ಬಗೆದಷ್ಟು ಹೊರ ಬರುತ್ತಿವೆ ಖಾತ್ರಿ ಹಗರಣ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 1
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಹಣ ದುರುಪಯೋಗವಾದ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಲೇ ಇವೆ. ಅಗೆದಷ್ಟು ಹಗರಣಗಳು ಈ ಯೋಜನೆಯಡಿ ಸಿಗುತ್ತಿದ್ದು, ಜಿಲ್ಲೆಯಲ್ಲಿ ಇದುವರೆಗೆ ರು. 3.36 ಕೋಟಿ ಹಣ ದುರುಪಯೋಗವಾಗಿ, ಗ್ರಾಪಂ ಕಾರ್ಯದರ್ಶಿಗಳು, ಪಂಚಾಯತ್ ರಾಜ್ಯ ಇಲಾಖೆ ಎಂಜಿನಿಯರ್ ಸೇರಿದಂತೆ ಒಟ್ಟು 14 ಜನರು ಅಮಾನತಿಗೆ ಗುರಿಯಾಗಿದ್ದಾರೆ. ಅಮಾನತಾದ ಮೂವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿವೆ.
3 ಸಿಬ್ಬಂದಿ ಮೇಲೆ ಕ್ರಿಮಿನಲ್ ಪ್ರಕರಣ: 2010-11ನೇ ಸಾಲಿನಲ್ಲಿ ಸಿರುಗುಪ್ಪ ತಾಲೂಕಿನ ಹಚ್ಚೊಳ್ಳಿ ಗ್ರಾಪಂ ಕಾರ್ಯದರ್ಶಿ ಜಿ.ಕೆ. ಬಸವರಾಜ್ ಅವರು ರು. 1,19,20,000 ಹಣ ದುರುಪಯೋಗದ ಆರೋಪ ಎದುರಿಸುತ್ತಿದ್ದು, ಈತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿರುವುದಲ್ಲದೆ ಜಿಪಂ ಉಪ ಕಾರ್ಯದರ್ಶಿ (ಆಡಳಿತ)ಯನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಿ, ವಿಚಾರಣೆ ನಡೆಯುತ್ತಿದೆ. ಈ ಪ್ರಕರಣವನ್ನು ಗಂಭೀರ ಎಂದು ಪರಿಗಣಿಸಲಾಗಿದೆ. ಪೊಲೀಸರ ಸಹಾಯದಿಂದ ರು. 77 ಲಕ್ಷಕ್ಕೂ ಅಧಿಕ ಹಣವನ್ನು ಈತನಿಂದ ವಸೂಲಿ ಮಾಡಲಾಗಿದೆ. ಇನ್ನು ಸಿರುಗುಪ್ಪ ತಾಲೂಕಿನ ಕರೂರು ಗ್ರಾಪಂ ಕಾರ್ಯದರ್ಶಿ ಸಿ. ವೀರೇಶ್ ಮೇಲೆ ರು. 8.48 ಲಕ್ಷ ದುರುಪಯೋಗದ ಆರೋಪ ಇದ್ದು, ಈತನ ವಿರುದ್ಧವೂ ಅಪರಾಧಿಕ ಪ್ರಕರಣ ದಾಖಲಾಗಿದೆ. ಈತನ ವಿಚಾರಣೆಗೆ ಮುಖ್ಯ ಲೆಕ್ಕಾಧಿಕಾರಿಯನ್ನು ನೇಮಿಸಲಾಗಿದ್ದು, ವಿಚಾರಣೆ ನಡೆಯಲಿದೆ. ಈ ಇಬ್ಬರು ಅಮಾನತಿನಲ್ಲೇ ಇದ್ದಾರೆ. ಇದರಂತೆ ದೇವಗೊಂಡನಹಳ್ಳಿ ಗ್ರಾಪಂ ಕಾರ್ಯದರ್ಶಿ ಮಲ್ಲಿಕಾರ್ಜುನನ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಜಿಪಂ ಮೂಲಗಳು 'ಕನ್ನಡಪ್ರಭ'ಕ್ಕೆ ತಿಳಿಸಿವೆ.
ಶಿಸ್ತಿನ ಕ್ರಮಕ್ಕೆ ಗುರಿ: 2008-09ನೇ ಸಾಲಿನಲ್ಲಿ ಹೂವಿನಹಡಗಲಿ ತಾಲೂಕಿನ ಸೋವೇನಹಳ್ಳಿ ಗ್ರಾಪಂ ಕಾರ್ಯದರ್ಶಿ ಮಹಮ್ಮದ್ ಖದೀರ್ ವಿರುದ್ಧ ರು. 1,91,290 ದುರುಪಯೋಗ ಆರೋಪ, 2009-10ನೇ ಸಾಲಿನಲ್ಲಿ ದೂಪದಹಳ್ಳಿ ಗ್ರಾಪಂ ಕಾರ್ಯದರ್ಶಿ ಕೆ.ಎಂ. ತಿಪ್ಪೇಸ್ವಾಮಿ ವಿರುದ್ಧ ರು. 34,56,481, ಕೂಡ್ಲಿಗಿ ಪಂಚಾಯತ್ ರ್ಜ್ ಎಂಜಿನಿಯರಿಂಗ್ ವಿಭಾಗದ ಕಿರಿಯ ಎಂಜಿನಿಯರ್ ಕೆ. ನಜೀರ್ಸಾಬ್ ಹಾಗೂ ಎಸ್.ಎಂ. ಶ್ರೀಷ ವಿರುದ್ಧ ಕರ್ತವ್ಯ ಲೋಪದ ಆರೋಪ, ಕಂದಗಲ್ ಗ್ರಾಪಂ ಕಾರ್ಯದರ್ಶಿ ಸಿ. ಚೌಡಪ್ಪ ವಿರುದ್ಧ ರು. 1.05 ಕೋಟಿ, ಹಡಗಲಿ ತಾಲೂಕು ನಾಗತಿ ಬಸಾಪುರ ಗ್ರಾಪಂ ಕಾರ್ಯದರ್ಶಿ ಎ. ಕೊಟ್ರೇಶಿ ವಿರುದ್ಧ ರು. 4.14 ಲಕ್ಷ, 2011-12ನೇ ಸಾಲಿನಲ್ಲಿ ಪಂಚಾಯತ್ ರಾಜ್ ಎಂಜಿನಿಯರ್ ವಿಭಾಗದ ಎಇ ಡಿ. ವೆಂಕಟರಮಣ ವಿರುದ್ಧ ರು. 3,39,982, ಹೊಸಪೇಟೆ ತಾಲೂಕಿನ ರಾಮಸಾಗರ ಗ್ರಾಪಂ ಕಾರ್ಯದರ್ಶಿ ರಾಮಾಚಾರಿ ಶಾಖಾಪುರ್ ವಿರುದ್ಧ ರು. 3,30,069, ಕಿರಿಯ ಎಂಜಿನಿಯರ್ಗಳಾದ ಕೆ.ವಿ. ಹೇಮಾದ್ರಿ, ಎಂ. ಪಂಪಾಪತಿ ವಿರುದ್ಧ ರು. 44,90,824, ಹಡಗಲಿಯ ಅರಣ್ಯಾಧಿಕಾರಿ ಟಿ. ಡೇವಿಡ್ ವಿರುದ್ಧ ರು. 3.92 ಲಕ್ಷ ಹಣ ದುರುಪಯೋಗದ ಆರೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿತ್ತು. ಸದ್ಯ ಅವರು ಸೇವೆಗೆ ಮರಳಿದ್ದಾರೆ. ನಾಗತಿ ಬಸಾಪುರ ಗ್ರಾಪಂನ ಸುಭಾಷ್ ಮೇಟಿ ರು. 6.2 ಲಕ್ಷ ದುರುಪಯೋಗದ ಆರೋಪದಡಿ ಅಮಾನತಾಗಿದ್ದಾರೆ. ಇನ್ನು ಚಿಲಕನಹಟ್ಟಿ ಗ್ರಾಪಂ ಕಾರ್ಯದರ್ಶಿ ಎಂ. ಸಿದ್ದಲಿಂಗಸ್ವಾಮಿ, ದೇವಗಿರಿ ಗ್ರಾಪಂ ಕಾರ್ಯದರ್ಶಿ ಕೆ.ಎಂ. ಕೊಟ್ರಯ್ಯ ವಿರುದ್ಧ ಕೇವಲ ಇಲಾಖೆ ವಿಚಾರಣೆ ನಡೆಯಲಿದೆ ಎಂದು ತಿಳಿದುಬಂದಿದೆ.
