ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಅವಿಶ್ವಾಸ ಗೊತ್ತುವಳಿಗೆ ಕೈ ಸಜ್ಜು?

Mainashree
Updated On : 4 Aug 2013, 1:09 am

ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 3

ಸದ್ಯ ಬಿಎಸ್ಸಾರ್ ತೆಕ್ಕೆಯಲ್ಲಿರುವ ಜಿಲ್ಲಾ ಪಂಚಾಯಿತಿ ಆಡಳಿತವನ್ನು ಹೇಗಾದರೂ ಮಾಡಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಸಿದ್ಧವಾಗಿದ್ದು, ಹಾಲಿ ಬಿಎಸ್ಸಾರ್‌ನ ಜಿಪಂ ಅಧ್ಯಕ್ಷರನ್ನು ಪದಚ್ಯುತಿಗೊಳಿಸಿ, ಜಿಪಂ ಮೇಲೆ ಕಾಂಗ್ರೆಸ್ ಬಾವುಟ ಹಾರಿಸುವ ಉದ್ದೇಶದಿಂದ ಕಾಂಗ್ರೆಸ್‌ನ 15 ಜಿಪಂ ಸದಸ್ಯರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಿದ್ಧತೆ ನಡೆಸಿದ್ದಾರೆ.
ಹೌದು, ಆ. 5ರಂದು ಜಿಪಂ ಅಧ್ಯಕ್ಷ, ಜಿಪಂ ಸಿಇಒಗೆ ಅವಿಶ್ವಾಸ ಗೊತ್ತುವಳಿ ಪತ್ರದ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು 'ಕನ್ನಡಪ್ರಭ'ಕ್ಕೆ ತಿಳಿಸಿವೆ.
ಈಗಾಗಲೇ ಕಾಂಗ್ರೆಸ್‌ನ 15 ಸದಸ್ಯರು ಅವಿಶ್ವಾಸ ಗೊತ್ತುವಳಿ ಪತ್ರಕ್ಕೆ ಸಹಿ ಹಾಕಿದ ಪತ್ರವೂ ಸಿದ್ಧವಾಗಿದೆ. 2ನೇ ಅವಧಿಗೆ ಜಿಪಂ ಅಧ್ಯಕ್ಷರಾಗಿ ಆಯ್ಕೆಯಾಗುವಾಗ ಬಿಎಸ್ಸಾರ್‌ಗೆ ಬೆಂಬಲ ನೀಡಿದ ಕಾಂಗ್ರೆಸ್ ಸದಸ್ಯರೆಲ್ಲರೂ, ಇದೀಗ ಕಾಂಗ್ರೆಸ್‌ನಲ್ಲಿಯೇ ಗುರುತಿಸಿಕೊಂಡಿದ್ದಾರೆ.
ಇದರಿಂದಾಗಿ ಸಹಜವಾಗಿ ಕಾಂಗ್ರೆಸ್ ಸಂಖ್ಯಾಬಲ ಹೆಚ್ಚಾಗಿರುವುದರಿಂದ ಜಿಲ್ಲಾ ಪಂಚಾಯಿತಿಯನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮೊದಲ ಅವಧಿಗೆ ಕಮಲ ತೆಕ್ಕೆಗೆ: 36 ಸಂಖ್ಯಾಬಲದ ಜಿಪಂನಲ್ಲಿ ಕಾಂಗ್ರೆಸ್‌ನ ಚೋರನೂರು ಜಿಪಂ ಸದಸ್ಯ ಭೀಮಾನಾಯ್ಕ್ ಹಗರಿಬೊಮ್ಮನಹಳ್ಳಿ ಶಾಸಕರಾಗಿ ಆಯ್ಕೆಯಾಗಿರುವುದರಿಂದ ಇದೀಗ ಜಿಪಂ ಸದಸ್ಯರ ಸಂಖ್ಯೆ 35ಕ್ಕೆ ಇಳಿದಿದೆ. ಜಿಪಂ ಚುನಾವಣೆ ಅನಂತರ ರೆಡ್ಡಿ ಸಹೋದರರು, ಶ್ರೀರಾಮುಲು ನೇತೃತ್ವದ ಬಿಜೆಪಿ 18, ಕಾಂಗ್ರೆಸ್‌ನ 17 ಹಾಗೂ ಜೆಡಿಎಸ್ 1 ಸದಸ್ಯರ ಬಲ ಹೊಂದಿತ್ತು. ಆಗ ಬಿಜೆಪಿಯು ಜಿಲ್ಲಾ ಪಂಚಾಯಿತಿಯಲ್ಲಿ ಅಧಿಕಾರ ಸ್ಥಾಪಿಸಲು ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್‌ನ ಹಳೆಕೋಟೆಯ ನಾಗರತ್ನಮ್ಮ ಅವರನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಂಡು ಜಿಪಂನಲ್ಲಿ ಅಧಿಕಾರ ಹಿಡಿದಿತ್ತು.
2ನೇ ಅವಧಿಗೆ ಬಿಎಸ್ಸಾರ್‌ನಿಂದ ಅಧ್ಯಕ್ಷರ ಆಯ್ಕೆ: ಬದಲಾದ ರಾಜಕೀಯದಿಂದಾಗಿ ರೆಡ್ಡಿ ಸಹೋದರರು, ಶ್ರೀರಾಮುಲು ಬಿಜೆಪಿಯಿಂದ ದೂರವಾಗಿ ಬಿಎಸ್ಸಾರ್ ಸ್ಥಾಪಿಸಿದ ಹಿನ್ನೆಲೆಯಲ್ಲಿ ಜಿಪಂನನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಬಿಎಸ್ಸಾರ್ ಯಶಸ್ವಿಯಾಯಿತು. ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ ಸಂದರ್ಭದಲ್ಲಿ ಬಿಎಸ್ಸಾರ್‌ಗೆ ಕಾಂಗ್ರೆಸ್‌ನ ಕೆಲ ಸದಸ್ಯರು ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಬಿಎಸ್ಸಾರ್‌ನ ಸುಮಂಗಳಮ್ಮ ಗುಬಾಜಿ ಅಧ್ಯಕ್ಷರಾದರೆ, ಕಾಂಗ್ರೆಸ್‌ನ ಮಮತಾ ಸುರೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಕಾಂಗ್ರೆಸ್‌ನ ಕೆಲ ಸದಸ್ಯರು ಬಿಎಸ್ಸಾರ್‌ಗೆ ಬೆಂಬಲ ನೀಡಿದ್ದರಿಂದ ಕಾಂಗ್ರೆಸ್‌ನಲ್ಲಿ ಗೊಂದಲ ಉಂಟಾಗಿ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಅಂದಿನ ಜಿಪಂ ಸದಸ್ಯ ಎಸ್. ಭೀಮಾನಾಯ್ಕ ವಿರುದ್ಧ ಹರಿಹಾಯ್ದ ಘಟನೆಗಳು ನಡೆದವು.
ಹೆಚ್ಚುತ್ತಿರುವ ಕಾಂಗ್ರೆಸ್ ಬಲ: ಜಿಲ್ಲಾ ಪಂಚಾಯಿತಿ ಎರಡನೇ ಅವಧಿಯ ಅಧ್ಯಕ್ಷರು, ಉಪಾಧ್ಯಕ್ಷರ ಅವಧಿ ಆಯ್ಕೆಯಲ್ಲಿ ಆಂತರಿಕವಾಗಿ ನಡೆದಿದೆ ಎನ್ನಲಾದ ಒಪ್ಪಂದದ ಪ್ರಕಾರ ಒಟ್ಟು 20 ತಿಂಗಳ ಅವಧಿಯಲ್ಲಿ 10 ತಿಂಗಳು ಅಧ್ಯಕ್ಷರಾಗಿ ಬಿಎಸ್ಸಾರ್, ಇನ್ನುಳಿದ 10 ತಿಂಗಳ ಅವಧಿಗೆ ಕಾಂಗ್ರೆಸ್‌ನವರು ಆಗಬೇಕು ಎಂದು ಹೇಳಲಾಗಿತ್ತು.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದು, ಅಲ್ಲದೆ ಈ ಹಿಂದೆ ರೆಡ್ಡಿ ಸಹೋದರರು, ಶ್ರೀರಾಮುಲು ಕಡೆಗೆ ಹೋಗಿದ್ದ ನಾಗರತ್ನಮ್ಮ, ಜೆಡಿಎಸ್‌ನ ಸದಸ್ಯರೊಬ್ಬರು ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಕಾಂಗ್ರೆಸ್ ಬಲ ಹೆಚ್ಚಾಗುತ್ತದೆ. ಅಲ್ಲದೇ ಬಿಜೆಪಿ ಸದಸ್ಯರು ಬಿಎಸ್ಸಾರ್‌ಗೆ ಬೆಂಬಲ ನೀಡುವುದು ದೂರದ ಮಾತು, ಈ ಎಲ್ಲವನ್ನು ಸೂಕ್ಷ್ಮವಾಗಿ ಅವಲೋಕಿಸಿರುವ ಕಾಂಗ್ರೆಸ್‌ನವರು ಜಿಪಂ ಆಡಳಿತವನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಲು ಸುಲಭ ಎಂಬುದು ತಿಳಿದು ಅವಿಶ್ವಾಸ ಗೊತ್ತುವಳಿ ಮಂಡನೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಬಿಎಸ್ಸಾರ್‌ಗೆ ಯೋಚಿಸುವ ಪರಿಸ್ಥಿತಿ ಇಲ್ಲ: ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಹುಟ್ಟಿಕೊಂಡ ಶ್ರೀರಾಮುಲು ನೇತೃತ್ವದ ಬಿಎಸ್ಸಾರ್ ಪಕ್ಷವು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿರುವುದರಿಂದ ಜಿಪಂ ಬಗ್ಗೆ ತಲೆಕೆಡಿಸಿಕೊಳ್ಳುವುದು ಕಷ್ಟ. ಇದಲ್ಲದೇ ಬಿಎಸ್ಸಾರ್‌ಗೆ ಸಂಖ್ಯಾಬಲ ತೋರಿಸುವುದು ತೀರಾ ಕಷ್ಟದ ಕೆಲಸ. ಕಾರಣ ಜಿಪಂನಲ್ಲಿ ಇದೀಗ ಬಿಎಸ್ಸಾರ್‌ನ ಸದಸ್ಯ ಬಲ ಹೆಚ್ಚಿಲ್ಲ.
ಇದರಿಂದಾಗಿ ಜಿಪಂನಲ್ಲಿ ಬಿಎಸ್ಸಾರ್‌ನ ಸದಸ್ಯೆ, ಹಾಲಿ ಅಧ್ಯಕ್ಷೆ ಸುಮಂಗಳಮ್ಮ ಗುಬಾಜಿ ಅವರು ವಿಶ್ವಾಸ ಮತ  ತೋರಿಸುವುದು ತೀರಾ ಕಷ್ಟದ ಕೆಲಸ. ಈ ಎಲ್ಲ ಕಾರಣಗಳಿಂದ ಜಿಲ್ಲಾ ಪಂಚಾಯಿತಿ ಮುಂದಿನ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಪಾಲಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement