನು ಮಾಡಿಕೊಡುತ್ತಿದ್ದಿರಿ ಎಂಬ ಕಾರ್ಯಕರ್ತರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಸಲದ ಚುನಾವಣೆಯಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ನಿರತರಾಗಿ, ಪಕ್ಷದ ಸೋಲಿಗೆ ಕಾರಣರಾದವರು ಎಷ್ಟೆ ದೊಡ್ಡ ವ್ಯಕ್ತಿಗಳಾಗಿರಲಿ, ಏನೇ ಪ್ರಭಾವ ಬೀರಿದರೂ ನಾನು ಮಾತ್ರ ಅಂಥವರ ಬಗ್ಗೆ ಡೊಂಟ್ಕೇರ್. ಪಕ್ಷ ವಿರೋಧಿ ಕೆಲಸ ಮಾಡಿರುವವರಿಗೆ ಪಕ್ಷದ ವತಿಯಿಂದ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ ಎಂದರು.
ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಏನೋ ಅವಘಡಗಳು, ತಪ್ಪುಗಳು ಆಗಿ ಕ್ಷೇತ್ರದಲ್ಲಿ ಪಕ್ಷ ಸೋತಿರಬಹುದು. ಆದರೆ ಈ ಸಲ ಅಂತಹ ತಪ್ಪುಗಳು ಆಗದಂತೆ ನಿಗಾವಹಿಸುತ್ತೇನೆ. ಎಲ್ಲ ಮನಸ್ತಾಪ ಬಿಟ್ಟು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಸಚಿವ ಪರಮೇಶ್ವರ ನಾಯ್ಕ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.