ಜಲಾಶಯ ಭರ್ತಿ: ನೀರು ಸದ್ಬಳಕೆ ಎಂದು?
ಹೊಸಪೇಟೆ: ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯ ಈ ಬಾರಿ ಅವಧಿಗೂ ಮುನ್ನವೇ ಭರ್ತಿಯಾಗಿದ್ದು, 10 ದಿನಗಳಿಂದ ತುಂಬಿ ಹರಿಯುತ್ತಿದೆ. ಜಲಾಶಯದ ಎಲ್ಲ 33 ಕ್ರಸ್ಟ್ಗೇಟ್ಗಳ ಮೂಲಕ ಲಕ್ಷಾಂತರ ಕ್ಯುಸೆಕ್ ನೀರನ್ನು ನದಿಗೆ ಹರಿದು ಬಿಡಲಾಗುತ್ತಿದೆ. ನದಿಗೆ ಹರಿಯುವ ನೀರು ರಾಜ್ಯದ ಪಾಲಿಗೆ ವ್ಯರ್ಥವಾಗಿ ಹರಿಯುತ್ತದೆ ಹೊರತು, ಜಲಾಶಯದ ಪಕ್ಕದ ಕೆರೆಗಳಿಗೆ ಆ ನೀರನ್ನು ತುಂಬಿಸುವ ಯಾವುದೇ ಯೋಜನೆಗಳನ್ನು ಸರ್ಕಾರ ಕೈಗೊಳ್ಳದಿರುವುದು ದುರಂತ ಸಂಗತಿ.
ಜಲಾಶಯದಿಂದ ಜು. 22ರಿಂದ ಆ. 1ರ ವರೆಗೆ 79 ಟಿಎಂಸಿ ನೀರನ್ನು ನದಿಗೆ ಹರಿದು ಬಿಡಲಾಗಿದೆ. ಜಲಾಶಯದ 32 ಟಿಎಂಸಿ ಹೂಳು ತೆಗೆಯಲು ಸಾಧ್ಯವಿಲ್ಲ. ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತದೆ. ತಜ್ಞರ ಸಮಿತಿ ರಚಿಸಲಾಗಿದ್ದು, ಸಮಿತಿಯ ಅಂತಿಮ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿಧಾನಸಭೆ ಅಧಿವೇಶನದಲ್ಲಿ ನೀರಾವರಿ ಸಚಿವರು ಹೇಳಿಕೆ ನೀಡಿದ್ದಾರೆ. ಜಲಾಶಯದ ಹೂಳು ತೆಗೆಯುವುದು ಕನಸಿನ ಮಾತು. ಜಲಾಶಯದ ಅಕ್ಕಪಕ್ಕದಲ್ಲಿರುವ ತಾಲೂಕುಗಳಲ್ಲಿನ ನೂರಾರು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನಾದರೂ ಕೈಗೊಳ್ಳುವ ಮೂಲಕ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿ ರೈತ ಬದುಕಿಗೆ ಆಸರೆಯಾಗಬೇಕೆನ್ನುವುದು ರೈತರ ಒತ್ತಾಸೆ.
ಇಚ್ಛಾಶಕ್ತಿ ಕೊರತೆ: ಈ ವರ್ಷ ಜಿಲ್ಲೆಯ ಜನರು ಇದುವರೆಗೂ ಒಂದು ದೊಡ್ಡ ಮಳೆ ಕಂಡಿಲ್ಲ. ಆದರೂ ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಕೆಲ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿದಿದ್ದರಿಂದ ತುಂಗಭದ್ರಾ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿದೆ. ಜಲಾಶಯದ ತುಂಬಿದಾಗ ಜಿಲ್ಲೆಯ ಮಂತ್ರಿಗಳು ಹಾಗೂ ಶಾಸಕರು ಜಲಾಶಯಕ್ಕೆ ಬಾಗಿನ ಅರ್ಪಿಸಿ ಕೈ ತೊಳೆದುಕೊಳ್ಳುತ್ತಾರೆ. ಆದರೆ ಜಲಾಶಯ ತುಂಬಿ ನಷ್ಟವಾಗಿ ನದಿಗೆ ಹರಿಯುವ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಯೋಚನೆ ಇಲ್ಲದಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಯಾವುದೇ ಯೋಜನೆಗಳನ್ನು, ಪ್ರಸ್ತಾವನೆಗಳನ್ನು ಜಿಲ್ಲೆಯ ಮಂತ್ರಿಗಳಾಗಲಿ, ಶಾಸಕರಾಗಲಿ ಸರ್ಕಾರಕ್ಕೆ ಸಲ್ಲಿಸಲು ಮುಂದಾಗದಿರುವುದು ವಿಪರ್ಯಾಸ.
ಹುಸಿ ಭರವಸೆ: ಯೋಜನೆಗಳನ್ನು ರೂಪಿಸುತ್ತೇವೆ ಎಂದು ಹುಸಿ ಭರವಸೆ ನೀಡುವ ಜನಪ್ರತಿನಿಧಿಗಳು 4-5 ವರ್ಷಗಳಿಂದ ಇದೇ ರೀತಿ ಹೇಳಿಕೆ ನೀಡುತ್ತಾರೆ. ಆದರೆ ಈ ನಿಟ್ಟಿನಲ್ಲಿ ಯಾರೊಬ್ಬರೂ ಕಾರ್ಯೋನ್ಮುಖರಾಗಿಲ್ಲ ಎಂಬುದು ಈ ಭಾಗದ ಜನರು, ರೈತರ ದೂರು.
ಆರಂಭದಲ್ಲಿ ಜಲಾಶಯದ ನೀರಿನ ಒಟ್ಟು ಸಾಮರ್ಥ್ಯ 132.437 ಟಿಎಂಸಿ ಆಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ 32 ಟಿಎಂಸಿ ಪ್ರಮಾಣದಷ್ಟು ಹೂಳು ತುಂಬಿ 100.855 ಟಿಎಂಸಿಗೆ ಇಳಿದಿದೆ. ಇನ್ನೂ 2 ತಿಂಗಳು ಜಲಾಶಯದಿಂದ ಸಾಕಷ್ಟು ಪ್ರಮಾಣದ ನೀರು ನದಿಗೆ ಹರಿಯುತ್ತದೆ.
ಜಲಾಶಯ ಭರ್ತಿಯಾದಾಗ ಜಲಾಶಯ ಹಿನ್ನೀರಿನ ಪ್ರದೇಶಗಳಾದ ಹಡಗಲಿ, ಹಗರಿಬೊಮ್ಮನಹಳ್ಳಿ, ಹೊಸಪೇಟೆಯ ಮರಿಯಮ್ಮನಹಳ್ಳಿ ಹೋಬಳಿ, ಗಾದಿಗನೂರು, ಪಾಪಿನಾಯಕನಹಳ್ಳಿ ಸೇರಿದಂತೆ ಸಂಡೂರು ತಾಲೂಕಿನ ಕೆಲ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸಿ ನೀರಾವರಿಗೆ ಆದ್ಯತೆ ನೀಡಲು ಇಲ್ಲಿನ ಜನಪ್ರತಿನಿಧಿಗಳು ಮುಂದಾಗಬೇಕಿದೆ.
- ಸಿ.ಕೆ. ನಾಗರಾಜ್
---