ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಗಣಿ, ಭೂ ವಿಜ್ಞಾನ ಇಲಾಖೆ ನಿರ್ದೇಶಕರ ವರ್ಗಾವಣೆ?

Lingaraj Badiger
Updated On : 3 Aug 2013, 10:57 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 2
ಗಣಿಗಾರಿಕೆ ಎಂದಾಕ್ಷಣ ಬಳ್ಳಾರಿ ಅಧಿಕಾರಿಗಳು ಎರಡು ಮಾರು ದೂರ ಹೋಗುವ ಪರಿಸ್ಥಿತಿ ಇನ್ನೂ ಮುಂದುವರಿದಿದೆ. ಗಣಿಗಾರಿಕೆ ವಿವಾದಗಳು, ದೂರುಗಳು ಯಾರಿಗೆ ಎಲ್ಲಿ, ಆವರಿಸುತ್ತವೆಯೋ ಎಂಬ ಭೀತಿ ಅಧಿಕಾರಿಗಳಲ್ಲಿ ಈಗಲೂ ಕಾಡುತ್ತಿದೆ. ಸಿಬಿಐ, ಸಿಇಸಿ, ಲೋಕಾಯುಕ್ತ ತನಿಖೆ ನಡೆದು, ವರದಿಗಳ ಅನುಷ್ಠಾನ ಹಂತದಲ್ಲಿವೆ, ಗಣಿಗಾರಿಕೆ ಕುರಿತು ಮಾಹಿತಿಗಳನ್ನು ನೋಡಿ, ಕೇಳಿದಾಕ್ಷಣ, ಪರಿಶೀಲಿಸಿದ ಕೂಡಲೇ ಎಲ್ಲ ಅಧಿಕಾರಿಗಳಿಗೆ ತಿಳಿಯುವುದು ಕಷ್ಟ. ಏತನ್ಮಧ್ಯೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ವರ್ಗಾವಣೆ ಆರಂಭವಾಗಿದ್ದು, ನಿರ್ದೇಶಕ ಶ್ರೀನಿವಾಸ್ ವರ್ಗಾವಣೆ ಇನ್ನು ಕೆಲವೇ ದಿನಗಳಲ್ಲಿ ಆದರೂ ಆಶ್ಚರ್ಯವಿಲ್ಲ.
ಶ್ರೀನಿವಾಸ್ ಅವರು ವರ್ಗವಾದರೆ ಗಣಿಗಾರಿಕೆ ಬಗ್ಗೆ ಉತ್ತಮ ಮಾಹಿತಿ ಇರುವ ಅಧಿಕಾರಿಗಳು ರಾಜ್ಯದಲ್ಲಿ ಸದ್ಯ ಯಾರೂ ಇಲ್ಲ. ಗಣಿಗಾರಿಕೆ ಎಂದಾಕ್ಷಣ ವಿವಾದ, ಗೊಂದಲ, ಅಕ್ರಮಗಳು ಎದುರಾಗುತ್ತವೆ. ಹೀಗಿರುವಾಗ ಯಾವ ಅಧಿಕಾರಿಗಳು ಗಣಿಗಾರಿಕೆಗೆ ಸಂಬಂಧಿಸಿದ ವಿಷಯ, ಇಲಾಖೆಯಲ್ಲಿ ಕೆಲಸ ಮಾಡಲು ಆಸಕ್ತಿ ವಹಿಸುತ್ತಿಲ್ಲ. ಇಂತಹ ವಿವಾದಗಳ ಮಧ್ಯೆಯೇ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಸಿಇಸಿ ಹಾಗೂ ಸಿಬಿಐ ತನಿಖೆಗಳಿಗೆ ಕೊಂಡಿಯಾಗಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ ಶ್ರೀನಿವಾಸ್, ಉಪನಿರ್ದೇಶಕ ಕರೇಗೌಡ, ನಿವೃತ್ತ ಉಪ ನಿರ್ದೇಶಕ ಶಂಕರ್ ಹಾಗೂ ಬಳ್ಳಾರಿ ಜಿಲ್ಲಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು, ಸಿಇಸಿಗೆ ಬೇಕಾಗುವ ಅಗತ್ಯ ಮಾಹಿತಿ, ತನಿಖೆಗಳಲ್ಲಿ ಸಹಕರಿಸುವ ಮೂಲಕ ರಾಜ್ಯಪರವಾಗಿ ನಿಂತಿದ್ದರು.
ಪರಿಣಿತರು ಇಲಾಖೆಯಿಂದ ದೂರ: ಈಗಾಗಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರಿನ ಕರೇಗೌಡ ಬೇರೆಡೆಗೆ ವರ್ಗವಾಗಿದ್ದಾರೆ. ಇದಲ್ಲದೇ ಇಲಾಖೆಯ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿಯಾಗಿದ್ದ ಶಂಕರ್ ಅವರನ್ನು ಗಣಿ ಕುರಿತು ಮಾಹಿತಿ ಇದ್ದ ಹಿನ್ನೆಲೆಯಲ್ಲಿ ಗಣಿ ಪ್ರದೇಶದಲ್ಲಿ ಆರ್ ಆ್ಯಂಡ್ ಆರ್ ನೋಡಿಕೊಳ್ಳಲು ನಿವೃತ್ತಿ ಅವಧಿಯಲ್ಲೂ ಅವರ ಸೇವೆ ಪಡೆಯಲಾಗಿತ್ತು. ಇದೀಗ ಅವರು ಕೂಡ ಇಲಾಖೆ ಬಿಟ್ಟಿದ್ದಾರೆ. ಹೀಗೆ ಗಣಿ ವಿಷಯದಲ್ಲಿ ಪರಿಣಿತಿ ಪಡೆದವರು ಹಾಗೂ ಸಿಇಸಿ, ಸಿಬಿಐಗೆ ರಾಜ್ಯದ ಪರ ಅಗತ್ಯ ಮಾಹಿತಿ ಒದಗಿಸುತ್ತಿರುವ ಅಧಿಕಾರಿಗಳು ಇಲಾಖೆಯಿಂದ ದೂರವಾಗುತ್ತಿದ್ದಾರೆ.
ನಿರ್ದೇಶಕರ ಬದಲಾವಣೆ ಸಾಧ್ಯತೆ: ಬಿಹಾರ ಐಎಎಸ್ ಕೇಡರ್ ಅಧಿಕಾರಿಯಾದ ಶ್ರೀನಿವಾಸ್ ಅವರನ್ನು ಕೇಂದ್ರ ಸರ್ಕಾರ ಡೆಪ್ಯೂಟೇಷನ್ ಮೇಲೆ ರಾಜ್ಯಕ್ಕೆ ವರ್ಗಾವಣೆ ಮಾಡಿತ್ತು. ಅವರು 7 ವರ್ಷದಿಂದ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2 ಬಾರಿ ಡೆಪ್ಯೂಟೇಷನ್ ಅವಧಿಯನ್ನು ರಾಜ್ಯ ಸರ್ಕಾರ ವಿಸ್ತರಿಸಿದೆ. ಅಲ್ಲದೇ ಶ್ರೀನಿವಾಸ್ ಹಾಗೂ ಬಳ್ಳಾರಿ ಜಿಲ್ಲಾಧಿಕಾರಿ ಆಮ್ಲಾನ್ ಅದಿತ್ಯ ಬಿಸ್ವಾಸ್ ಅವರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡುವುದಿಲ್ಲ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿತ್ತು. ಆದರೆ ಈಗ ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ ಈಗಾಗಲೇ 2 ಬಾರಿ ಡೆಪ್ಯೂಟೇಷನ್ ಅವಧಿ ವಿಸ್ತರಿಸಿರುವುದರಿಂದ ಸಿಇಸಿ ಅನುಮತಿ ಪಡೆದು ಅವರನ್ನು ವರ್ಗಾವಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ಕೆಲವೇ ದಿನಗಳಲ್ಲಿ ಅವರ ವರ್ಗಾವಣೆಯಾದರೂ ಆಶ್ಚರ್ಯವಿಲ್ಲ.
ನಿರ್ದೇಶಕ ಸ್ಥಾನಕ್ಕೆ ಬಳ್ಳಾರಿ ಡಿಸಿ ಹೆಸರು: ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ನಿರ್ದೇಶಕರನ್ನಾಗಿ ಐಎಎಸ್ ಅಧಿಕಾರಿಯನ್ನೇ ನೇಮಿಸಬೇಕಾಗುತ್ತದೆ. ಆದರೆ ಅದಿರು ಗಣಿಗಾರಿಕೆ ಬಗ್ಗೆ ಹೆಚ್ಚಿನ ಮಾಹಿತಿಯುಳ್ಳ ಅಧಿಕಾರಿ ಈ ಸ್ಥಾನಕ್ಕೆ ಅತ್ಯಗತ್ಯ. ಕಾರಣ ಸುಪ್ರೀಂ ಕೋರ್ಟ್ನಿಂದ ನೇಮಕವಾದ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಿಇಸಿ ಕೆಂಗಣ್ಣಿಗೆ ಗುರಿಯಾಗದಂತೆ ಕರ್ತವ್ಯ ನಿರ್ವಹಿಸಲು ಅದಿರು ಗಣಿಗಾರಿಕೆ ಬಗ್ಗೆ ಎಲ್ಲ ಮಾಹಿತಿ, ತಾಂತ್ರಿಕ ಮಾಹಿತಿ ಹೊಂದಿರುವ ಅಧಿಕಾರಿ ಬೇಕು. ಹೀಗಾಗಿ ತೆರವಾಗುವ ನಿರ್ದೇಶಕ ಸ್ಥಾನಕ್ಕೆ ಬಳ್ಳಾರಿ ಜಿಲ್ಲಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರ ಹೆಸರು ಕೇಳಿ ಬಂದಿತ್ತು ಎನ್ನುತ್ತವೆ ಮೂಲಗಳು. ಆದರೆ ಬಿಸ್ವಾಸ್ ಈ ಬಗ್ಗೆ ಆಸಕ್ತಿ ತೋರಿಲ್ಲ ಎಂಬ ಮಾತುಗಳೂ ಇವೆ.
ನಿರ್ದೇಶಕರ ಆಯ್ಕೆ ಕುತೂಹಲ: ಒಂದು ವೇಳೆ ಶ್ರೀನಿವಾಸ್ ಅವರು ವರ್ಗವಾದಲ್ಲಿ, ನಿರ್ದೇಶಕ ಸ್ಥಾನಕ್ಕೆ ಯಾರನ್ನು ರಾಜ್ಯ ಸರ್ಕಾರ ನೇಮಿಸುತ್ತದೆ ಎಂಬುದು ಅತ್ಯಂತ ಚರ್ಚೆಯ ವಿಷಯವಾಗಿದೆ. ನಿರ್ದೇಶರಾಗಿ ಬರುವ ಅಧಿಕಾರಿ ಇಡೀ ಗಣಿಗಾರಿಕೆಯನ್ನೇ ನಿಯಂತ್ರಿಸಿಬೇಕಾದ ಗುರುತರ ಜವಾಬ್ದಾರಿ ಹೊತ್ತು, ಗಣಿಗಾರಿಕೆಯನ್ನು ನಿಯಂತ್ರಣದಲ್ಲಿಡುವುದು, ತನಿಖೆಗೆ ಅಗತ್ಯ ಮಾಹಿತಿ ಒದಗಿಸಲು, ಅದಿರು ಗಣಿಗಾರಿಕೆ ಬಗ್ಗೆ ಹೆಚ್ಚಿನ ಮಾಹಿತಿ, ಅರಿವು ಹೊಂದಿರ ಬೇಕಿದೆ. ಆದ್ದರಿಂದ ನಿರ್ದೇಶಕ ಸ್ಥಾನಕ್ಕೆ ದಕ್ಷ ಅಧಿಕಾರಿ ನೇಮಿಸಿ, ಸಿಇಸಿ ಸೈ ಎನಿಸಿಕೊಳ್ಳಲು ರಾಜ್ಯ ಸರ್ಕಾರ ಯಾರನ್ನು ಆಯ್ಕೆ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕು.
-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement