ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಅಶ್ವಿನಿಗೆ ಪ್ರಶಸ್ತಿ: ಕೂಡ್ಲಿಗಿ ಜನತೆಗೂ ಹೆಮ್ಮೆ

Lingaraj Badiger
Updated On : 3 Aug 2013, 10:58 am

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಆ. 2
ಅಶ್ವಿನಿ ಅಂಗಡಿ ಎಂದರೆ ಈಗ ಇಡೀ ವಿಶ್ವವೇ ಆಕೆಯತ್ತ ನೋಡುತ್ತಿದ್ದು, ಎರಡೂ ಕಣ್ಣುಗಳಿಲ್ಲದ ಯುವತಿಯೊಬ್ಬಳು ಬಡಕುಟುಂಬದಲ್ಲಿ ಹುಟ್ಟಿ ವಿಶ್ವ ಮಟ್ಟದ ಸಾಧನೆ ಮಾಡಿರುವುದು ಕಣ್ಣಿದ್ದವರಿಗೂ ಮಾದರಿಯಾಗಿರುವುದು ಎಲ್ಲರಿಗೂ ಗೊತ್ತು. ಈ ಸಾಧಕಿಯ ತಾಯಿಯ ತವರು ಮನೆ ಕೂಡ್ಲಿಗಿ ತಾಲೂಕಿನ ಮಹಾದೇವಪುರ ಗ್ರಾಮ ಎನ್ನುವುದು ಕೂಡ್ಲಿಗಿ ತಾಲೂಕಿನ ಅವರ ಸಂಬಂಧಿಗಳಿಗೆ ಹಾಗೂ ಜನತೆಗೆ ಹೆಮ್ಮೆಯೆನಿಸಿದೆ.
ಅಶ್ವಿನಿ ಅಂಗಡಿ ತನ್ನ ಉನ್ನತ ಸಾಧನೆಯಿಂದಾಗಿ ವಿಶ್ವಸಂಸ್ಥೆ ಆಕೆಗೆ ಪ್ರಶಸ್ತಿ ನೀಡಿ ಗೌರವಿಸಿದ್ದು, ಈ ಯುವತಿಗೆ ಇದೂವರೆಗೂ ತವರಿನಲ್ಲಿ ಗೌರವಿಸುವ ಕಾರ್ಯ ನಡೆದಿದ್ದಿಲ್ಲ. ಆದರೀಗ ಜಿಲ್ಲಾ ಪಂಚಮಸಾಲಿ ಸಂಘದವರು ಆ. 3ರಂದು ಹೂವಿನಹಡಗಲಿಯಲ್ಲಿ ಆಯೋಜಿಸಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಶ್ವಿನಿ ಅಂಗಡಿ ಅವರಿಗೆ ವಿಶೇಷ ಸನ್ಮಾನ ಮಾಡುತ್ತಿರುವುದು ಇಡೀ ಜಿಲ್ಲೆಯ ಜನತೆಗೆ ಈಗ ಸಂತಸ ಮೂಡಿಸಿದೆ.
ಅಶ್ವಿನಿ ತಾಯಿ ತವರು ಕೂಡ್ಲಿಗಿ: ಅಶ್ವಿನಿ ಅಂಗಡಿ ತಾಯಿ ವೇದಾವತಿ ಅವರ ತವರು ಮನೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಸಮೀಪದ ಮಹಾದೇವಪುರ ಗ್ರಾಮದಲ್ಲಿದೆ. ವೇದಾವತಿ (ರಾಜೇಶ್ವರಿ) ಅವರನ್ನು ಬಳ್ಳಾರಿ ಸಮೀಪದ ಚೇಳ್ಳಗುರ್ಕಿ ಗ್ರಾಮದ ಪ್ರಕಾಶ್ ಅವರಿಗೆ ವಿವಾಹ ಮಾಡಿಕೊಟ್ಟಿದ್ದರು. ಈ ದಂಪತಿಯ ಮಗಳೇ ಅಶ್ವಿನಿ ಅಂಗಡಿ.
ಮಹಾದೇವಪುರದಲ್ಲಿ ಈಗಲೂ ವೇದಾವತಿ ಅವರ ಕುಟುಂಬದವರು ವಾಸವಾಗಿದ್ದಾರೆ. ವೇದಾವತಿಯವರಿಗೆ ಓರ್ವ ಸಹೋದರನಿದ್ದಾನೆ.
ಅಶ್ವಿನಿ ಚಿಕ್ಕಮ್ಮ, ವೇದಾವತಿ ಸಹೋದರಿ ಗಿರಿಜಮ್ಮ ಅವರನ್ನು ಸಂಡೂರಿಗೆ ಮದುವೆ ಮಾಡಿಕೊಡಲಾಗಿದೆ. ಹೀಗೆ ಅಶ್ವಿನಿ ಅಂಗಡಿ ಅವರ ತಾಯಿಯ ಬಂಧು, ಬಳಗ ಕೂಡ್ಲಿಗಿ ತಾಲೂಕಿನಲ್ಲೇ ಇರುವುದರಿಂದ ಇಲ್ಲಿಯ ಸಂಬಂಧಿಗಳು ಅಶ್ವಿನಿ ಅಂಗಡಿ ಸಾಧನೆಗೆ ಹೆಮ್ಮೆಪಡುತ್ತಿದ್ದಾರೆ.
ಕೂಡ್ಲಿಗಿಯಲ್ಲೇ ಹೆಚ್ಚು ಸಂಬಂಧಿಗಳು: ಅಶ್ವಿನಿ ಅಂಗಡಿ ಅವರ ಅಣ್ಣನ ಹೆಂಡತಿ ಅಂದರೆ ಅತ್ತಿಗೆಯ ತವರು ಮನೆ ಸಹ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮ. ಇವರು ಸಹ ಬಣವಿಕಲ್ಲು ಗ್ರಾಮದಲ್ಲಿ ಹೋಟೆಲ್ವೊಂದನ್ನು ನಡೆಸುತ್ತಿದ್ದಾರೆ.
ಅಶ್ವಿನಿಯ ಒಡಹುಟ್ಟಿದ  ಅಣ್ಣ ಶಿವುಗೆ ತಮ್ಮ ಪುತ್ರಿ ವಿದ್ಯಾಳನ್ನು 2011ರಲ್ಲಿ ಮದುವೆ ಮಾಡಿಕೊಟ್ಟಿದ್ದೇನೆ. ಹೀಗಾಗಿ ನಮ್ಮ ಕುಟುಂಬಕ್ಕೂ ಅಶ್ವಿನಿ ಕುಟುಂಬಕ್ಕೂ ನೆಂಟಸ್ಥಿಕೆ ಇದೆ. ಅಶ್ವಿನಿ ಸಾಧನೆ ನಮಗೆಲ್ಲ ಅತೀವ ಸಂತಸ ತಂದುಕೊಟ್ಟಿದೆ ಎನ್ನುತ್ತಾರೆ ಕೂಡ್ಲಿಗಿ ತಾಲೂಕು ಬಣವಿಕಲ್ಲು ಗ್ರಾಮದ ಜಿ. ಮಲ್ಲಿಕಾರ್ಜುನ.
ಇರುಸು ಮುರುಸು ಬೇಡ: ತಮ್ಮ ಮಗಳ ಮದುವೆ ಸಂದರ್ಭದಲ್ಲಿ ಅಶ್ವಿನಿ ಅಂಗಡಿ ನಮ್ಮೂರಿಗೆ ಬರಲಿಲ್ಲ, ಯಾಕೆ ನೀನು ನಮ್ಮೂರಿಗೆ ಮದುವೆಗೆ ಬರಲಿಲ್ಲ ಎಂದು ಕೇಳಿದರೆ 'ಮದುವೆ ಎಂದರೆ ನೂರಾರು ಸಂಬಂಧಿಕರು ಬಂದಿರುತ್ತಾರೆ, ಆಗ ಕಣ್ಣಿಲ್ಲದ ನನ್ನನ್ನು ನೋಡಿ ಯಾರು ಅಂತ ಕೇಳಿದಾಗ ನಮ್ಮ ಅಪ್ಪ, ಅಮ್ಮನಿಗೆ ದುಃಖಃ ಬರಬಾರದು ಮತ್ತು ಸಂಬಂಧಿಗಳಿಗೂ ಇರುಸು-ಮುರುಸ ಆಗಬಾರದು. ಹೀಗಾಗಿ ಬಂದಿರಲಿಲ್ಲ ಎಂದು ಆಕೆ ಹೇಳಿದ್ದ ಮಾತನ್ನು ಜಿ. ಮಲ್ಲಿಕಾರ್ಜುನ ಅವರು 'ಕನ್ನಡಪ್ರಭ'ದೊಂದಿಗೆ ಹಂಚಿಕೊಂಡರು.
ವಿಶ್ವಸಂಸ್ಥೆ ಕೊಡಮಾಡುವ ಗಾರ್ಡನ್ ಬ್ರೌನ್ ಪ್ರಶಸ್ತಿ ಭಾಜನಳಾಗಿರುವ ಅಶ್ವಿನಿಗೆ ತಮ್ಮ ಹುಟ್ಟೂರು ಚೇಳ್ಳಗುರ್ಕಿಯ ಜತೆಗೆ ಕೂಡ್ಲಿಗಿ ತಾಲೂಕಿಗೂ ಬಿಡಿಸಲಾಗದ ನಂಟು. ಹೀಗಾಗಿಯೇ ಕೂಡ್ಲಿಗಿ ತಾಲೂಕಿನ ಜನತೆಯಲ್ಲೂ ಆಕೆ ವಿಶ್ವಮಟ್ಟದಲ್ಲಿ ಹೆಸರು ಮಾಡಿರುವುದು ಸಂತಸ ತಂದಿದೆ.

