ಮುರುಗನ್ ದೇವರ 40ನೇ ವಾರ್ಷಿಕೋತ್ಸವ
ಹೊಸಪೇಟೆ: ತಾಲೂಕಿನ ಕಡ್ಡಿರಾಂಪುರ ಗ್ರಾಮದಲ್ಲಿ ಮುರುಗನ್ ದೇವಸ್ಥಾನದ ಆಡಿ ಕೀರ್ತಿಕೆಯ 40ನೇ ವಾರ್ಷಿಕೋತ್ಸವ ಶ್ರದ್ಧಾ ಭಕ್ತಿಯಿಂದ ಬುಧವಾರ ಜರುಗಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಸುಬ್ರಹ್ಮಣ್ಯಸ್ವಾಮಿಯ ಶೂಲಾಯುಧ ಹೊತ್ತು ಮೆರವಣಿಗೆ ಮೂಲಕ ಸ್ವಾಮಿಯ ದೇವಸ್ಥಾನ ತಲುಪಿ ದೇವರಿಗೆ ಅಲಗುಗಳನ್ನು ಪ್ರತಿಷ್ಠಾಪಿಸುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಮೆರವಣಿಗೆಯಲ್ಲಿ ನೂರಾರು ಭಕ್ತರು ಬಾಯಿಗೆ, ಬೆನ್ನಿಗೆ, ಕಾಲುಗಳಿಗೆ ಸೇರಿದಂತೆ ದೇಹದ ಇತರೆ ಭಾಗದಲ್ಲಿ ಕಬ್ಬಿಣದ ಸರಳುಗಳ ಶೂಲ ಹಾಕಿಕೊಂಡು ವಾಹನದ ಮೇಲೆ ಕಟ್ಟಿದ್ದ ಚಕ್ರಗಳಿಗೆ ಜೋತು ಬಿದ್ದು, ಭಾವವೇಷಕ್ಕೆ ಒಳಗಾಗಿ ಕಾವಡಿ ಸೇವೆ ನಡೆಸಿ ಶೂಲ ಸೇವೆ ಅರ್ಪಿಸಿದರು. ಶೂಲಕ್ಕೆ ಸಿಲುಕಿ ದೇವರ ಮೆರವಣಿಗೆಯಲ್ಲಿ ಕೆಲವರು ಸೂಲ ಹಾಕಿಕೊಂಡು ದೇವರಿಗೆ ಹರಕೆ ಅರ್ಪಿಸಿದರು.
ಹಂಪಿ ಸಮೀಪದ ತುರ್ತು ಕಾಲುವೆಯಿಂದ ಕಡ್ಡಿರಾಂಪುರ ದೇವಸ್ಥಾನದವರೆಗೆ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು. ಗ್ರಾಮದ ಹಿರಿಯರಾದ ಇ. ಶಂಕರವೇಲು, ಇ. ಸೆಲ್ವರಾಜ್, ಗಣೇಶ್, ಅಯ್ಯಪ್ಪ, ಮುರುಗನ್ ಸೇರಿದಂತೆ ಸುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.