ನೀರಿನ ದರ ಇಳಿಸಲು ಒತ್ತಾಯ
ಬಳ್ಳಾರಿ: ಬಳ್ಳಾರಿ ನಗರದಲ್ಲಿ ಕುಡಿಯುವ ನೀರಿನ ಪೂರೈಕೆಗೆ ನೀರಿನ ದರ ಹೆಚ್ಚಿಸಿದ್ದು, ಕೂಡಲೇ ದರವನ್ನು ಹಿಂಪಡೆಯಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ವೇದಿಕೆಯ ಜಿಲ್ಲಾ ಘಟಕವು ಒತ್ತಾಯಿಸಿದೆ.
ಸಾರ್ವಜನಿಕ ಹಿತಾಸಕ್ತಿ ವೇದಿಕೆಯ ಅಧ್ಯಕ್ಷ ವಿ. ಜಯರಾಮ್, ಕಾರ್ಯಾಧ್ಯಕ್ಷ ಪಾರ್ಥಸಾರಥಿ, ಪ್ರಧಾನ ಕಾರ್ಯದರ್ಶಿ ಎಂ. ಚಿದಾನಂದ, ಖಜಾಂಚಿ ಸೌದ್ರಿ ಬಸವರಾಜ, ಸಂಘಟನಾ ಕಾರ್ಯದರ್ಶಿ ಡಾ.ಎಸ್.ವಿ. ಪ್ರಭಾಕರ್ ಅವರು ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಪಾಲಿಕೆಯ ನೂತನ ಪ್ರತಿನಿಧಿಗಳು ಅಧಿಕಾರ ವಹಿಸಿಕೊಂಡ ನಂತರ ನೀರಿನ ದರ ಕಡಿಮೆ ಮಾಡುವುದಾಗಿ ತಿಳಿಸಿದ್ದರು. ಆದರೆ, ನೂತನ ಸದಸ್ಯರು ಅಧಿಕಾರ ಚುಕ್ಕಾಣಿ ಹಿಡಿಯುವುದಕ್ಕೆ ಮೊದಲೇ ಪೌರಾಯುಕ್ತರು ನೀರಿನ ದರ ಹೆಚ್ಚಿಸಿರುವ ಕ್ರಮ ಸರಿಯಲ್ಲ. ಸಾರ್ವಜನಿಕರಿಗೆ ತೀವ್ರ ಹೊರೆಯಾಗಿದ್ದು, ಸೂಚನೆ ಹಿಂಪಡೆಯಲು ಮನವಿ ಮಾಡಿದ್ದಾರೆ. ಇಲ್ಲದೇ ಹೋದಲ್ಲಿ ಅಸಹಕಾರ ಚಳ ವಳಿಯನ್ನು ಪ್ರಾರಂಭಿಸಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.