ಸರ್ಕಾರ ಖಾತ್ರಿ ಯೋಜನೆ ಜಾರಿಗೆ ತಂದು ಗ್ರಾಮಗಳ ಅಭಿವೃದ್ಧಿ ಮಾಡಬೇಕೆಂದು ಉದ್ದೇಶ ಇಟ್ಟುಕೊಂಡಿದ್ದರೆ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಗ್ರಾಮಗಳನ್ನು ಅಭಿವೃದ್ಧಿ ಮಾಡದೇ ತಾವುಗಳು ಅಭಿವೃದ್ಧಿಯಾಗುತ್ತಿದ್ದಾರೆ. ಇಂಥವರು ಇಲಾಖೆಯಲ್ಲಿದ್ದು ಜನತೆಗಾಗಿ ಕೆಲಸ ಮಾಡದೇ ಜನರ ಹಣವನ್ನು ಹೀಗೆ ದುರುಪಯೋಗ ಮಾಡಿಕೊಳ್ಳುತ್ತಿರುವುದು ಜಿಲ್ಲೆ ಜನತೆಯಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ತಪ್ಪು ಕಡಿಮೆಯಾಗುತ್ತಿಲ್ಲ...
ಎನ್ಆರ್ಇಜಿ ಯೋಜನೆಯಡಿ ಅಧಿಕಾರಿಗಳು, ಸಿಬ್ಬಂದಿ ಮೇಲೆ ಶಿಸ್ತುಕ್ರಮ ನಡೆದರೂ, ತಪ್ಪುಗಳು ಮಾತ್ರ ನಿಲ್ಲುತ್ತಿಲ್ಲ. 2008-09ರಿಂದ 2013-14ರ ವರೆಗೆ ಸುಮಾರು 16 ಅಧಿಕಾರಿ, ಸಿಬ್ಬಂದಿಗಳು ಯೋಜನೆ ಅನುಷ್ಠಾನದಲ್ಲಿ ವಿವಿಧ ಕಾರಣಕ್ಕಾಗಿ ಶಿಸ್ತಿನಕ್ರಮಕ್ಕೆ ಒಳಗಾಗಿದ್ದಾರೆ. ಕೆಲ ಪ್ರಕರಣದಲ್ಲಿ ವಿಚಾರಣೆ ನಡೆದು, ಅಮಾನತಾದ ಅಧಿಕಾರಿಗಳು ಸೇವೆಗೆ ಹಾಜರಾಗಿದ್ದರೆ, ಇನ್ನು ಕೆಲ ಅಧಿಕಾರಿಗಳು ಸೇವೆಯಿಂದ ಹೊರ ಉಳಿದಿದ್ದಾರೆ. ಗಂಭೀರ ಪ್ರಕರಣಗಳಿರುವ ಆರೋಪಿತರನ್ನು ಅಮಾನತಿನಲ್ಲಿ ಮುಂದುವರಿಸಲಾಗಿದೆ. ತಪ್ಪುಗಳಲ್ಲಿ ಕೆಲ ಗ್ರಾಪಂ ಅಧಿಕಾರಿಗಳೊಂದಿಗೆ ಜನಪ್ರತಿನಿಧಿಗಳ ಪ್ರಭಾವವೂ ಇದೆ.
-ಶಶಿಧರ ಮೇಟಿ