ರೈತರು ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ
ಕೂಡ್ಲಿಗಿ: ರೈತ ಕುಟುಂಬಗಳು ಕೃಷಿಗೆ ಮಹತ್ವ ನೀಡುವ ಜತೆಗೆ ಶಿಕ್ಷಣಕ್ಕೂ ಹೆಚ್ಚಿನ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ. ಇಲ್ಲಿನ ರೈತರು ಶಾಲಾ ಮಕ್ಕಳಿಗೆ ನೋಟ್‌ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮ ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಉಜ್ಜಿನಿ ಜಿಪಂ ಸದಸ್ಯೆ ಸಾವಜ್ಜಿ ಶಾರದಾ ಪ್ರಸಾದ್ ರೈತರ ಸಮಾಜಿಕ ಕಳಕಳಿಗೆ ಪ್ರಶಂಸೆ ವ್ಯಕ್ತಪಡಿಸಿದರು.
ಅವರು ತಾಲೂಕಿನ ಯರ್ರಮ್ಮನಹಳ್ಳಿ ಗ್ರಾಮದಲ್ಲಿ ನಿಂಬಳಗೆರೆಯ ಕಲ್ಲೇಶ್ವರ ಪಪ್ಪಾಯಿ ಬೆಳೆಗಾರರ ಸಂಘ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಪುಸ್ತಕ ಉಚಿತ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೃಷಿಯನ್ನು ನಂಬಿದ ಸಾಕಷ್ಟು ರೈತರು ನಷ್ಟ ಅನುಭವಿಸುವ ಮೂಲಕ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ನಗರಗಳಿಗೆ ವಲಸೆ ಹೆಚ್ಚುತ್ತಿದೆ. ಅದನ್ನು ತಪ್ಪಿಸಲು ಸೂಕ್ತ ಮಾರುಕಟ್ಟೆ ಸೇರಿದಂತೆ ಬೆಂಬಲ ಬೆಲೆ ನಿಗದಿಗೊಳಿಸುವುದು ಸರ್ಕಾರದ ಜವಾಬ್ದಾರಿ.
ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್, ನೋಟ್‌ಬುಕ್ ವಿತರಿಸಿದರು. ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ ಅಧ್ಯಕ್ಷತೆ ವಹಿಸಿದ್ದರು. ಉಜ್ಜಿನಿ ಸಿಆರ್‌ಪಿ ಅಜ್ಜಪ್ಪ, ತೋಟಗಾರಿಕಾ ಸಹಾಯಕ ಅಧಿಕಾರಿ ವಿಜಯ್, ನಾಗರಾಜ್, ಸಂಘದ ಎಚ್.ಕೆ. ಕಲ್ಲೇಶ್, ಬೊಮ್ಮಣ್ಣ, ಬಿ.ಎಸ್. ವಿಶ್ವನಾಥ, ಎಂ.ಜಿ. ರಾಜೇಂದ್ರಗೌಡ, ಅಂಕಮನಾಳ್ ಕೊಟ್ರೇಶ್, ಹಳ್ಳೇರ ಚನ್ನಪ್ಪ, ಆರ್. ಬಸವರಾಜ, ಬಿ.ಎಂ. ಪ್ರಸನ್ನ ಸೇರಿ ಅನೇಕರು ಇದ್ದರು.