ಇಂದು ಕಾಂಗ್ರೆಸ್ ವೀಕ್ಷಕರ ಸಭೆ
ಬಳ್ಳಾರಿ: ಕಾಂಗ್ರೆಸ್ ಪಕ್ಷದ ವತಿಯಿಂದ ಲೋಕಸಭಾ ಚುನಾವಣೆ ವಿಷಯವಾಗಿ ವೀಕ್ಷಕರ ಸಭೆ ಆ. 3ರಂದು ಬೆಳಗ್ಗೆ 11 ಗಂಟೆಗೆ ನಗರದ ಬಾಲಾ ರಿಜೆನ್ಸಿಯಲ್ಲಿ ಕರೆಯಲಾಗಿದೆ ಎಂದು ಬಳ್ಳಾರಿ ಜಿಲ್ಲಾ ನಗರ ಕಾಂಗ್ರೆಸ್ ಅಧ್ಯಕ್ಷ ಜೆ.ಎಸ್. ಆಂಜನೇಯಲು ತಿಳಿಸಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನಿರ್ದೇಶನದಂತೆ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿ ವ್ಯಾಪ್ತಿಯ ಕ್ಷೇತ್ರಗಳಿಂದ ಮಾಜಿ ಸಚಿವ ಸಗೀರ್ ಅಹ್ಮದ್, ಮಲ್ಲಿಕಾರ್ಜುನ ನಾಗಪ್ಪ, ಕೆಪಿಸಿಸಿ ಸದಸ್ಯ ಗೋಪಿನಾಥ್ ಅವರನ್ನು ವೀಕ್ಷಕರನ್ನಾಗಿ ನೇಮಿಸಿದ್ದಾರೆ. ಅವರು ಆ. 3ರಂದು ವೀಕ್ಷಕರ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆ ಕುರಿತು, ಅರ್ಹ ಅಭ್ಯರ್ಥಿಗಳ ಬಗ್ಗೆ ಅಭಿಪ್ರಾಯ ಸಂಗ್ರಹ, ಚುನಾವಣೆಯಲ್ಲಿ ಪಕ್ಷದ ಸಮರ್ಥ ಸಂಘಟನೆ ಇನ್ನಿತರೆ ವಿಷಯಗಳ ಬಗ್ಗೆ ಚರ್ಚೆಯಾಗಲಿದೆ. ಸಭೆಗೆ ಕಾಂಗ್ರೆಂಸ್ ಪದಾಧಿಕಾರಿಗಳು ಆಗಮಿಸಬೇಕು ಎಂದು ಆಂಜನೇಯಲು ಕೋರಿದ್ದಾರೆ.
ಬೈಕ್ ಕಳ್ಳತನ: ದೂರು ದಾಖಲು
ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದ ಬಸವೇಶ್ವರ ಬಜಾರ್ನಲ್ಲಿ ನಿಲ್ಲಿಸಿದ ಬೈಕ್ನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಜು. 22ರಂದು ನಡೆದಿದೆ. ವ್ಯಕ್ತಿಯೋರ್ವ ತನ್ನ ಹಿರೋಹೊಂಡ ಸ್ಲ್ಪೆಂಡರ್ ಪ್ಲಸ್ ಬೈಕ್ನ್ನು ಜು. 22ರಂದು ಬೆಳಗ್ಗೆ 10 ಸುಮಾರಿಗೆ ಬಿಟ್ಟು ಮಹಾವೀರ ಗೊಬ್ಬರದ ಅಂಗಡಿಗೆ ಗೊಬ್ಬರ ಖರೀದಿಸಲು ಹೋದಾಗ, ಯಾರೋ ಕಳ್ಳರು ಮೋಟರ್ ಸೈಕಲ್ನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟ್ಕಾ: ಓರ್ವನ ಬಂಧನ
ಬಳ್ಳಾರಿ: ನಗರದ ಬಳ್ಳಾರಪ್ಪ ಕಾಲೋನಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಆಡುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿ, ಓರ್ವನನ್ನು ಬಂಧಿಸಿ, ಆತನಿಂದ ಮಟ್ಕಾ ಪಟ್ಟಿ, ರು. 675 ವಶಪಡಿಸಿಕೊಂಡಿದ್ದಾರೆ. ಬಂಧಿತನು ಬಳ್ಳಾರಪ್ಪ ಕಾಲೋನಿಯ ಹನುಮಂತಪ್ಪ ಎನ್ನಲಾಗಿದೆ. ಖಚಿತ ಮಾಹಿತಿಯ ಮೇರೆಗೆ ಬಳ್ಳಾರಿ ಎಪಿಎಂಸಿ ಪೊಲೀಸರು ದಾಳಿ ಮಾಡಿ, ಆರೋಪಿಗಳನ್ನು ಬಂಧಿಸಿದ್ದಾರೆ. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.