ಪೂರ್ವಭಾವಿ ಸಭೆ: ಕೈ ಕಾರ್ಯಕರ್ತರ ಕಿತ್ತಾಟ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 2
ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಬಿಟ್ಟು, ಬಂಡಾಯ ಅಭ್ಯರ್ಥಿಯಗಿ ಸ್ಪರ್ಧಿಸಿದ್ದ ಅಭ್ಯರ್ಥಿಯನ್ನು ಕಾಂಗ್ರೆಸ್ನ ಕೆಲ ಮುಖಂಡರು ಬೆಂಬಲಿಸಿದ ಪ್ರಸಂಗ ಕಂಪ್ಲಿಯಲ್ಲಿ ಶುಕ್ರವಾರ ಸಂಜೆ ಕಾಂಗ್ರೆಸ್ ಸಭೆಯಲ್ಲಿ ಪ್ರತಿಧ್ವನಿಸಿತು. ಪಕ್ಷದ ವೀಕ್ಷಕರ ಸಮ್ಮುಖದಲ್ಲಿಯೇ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು, ತೊಡೆ ತಟ್ಟುವ ಹಂತಕ್ಕೆ ತಲುಪಿತು.
ಕಂಪ್ಲಿಯ ಸಾಂಗತ್ರಯ ಸಂಸ್ಕೃತ ಪಾಠ ಶಾಲೆ ಆವರಣದಲ್ಲಿ ಶುಕ್ರವಾರ ಸಂಜೆ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಬಳ್ಳಾರಿ ಲೋಕಸಭಾ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಬಂಡಾಯ ಅಭ್ಯರ್ಥಿಗೆ ಬೆಂಬಲ ನೀಡಿದ ಮುಖಂಡರನ್ನು ವೇದಿಕೆ ಮೇಲೆ ಕೂರಿಸುವುದು ಬೇಡ ಎಂದ ಪಕ್ಷದ ಕೆಲ ಮುಖಂಡರು ವಿರೋಧ ತೋರಿದ ಹಿನ್ನೆಲೆಯಲ್ಲಿ 2 ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆದು, ನೂಕುನುಗ್ಗಲು ನಡೆಯಿತು. ಇದು ನಡೆದದ್ದು, ಪಕ್ಷದ ವೀಕ್ಷಕರು, ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಸಮ್ಮುಖದಲ್ಲೇ.
ಮಾತಿನ ಚಕಮಕಿ: ಗಲಾಟೆ ಹೆಚ್ಚಾದ ಹಿನ್ನೆಲೆಯಲ್ಲಿ ಕೂಡಲೇ ಎದ್ದು ನಿಂತು ಮಾತನಾಡಿದ ಸಚಿವ ಪರಮೇಶ್ವರ ನಾಯ್ಕ, ಪಕ್ಷದಲ್ಲಿ ಯಾವುದೇ ಸಮಸ್ಯೆ ಇದ್ದರೆ ಕುಳಿತು ಚರ್ಚಿಸೋಣ, ಶಾಂತತೆಯಿಂದ ವರ್ತಿಸುವಂತೆ ತಿಳಿಸಿದರೂ, ಎರಡು ಗುಂಪುಗಳ ನಡುವಿನ ಮಾತಿನ ಚಕಮಕಿ ನಿಲ್ಲಲಿಲ್ಲ. ವೀಕ್ಷಕ, ಮಾಜಿ ಸಚಿವ ಸಗೀರ್ ಅಹ್ಮದ್ ಅವರು ಎದ್ದು ನಿಂತು, ಕಂಪ್ಲಿ ಸಮಸ್ಯೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಮುಂದೆ ಹೋಗಿದೆ. ದಿನಾಂಕ ನಿಗದಿ ಮಾಡಿ, ಬೆಂಗಳೂರಿಗೆ ಕೆಪಿಸಿಸಿ ಕಚೇರಿಗೆ ಕರೆಸಿಕೊಂಡು, ಸಮಸ್ಯೆ ಬಗೆಹರಿಸಲಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಕಲ್ಲುಕಂಬ ಪಂಪಾಪತಿ ಮಾತನಾಡಿ, ಕಾಂಗ್ರೆಸ್ ಶಿಸ್ತಿನ ಪಕ್ಷವಾಗಿದ್ದು, ಏನೇ ಸಮಸ್ಯೆ, ಭಿನ್ನಾಭಿಪ್ರಾಯಗಳಿದ್ದರೆ ಕುಳಿತು ಬಗೆಹರಿಸೋಣ ಎಂದು ಹೇಳಿದ ನಂತರ ಪರಿಸ್ಥಿತಿ ತಿಳಿಗೊಂಡಿತು. ಪೊಲೀಸರು ಪರಿಸ್ಥಿತಿ ಶಾಂತಗೊಳಿಸುವಲ್ಲಿ ಸಹಕರಿಸಿದರು.
ಕೆಪಿಸಿಸಿ ವೀಕ್ಷಕ ಮಲ್ಲಿಕಾರ್ಜುನ ನಾಗಪ್ಪ, ಜಿಲ್ಲಾ ಕಾಂಗ್ರೆಸ್ ವೀಕ್ಷಕ ಚಿನ್ನಸ್ವಾಮಿ, ಕೆಪಿಸಿಸಿ ಸದಸ್ಯ ಗೋಪಿನಾಥ, ಕಮಲಾ ಮರಿಸ್ವಾಮಿ, ಬಿಕಾಂ ಮಾಬುಸಾಬ್, ಕೆಪಿಸಿಸಿ ಕಾರ್ಯದರ್ಶಿ ವೆಂಕಟರಾವ್ ಘೋರ್ಪಡೆ, ಮಾಜಿ ಸಂಸದ ಎನ್.ವೈ. ಹನುಮಂತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯೆ ಕೆ.ಎಸ್.ಎಲ್. ಸ್ವಾಮಿ, ಕಾಂಗ್ರೆಸ್ ಮುಖಂಡ ಕೆ. ಶ್ರೀನಿವಾಸರಾವು, ಗಾದಿಲಿಂಗಪ್ಪ, ಗುಜ್ಜಲ ನಾಗರಾಜ್, ಪುರಸಭೆ ಸದಸ್ಯರು ಸೇರಿದಂತೆ ಇತರರು ಇದ್ದರು.