ಇಂದು ಪ್ರತಿಭಾ ಪುರಸ್ಕಾರ, ಅಭಿನಂದನಾ ಕಾರ್ಯಕ್ರಮ
ಹೂವಿನಹಡಗಲಿ: ತಾಲೂಕು ವೀರಶೈವ ಪಂಚಮಸಾಲಿ ಸಂಘ ಆ. 3ರಂದು ಜಿಲ್ಲೆಯ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ಪಂಚಮಸಾಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನೂತನ ಸಚಿವ, ಶಾಸಕರ ಅಭಿನಂದನಾ ಕಾರ್ಯಕ್ರಮ ಆಯೋಜಿಸಿದೆ ಎಂದು ಪಂಚಮಸಾಲಿ ಸಂಘದ ತಾಲೂಕು ಅಧ್ಯಕ್ಷ ಎಂ.ವಿ. ಪಾಟೀಲ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ ಪಟ್ಟಣದ ಕೆಇಬಿ ಇಲಾಖೆ ಬಳಿ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ನೂತನ ನಾಮಫಲಕ ಅನಾವರಣ ನೆರವೇರಿಸಲಿದ್ದು, ನಂತರ ಶಿವಶಾಂತವೀರ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಹರಿಹರ ಪಂಚಮಸಾಲಿ ಪೀಠದ 2008 ಜಗದ್ಗುರು ಶ್ರೀ ಸಿದ್ದಲಿಂಗೇಶ್ವರ ಸ್ವಾಮೀಜಿ ಮತ್ತು ಗವಿಮಠದ ಹಿರಿಶಾಂತವೀರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಬಸವರಾಜ ದಿಂಡೂರ ಉದ್ಘಾಟಿಸುವರು. ಜಿಲ್ಲಾಧ್ಯಕ್ಷ ಬಿ. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಹರಪ್ಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ ಅವರನ್ನು ಇದೇ ಸಂದರ್ಭದಲ್ಲಿ ಸಮಾಜದ ವತಿಯಿಂದ ಅಭಿನಂದಿಸಲಾಗುವುದು ಎಂದು ಹೇಳಿದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಜಿಲ್ಲೆಯ 80ಕ್ಕೂ ಹೆಚ್ಚು ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ವಿಶ್ವಸಂಸ್ಥೆಯ ಗೌರವಕ್ಕೆ ಪಾತ್ರಳಾದ ಅಶ್ವಿನಿ ಅಂಗಡಿ, ಸ್ನಾತಕೋತ್ತರ ಪದವಿಯಲ್ಲಿ ಐದು ಚಿನ್ನದ ಪದಕ ಪಡೆದ ಸ್ನೇಹ ಹೊಳಗುಂದಿ, ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದ ಮತ್ತೊಬ್ಬ ವಿದ್ಯಾರ್ಥಿ ಕೋಡಿಹಳ್ಳಿ ಚೇತನ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು. ಪುರಸಭೆಗೆ ನೂತನವಾಗಿ ಚುನಾಯಿತರಾಗಿರುವ ಕೋಡಿಹಳ್ಳಿ ಕೊಟ್ರೇಶ, ವಜ್ರನಾಭಿ ಬಣಕಾರ, ಹಣ್ಣಿ ವೀರಮ್ಮ, ಜಿ. ರುದ್ರಮ್ಮ, ಕರೆಯೆತ್ತಿನ ಶಶಿಕಲಾ ಅವರನ್ನು ಸನ್ಮಾನಿಸಲಾಗುವುದು ಎಂದರು.
ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು. ಕೋಡಿಹಳ್ಳಿ ಮುದುಕಪ್ಪ, ವಿಜಯಕುಮಾರ ಪಾಟೀಲ್, ಕೆ. ಪ್ರಕಾಶ್, ಕೆ. ಪತ್ರೇಶ್, ಪರಶೆಟ್ಟಿ ಪ್ರಕಾಶ್, ಹನಕನಹಳ್ಳಿ ಹಾಲೇಶ್, ರಾಚನಗೌಡ ಇತರರು ಗೋಷ್ಠಿಯಲ್ಲಿದ್ದರು.
- ಭೀಮಣ್ಣ ಗಜಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement